ಗಿಫ್ಟ್ ಡೀಡ್ ನೋಂದಾಯಿಸಿದರೆ ಮಾತ್ರ 'ಉಡುಗೊರೆ' ಮಾನ್ಯ: ಹೈಕೋರ್ಟ್
ಗಿಫ್ಟ್ ಡೀಡ್ ನೋಂದಾಯಿಸಿದರೆ ಮಾತ್ರ 'ಉಡುಗೊರೆ' ಮಾನ್ಯ: ಹೈಕೋರ್ಟ್
ನೋಂದಾಯಿತ ಉಡುಗೊರೆ ಪತ್ರ (Registered Gift Deed) ಇಲ್ಲದೆ ಉಡುಗೊರೆ ಮಾನ್ಯವಲ್ಲ. ಮೌಖಿಕ ಉಡುಗೊರೆಯ ಆಧಾರದ ಮೇಲೆ ಭೂಮಿಯ ಮೇಲಿನ ರಾಜ್ಯದ ಹಕ್ಕಿನ ವಾದವನ್ನು ಪಾಟ್ನಾ ಹೈಕೋರ್ಟ್ ತಳ್ಳಿ ಹಾಕಿದೆ.
ಖಾಸಗಿ ಭೂಮಿಯ ಮಾಲೀಕತ್ವದ (Title) ವಿವಾದವನ್ನು ನಿರ್ಧರಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೇ ಸೇರಿದ್ದು, ಇಂತಹ ವಿವಾದಗಳನ್ನು ರಿಟ್ ಅರ್ಜಿಯಲ್ಲಿ ನಿರ್ಧರಿಸಲಾಗುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದ್ದರಿಂದ, ರಿಟ್ ಅರ್ಜಿ ನಿರ್ವಹಣೆ ಯೋಗ್ಯಲ್ಲ (Not Maintainable) ಎಂದು ಹೇಳಿ, ಸಂಬಂಧಪಟ್ಟ ಪಕ್ಷಗಳನ್ನು ಸಿವಿಲ್ ದಾವೆ ಹೂಡಲು ನ್ಯಾಯಾಲಯ ಸೂಚಿಸಿದೆ.
ಪಾಟ್ನಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿಬೇಕ್ ಚೌಧುರಿ ಮತ್ತು ರಾಣಾ ವಿಕ್ರಮ್ ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಿವಿಲ್ ನ್ಯಾಯಾಲಯದಲ್ಲಿ ತನ್ನ ಮಾಲೀಕತ್ವವನ್ನು ಸಾಬೀತುಪಡಿಸಿದ ನಂತರ, ಭೂಮಿಯನ್ನು ಮರಳಿ ಪಡೆಯಲು ಅಥವಾ ಪರಿಹಾರಧನ ಪಡೆಯಲು ಭೂಮಿಯ ಮಾಲೀಕರಿಗೆ ಸ್ವಾತಂತ್ರ್ಯ ನೀಡಿದ ನ್ಯಾಯಾಲಯ, ಸರ್ಕಾರವು ಕಾನೂನುಬಾಹಿರವಾಗಿ ಯಾರನ್ನಾದರೂ ಅವರ ಆಸ್ತಿಯಿಂದ ಹೊರಹಾಕಿದ್ದರೆ, ಅಂತಹ ದಾವೆ ಸಲ್ಲಿಸಲು 30 ವರ್ಷಗಳ ಮಿತಿಯ ಅವಧಿ (Limitation Period) ಅನ್ವಯಿಸುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.
