ಬಹುಪತ್ನಿ ವಲ್ಲಭರಿಗೆ ಸರ್ಕಾರಿ ಸೌಲಭ್ಯ ಬಂದ್; ಸರ್ಕಾರಿ ನೌಕರರ ವಜಾ: ಸೇವಾ ನಿಯಮಕ್ಕೆ ತಿದ್ದುಪಡಿಯ ಎಚ್ಚರಿಕೆ ನೀಡಿದ ಸರ್ಕಾರ
ಬಹುಪತ್ನಿ ವಲ್ಲಭರಿಗೆ ಸರ್ಕಾರಿ ಸೌಲಭ್ಯ ಬಂದ್; ಸರ್ಕಾರಿ ನೌಕರರ ವಜಾ: ಸೇವಾ ನಿಯಮಕ್ಕೆ ತಿದ್ದುಪಡಿಯ ಎಚ್ಚರಿಕೆ ನೀಡಿದ ಸರ್ಕಾರ
ಬಹುಪತ್ನಿತ್ವ ಪದ್ಧತಿಯನ್ನು ಅನುಸರಿಸು ವವರು ರಾಜ್ಯ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯ ಪಡೆಯದಂತೆ ನಿರ್ಬಂಧಿಸಲು ಹಾಗೂ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮದುವೆಯಾಗಿರುವ ಸರ್ಕಾರಿ ನೌಕರರನ್ನು ವಜಾಗೊಳಿಸುವುದಾಗಿ ಅಸ್ಸಾಂ ಸರ್ಕಾರ ಪ್ರಕಟಿಸಿದೆ.
ಹಣಕಾಸು ಸಚಿವ ಜಯಂತ ಮಲ್ಲಾ ಬರುವಾ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. 'ಬಹುಪತ್ನಿತ್ವ ಅನುಸರಿಸುವ ಪುರುಷರು ಸರ್ಕಾರದ ಕಲ್ಯಾಣ ಕಾರ್ಯಕ್ರಮ ಗಳ ಸೌಲಭ್ಯ ಪಡೆಯಲು ಅನರ್ಹರು ಎಂಬ ನಿಯಮ ವನ್ನು ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಸಲುವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ' ಎಂದು ಬರುವಾ ಹೇಳಿದರು.
ಬಹುಪತ್ನಿತ್ವವನ್ನು ಅನುಸರಿಸುವ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲು, 1964ರ ಅಸ್ಸಾಂ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಪ್ರಕಟಿಸಿದರು.
'ಕ್ರಿಮಿನಲ್ ಕಾನೂನಿನಡಿಯಲ್ಲಿ ಬರುವ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿ ಸರ್ಕಾರದ ಯೋಜನೆಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಸಮಗ್ರತೆ ಮತ್ತು ಜವಾಬ್ದಾರಿಯುತ ನಾಗರಿಕ ಪ್ರಜ್ಞೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಬೇಕು' ಎಂದೂ ಅವರು ಹೇಳಿದರು.