ಸಿಗರೇಟ್ ಸೇದಿದವರ ವಿರುದ್ಧ ಕ್ರಮ ಕೈಗೊಳ್ಳದ ಖಾಕಿ: ಜಡ್ಜ್ ಜೊತೆ ಅನುಚಿತ ವರ್ತನೆಗೆ ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಸಿಗರೇಟ್ ಸೇದಿದವರ ವಿರುದ್ಧ ಕ್ರಮ ಕೈಗೊಳ್ಳದ ಖಾಕಿ: ಜಡ್ಜ್ ಜೊತೆ ಅನುಚಿತ ವರ್ತನೆಗೆ ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ಸಿಗರೇಟ್ ಸೇದುವವರ ವಿರುದ್ಧ ಕ್ರಮ ಕೈಗೊಳ್ಳದ ಖಾಕಿ. ಈ ಬಗ್ಗೆ ಕ್ರಮಕ್ಕೆ ಸೂಚಿಸಿದ ನ್ಯಾಯಾಧೀಶರ ಜೊತೆ ಅನುಚಿತ ವರ್ತನೆ ತೋರಿ ಅವರ ಮೊಬೈಲ್ ವಶಪಡಿಸಿಕೊಳ್ಳಲು ಮುಂದಾಗಿ ಉಡಾಫೆ ನಡವಳಿಕೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ.
ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆಯ ವ್ಯಾಪ್ತಿಯ ಅ.ನ.ಕೃಷ್ಣರಾವ್ ವೃತ್ತದಲ್ಲಿ. ಈ ವೃತ್ತದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿ ಇದ್ದ ಇಆರ್‌ಎಸ್‌ಎಸ್ (ERSS) ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಜಗದೀಶ್ ಸಸ್ಪೆಂಡ್ ಗೊಳಗಾದ ಆರೋಪಿ.
ಅನಕೃ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗದೀಶ್ ಅವರಿಗೆ ಸ್ಥಳೀಯ ನ್ಯಾಯಾಧೀಶರಾದ ಲೋಕೇಶ್ ಸೂಚಿಸಿದ್ದರು. ಆದರೆ, ಜಗದೀಶ್ ನ್ಯಾಯಾಧೀಶರ ಸೂಚನೆಯನ್ನು ನಿರ್ಲಕ್ಷಿಸಿ, ಉದ್ಧಟತನದಿಂದ ವರ್ತಿಸಿದ್ದರು.
ಈ ಸಂದರ್ಭದಲ್ಲಿ ನಡೆದ ವಾಗ್ವಾದದಲ್ಲಿ ಪೊಲೀಸ್ ಸಿಬ್ಬಂದಿ ಜಗದೀಶ್ ನ್ಯಾಯಾಧೀಶರ ಮೊಬೈಲ್ ಫೋನನ್ನೇ ವಶಪಡಿಸಲು ಮುಂದಾದರು. ಸ್ಥಳದಲ್ಲಿದ್ದ ನ್ಯಾಯಾಲಯದ ಸಿಬ್ಬಂದಿ ಮತ್ತು ಇತರರು ಮಧ್ಯಪ್ರವೇಶಿಸಿ ಬುದ್ದಿ ಮಾತು ಹೇಳಿದರೂ ಪೊಲೀಸ್ ಸಿಬ್ಬಂದಿ ಜಗದೀಶ್, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ಸಮರ್ಥನೆಗೆ ಮುಂದಾಗಿದ್ದರು.
ನ್ಯಾಯಾಂಗದ ಪ್ರತಿನಿಧಿಯಾದ ನ್ಯಾಯಾಧೀಶರೊಂದಿಗೆ ಅಸಭ್ಯವಾಗಿ ವರ್ತಿಸಿ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವುದು. ಕರ್ತವ್ಯದ ಸಮಯದಲ್ಲಿ ಇಆರ್‌ಎಸ್‌ಎಸ್ ವಾಹನವನ್ನು ಬಳಸದೇ, ಖಾಸಗಿ ವಾಹನದಲ್ಲಿ ತೆರಳಿರುವುದು. ಹಾಗೂ ವೃತ್ತಿಪರ ಮೌಲ್ಯಗಳನ್ನು ಮರೆತು ಬೇಜವಾಬ್ದಾರಿತನ ತೋರಿರುವುದು. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಜಗದೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.