ಇದಲ್ಲದೆ, ಯಾವುದೇ ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ಅಥವಾ ಸೂಕ್ತ ಪರಿಹಾರ ನೀಡದೆ, ಗ್ರಾಮೀಣ ಪ್ರದೇಶದ ವ್ಯಕ್ತಿಯ ಖಾಸಗಿ ಆಸ್ತಿಯನ್ನು ಸರ್ಕಾರ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಭಾರತದ ಸಂವಿಧಾನದ ಅನುಚ್ಛೇದ 300A ಹಾಗೂ ಅನುಚ್ಛೇದ 21ರಿಂದ ರಕ್ಷಿಸಲ್ಪಟ್ಟಿರುವ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಲೆಟರ್ಸ್ ಪೇಟೆಂಟ್ ಅಪೀಲ್ ವಿಚಾರಣೆ ನಡೆಸಿದ ನ್ಯಾಯಪೀಠ "ಸರ್ಕಾರವು ಕಾನೂನುಬಾಹಿರವಾಗಿ ವ್ಯಕ್ತಿಯನ್ನು ಆಸ್ತಿಯಿಂದ ಹೊರಹಾಕಿದಲ್ಲಿ, ಅಂತಹ ದಾವೆಗೆ 30 ವರ್ಷಗಳ ಮಿತಿಯ ಅವಧಿ ಅನ್ವಯಿಸುತ್ತದೆ." ಎಂದು ಸ್ಪಷ್ಟಪಡಿಸಿದೆ.
"ಸರ್ಕಾರದ ದೌರ್ಜನ್ಯ ಮತ್ತು ಆರ್ಥಿಕ ದಬ್ಬಾಳಿಕೆಯಿಂದ ವ್ಯಕ್ತಿಯನ್ನು ರಕ್ಷಿಸುವ ಪ್ರಮುಖ ಭದ್ರತೆಯೇ ಖಾಸಗಿ ಆಸ್ತಿ. ಆದ್ದರಿಂದ, ಯಾವುದೇ ಕಾನೂನುಬದ್ಧ ಪ್ರಕ್ರಿಯೆ ಅಥವಾ ಪರಿಹಾರ ನೀಡದೆ ಸರ್ಕಾರವು ಗ್ರಾಮೀಣ ಪ್ರದೇಶದ ವ್ಯಕ್ತಿಯ ಖಾಸಗಿ ಆಸ್ತಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು, ಸಂವಿಧಾನದ ಅನುಚ್ಛೇದ 300A ಮತ್ತು ಅನುಚ್ಛೇದ 21ರ ಅಡಿಯಲ್ಲಿ ದೊರೆಯುವ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ." ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ
'ಜಲ್ ನಲ್ ಯೋಜನೆ' ಅಡಿಯಲ್ಲಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಹಾಗೂ ಪೈಪ್‌ಲೈನ್ ನಿರ್ಮಾಣಕ್ಕಾಗಿ, ಭೂಸ್ವಾಮಿಯ ಒಪ್ಪಿಗೆ ಪಡೆಯದೇ ಅಥವಾ ಭೂಸ್ವಾಧೀನ ಪ್ರಕ್ರಿಯೆ ಅನುಸರಿಸದೇ ತಮ್ಮ ಜಮೀನಿನಲ್ಲಿ ಕಾಮಗಾರಿ ನಡೆಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ರಿಟ್ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಸರ್ಕಾರವು, ವಿವಾದಿತ ಭೂಮಿಯನ್ನು ಅರ್ಜಿದಾರರ ಪೂರ್ವಜರು ಮೌಖಿಕ ಉಡುಗೊರೆಯ ಮೂಲಕ ಸರ್ಕಾರಕ್ಕೆ ನೀಡಿದ್ದರು ಎಂದು ವಾದಿಸಿತು. ಅಲ್ಲದೆ, ಆ ಭೂಮಿ ಈಗಾಗಲೇ ಶೀರ್ಷಿಕೆ (Title) ಸಂಬಂಧಿತ ದಾವೆಯ ವಿಷಯವಾಗಿದೆ ಎಂದು ತಿಳಿಸಿತು.
