ಎರಡನೇ ಪತ್ನಿಯೂ ಅಪಘಾತ ವಿಮಾ ಪರಿಹಾರಕ್ಕೆ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಎರಡನೇ ಪತ್ನಿಯೂ ಅಪಘಾತ ವಿಮಾ ಪರಿಹಾರಕ್ಕೆ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತಿಯ ಮೋಟಾರು ಅಪಘಾತ ವಿಮಾ ಪರಿಹಾರಕ್ಕೆ ಎರಡನೇ ಪತ್ನಿಯೂ ಅರ್ಹರಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ದಾವಣಗೆರೆಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ ಮೃತರ ಪತ್ನಿ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ರಸ್ತೆ ಅಪಘಾತಗಳಲ್ಲಿ ಪರಿಹಾರ ಘೋಷಣೆ ಮಾಡುವಾಗ ನ್ಯಾಯಾಲಯಗಳು ಮೃತರ ಅವಲಂಬಿತರನ್ನು ಪರಿಗಣಿಸಬೇಕಾಗುತ್ತದೆ. ಸದ್ರಿ ಪ್ರಕರಣದಲ್ಲಿ ಮೃತರ ಎರಡನೇ ಪತ್ನಿ ಮತ್ತು ಮಕ್ಕಳಿಗೂ ಪರಿಹಾರದ ಪಾಲು ದೊರೆಯಬೇಕು ಎಂದು ತೀರ್ಪು ನೀಡಿದ ನ್ಯಾಯಪೀಠ, ಪರಿಹಾರದ ಮೊತ್ತವನ್ನು 15 ಲಕ್ಷದಿಂದ ₹30 ಲಕ್ಷಕ್ಕೆ ಏರಿಸಿದೆ.
ಈ ಪರಿಹಾರದಲ್ಲಿ ಮೃತರ ಎರಡನೇ ಪತ್ನಿ ಮತ್ತು ಮಗಳಿಗೆ ಪಾಲು ಇದೆ ಎಂಬುದನ್ನು ಸ್ಪಷ್ಟಪಡಿಸಿದ ನ್ಯಾಯಪೀಠ, ದಾವೆ ದಾಖಲಿಸಿದ ದಿನದಿಂದ ಶೇಕಡಾ 9ರ ಬಡ್ಡಿದರದಲ್ಲಿ ಈ ಪರಿಹಾರ ಮೊತ್ತವನ್ನುನೀಡುವಂತೆ ವಿಮಾ ಕಂಪನಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ವಿವರ
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ನಂದಿಗಾವಿ ಗ್ರಾಮದ ಪಾಂಡುರಂಗಪ್ಪ 2016ರ ಮಾರ್ಚ್ 9 ರಂದು ರಾತ್ರಿ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಆಲ್ಟೊ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು.
ಮೃತರ ಮೊದಲ ಪತ್ನಿ ಆಶಾ ಮತ್ತು ತಾಯಿ ಮಹಾಂತಮ್ಮ ಪರಿಹಾರ ಕೋರಿ ಮೋಹಾರು ವಾಹನಗಳ ಪರಿಹಾರ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ದಾವೆಯಲ್ಲಿ ಮೃತರಿಗೆ ಗೀತಾ ಎಂಬ ಎರಡನೇ ಪತ್ನಿ ಹಾಗೂ ಖುಷಿ ಎಂಬ ಅಪ್ರಾಪ್ತ ವಯಸ್ಸಿನ ಮಗಳು ಇರುವುದನ್ನು ದಾಖಲಿಸಲಾಗಿತ್ತು. ಅದರಂತೆ ಅವರನ್ನೂ ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ದಾವಣಗೆರೆಯ ಸಿವಿಲ್ ನ್ಯಾಯಾಲಯವು “ಕೌಟುಂಬಿಕ ಸಂಬಂಧಗಳ ಕಾನೂನು ಬದ್ಧತೆಯನ್ನು ನಿರ್ಧರಿಸುವುದು ಈ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಒಟ್ಟು 8 ಜನ ಆಶ್ರಿತರಿಗೆ ₹15.10 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು. ಆದರೆ, ಪರಿಹಾರದ ಮೊತ್ತವನ್ನು ಪರಸ್ಪರ ಹಂಚಿಕೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಮೊದಲ ಪತ್ನಿ ಮತ್ತು ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ: ಶ್ರೀಮತಿ ಆಶಾ ವಿರುದ್ಧ ರಾಮಕೃಷ್ಣ ಎಸ್. ಘಾಟ್ಗೆ
ಕರ್ನಾಟಕ ಹೈಕೋರ್ಟ್, ಎಂಎಫ್‌ಎ 4119/2021 Dated 16-06-2026