ನ್ಯಾಯಾಲಯದ ಅಭಿಪ್ರಾಯ
ಏಕಸದಸ್ಯ ನ್ಯಾಯಾಧೀಶರು, ಅರ್ಜಿದಾರರ ಪೂರ್ವಜರು ಮೌಖಿಕ ಉಡುಗೊರೆಯ ಮೂಲಕ ಭೂಮಿಯನ್ನು ಸರ್ಕಾರಕ್ಕೆ ವರ್ಗಾಯಿಸಿದ್ದಾರೆ ಎಂದು ಪರಿಗಣಿಸಿದ್ದು ಸರಿಯಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ನ್ಯಾಯಾಲಯ ಹೀಗೆ ಸ್ಪಷ್ಟಪಡಿಸಿದೆ:
"ಉಡುಗೊರೆಯ ಮೂಲಕ ಆಸ್ತಿ ವರ್ಗಾವಣೆ 'ಆಸ್ತಿ ವರ್ಗಾವಣೆ ಕಾಯ್ದೆ' (Transfer of Property Act)ಗೆ ಒಳಪಟ್ಟಿದ್ದು, ಅದು ಮಾನ್ಯವಾಗಬೇಕಾದರೆ ನೋಂದಾಯಿತ ಉಡುಗೊರೆ ಪತ್ರ (Registered Gift Deed) ಕಡ್ಡಾಯವಾಗಿರಬೇಕು. ಜೊತೆಗೆ, ದಾನಿಯು ಸ್ವಯಂಪ್ರೇರಿತವಾಗಿ ಆಸ್ತಿಯನ್ನು ಹಸ್ತಾಂತರಿಸುವ ಉದ್ದೇಶ ಹೊಂದಿರಬೇಕು ಮತ್ತು ಸ್ವೀಕರಿಸುವವರು ಅದನ್ನು ಅಂಗೀಕರಿಸಿರಬೇಕು."
ನೋಂದಾಯಿತ ಉಡುಗೊರೆ ಪತ್ರದ ಜಾರಿ ಮತ್ತು ಅದರ ಸ್ವೀಕಾರ ನಡೆದಿದೆಯೇ ಎಂಬುದು ವಾಸ್ತವಾಂಶಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದ್ದು, ಅದನ್ನು ರಿಟ್ ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ವಿವಾದಿತ ಭೂಮಿ ಈಗಾಗಲೇ ವಿಭಜನೆ (Partition) ದಾವೆಯ ವಿಷಯವಾಗಿರುವುದರಿಂದ, ಅಂತಿಮ ಡಿಕ್ರಿ ಹೊರಬರುವವರೆಗೆ ಅರ್ಜಿದಾರರ ಏಕೈಕ ಮಾಲೀಕತ್ವವನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಹೀಗಾಗಿ, ಸಿವಿಲ್ ನ್ಯಾಯಾಲಯದಲ್ಲಿ ತನ್ನ ಮಾಲೀಕತ್ವವನ್ನು ಸ್ಥಾಪಿಸಿದ ನಂತರ ಮಾತ್ರ, ಅರ್ಜಿದಾರರು ಭೂಮಿಯನ್ನು ಮರಳಿ ಪಡೆಯಲು ಅಥವಾ ಸೂಕ್ತ ಪರಿಹಾರಧನ ಪಡೆಯಲು ಕ್ರಮ ಕೈಗೊಳ್ಳಬಹುದು ಎಂದು ಹೇಳಿ ಮೇಲ್ಮನವಿಯನ್ನು ವಿಲೇವಾರಿ ಮಾಡಿತು.
ಈ ಮೊದಲು, ದೆಹಲಿ ಹೈಕೋರ್ಟ್ ಕೂಡ ಆಸ್ತಿ ವರ್ಗಾವಣೆ ಕಾಯ್ದೆ, 1882ರ ಸೆಕ್ಷನ್ 123ರ ಪ್ರಕಾರ ನೋಂದಾಯಿತ ಉಡುಗೊರೆ ಪತ್ರವಿಲ್ಲದೆ ಸ್ಥಿರಾಸ್ತಿಯ ಮೌಖಿಕ ಉಡುಗೊರೆಯಿಂದ ಸ್ವೀಕರಿಸುವವರಿಗೆ ಯಾವುದೇ ಮಾಲೀಕತ್ವದ ಹಕ್ಕು ಉಂಟಾಗುವುದಿಲ್ಲ ಎಂದು ತೀರ್ಪು ನೀಡಿತ್ತು.
ಪ್ರಕರಣದ ಶೀರ್ಷಿಕೆ: ಸಂತೋಷ್ ಕುಮಾರ್ ಈಶ್ವರ್ ವಿರುದ್ಧ ಬಿಹಾರ ರಾಜ್ಯ
ಪಟ್ನಾ ಹೈಕೋರ್ಟ್
Letters Patent Appeal No. 303 of 2024