ಡಿಕ್ರಿ ತಪಶೀಲು ಆಸ್ತಿ ಮೇಲಿನ ಹಕ್ಕು: ನೇರ ಅಮಲ್ಜಾರಿ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ಹಸಿರು ನಿಶಾನೆ
ಡಿಕ್ರಿ ತಪಶೀಲು ಆಸ್ತಿ ಮೇಲಿನ ಹಕ್ಕು: ನೇರ ಅಮಲ್ಜಾರಿ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ಹಸಿರು ನಿಶಾನೆ
ಡಿಕ್ರಿ ತಪಶೀಲು ಆಸ್ತಿಯ ಮೇಲಿನ ಹಕ್ಕು ಪಡೆದ ವ್ಯಕ್ತಿಯು ಸಿವಿಲ್ ಪ್ರಕ್ರಿಯಾ ಸಂಹಿತೆ (CPC) ಕಲಂ 146ರ ಅಡಿಯಲ್ಲಿ ಅಮಲ್ಜಾರಿ ಪ್ರಕ್ರಿಯೆಯನ್ನು ಮುಂದುವರಿಸಬಹುದು; ಅದಕ್ಕಾಗಿ ಮೊದಲು ಆದೇಶ XXI ನಿಯಮ 16ರ ಅಡಿಯಲ್ಲಿ ಬದಲಿ (Substitution) ಪಡೆಯುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ
ಕೇರಳ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಡಿಕ್ರಿ ತಪಶೀಲು (Decree Schedule) ಆಸ್ತಿಯ ಮೇಲಿನ ಹಕ್ಕನ್ನು ಅಥವಾ ಆಸಕ್ತಿಯನ್ನು (Interest) ಉತ್ತರಾಧಿಕಾರ, ವಿಲ್ ಅಥವಾ ಹಸ್ತಾಂತರದ ಮೂಲಕ ಪಡೆದ ವ್ಯಕ್ತಿಯು, ಡಿಕ್ರಿಯನ್ನು ನೀಡಿದ ನ್ಯಾಯಾಲಯದಿಂದ ಮೊದಲು ಆದೇಶ XXI ನಿಯಮ 16ರ ಅಡಿಯಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಳ್ಳದೆ, CPC ಕಲಂ 146 ಹಾಗೂ ಆದೇಶ XXI ನಿಯಮ 16ರ ವಿವರಣೆಯ (Explanation) ಆಧಾರದ ಮೇಲೆ ನೇರವಾಗಿ ಅಮಲ್ಜಾರಿ ನ್ಯಾಯಾಲಯದಲ್ಲೇ (Executing Court) ಜಾರಿ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ತೀರ್ಪು ನೀಡಿದೆ.
ಈ ತೀರ್ಪಿನ ಮೂಲಕ ಕಾಶಿ ಮಠ ಸಂಸ್ಥಾನದ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ, ದಶಕಕ್ಕೂ ಹೆಚ್ಚು ಕಾಲ ಬಾಕಿ ಉಳಿದಿದ್ದ ಜಾರಿ ಪ್ರಕ್ರಿಯೆಯನ್ನು ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿ ಈಶ್ವರನ್ ಎಸ್. ಅವರ ಪೀಠವು, "ಆದೇಶ XXI ನಿಯಮ 16, ಅದರ ವಿವರಣೆ ಹಾಗೂ CPC ಕಲಂ 146 ಅನ್ನು ಒಟ್ಟಾಗಿ ಓದಿದಾಗ, ಡಿಕ್ರಿಯನ್ನೇ ಹಸ್ತಾಂತರ ಮಾಡದೆ, ಡಿಕ್ರಿ ತಪಶೀಲು ಆಸ್ತಿಯ ಮೇಲಿನ ಹಕ್ಕು ಮಾತ್ರ ವರ್ಗಾವಣೆಯಾಗಿರುವ ಸಂದರ್ಭಗಳಲ್ಲಿ, ಆದೇಶ XXI ನಿಯಮ 16ರ ವಿವರಣೆ ಅನ್ವಯಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಹಕ್ಕು ಪಡೆದ ವ್ಯಕ್ತಿಯು ಡಿಕ್ರಿ ನೀಡಿದ ನ್ಯಾಯಾಲಯದಲ್ಲಿ ಮೊದಲು ಬದಲಿ ಪಡೆಯದೆ, CPC ಕಲಂ 146ರ ಅಡಿಯಲ್ಲಿ ನೇರವಾಗಿ ಜಾರಿ ನ್ಯಾಯಾಲಯದಲ್ಲಿ ಜಾರಿ ಪ್ರಕ್ರಿಯೆಯನ್ನು ಮುಂದುವರಿಸಲು ಅರ್ಹನಾಗಿರುತ್ತಾನೆ" ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಈ ವ್ಯಾಜ್ಯವು ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಸ್ಥಾನಕ್ಕೆ ಸಂಬಂಧಿಸಿದ ಗುರು-ಶಿಷ್ಯರ ನಡುವಿನ ವಿವಾದದಿಂದ ಆರಂಭಗೊಂಡಿತ್ತು. 2000ರಲ್ಲಿ ಶಿಷ್ಯನು ತಾನೇ ನಿಜವಾದ ಮಠಾಧಿಪತಿ ಎಂದು ಹೇಳಿ ದಾವೆ ಹೂಡಿದ್ದನು.
ಆದರೆ ಆ ದಾವೆ ವಜಾಗೊಂಡು, ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಸಲ್ಲಿಸಿದ್ದ ಪ್ರತಿದಾವೆಗೆ (Counter Claim)ನ್ಯಾಯಾಲಯ ಡಿಕ್ರಿ ನೀಡಿತ್ತು. ಆ ಡಿಕ್ರಿಯ ಮೂಲಕ ಶಿಷ್ಯನಿಗೆ ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಶಾಶ್ವತ ತಡೆಯಾಜ್ಞೆ ನೀಡಲಾಗಿದ್ದು, ಮಠದ ದೇವರ ವಿಗ್ರಹಗಳು ಹಾಗೂ ಇತರೆ ಆಸ್ತಿಗಳನ್ನು ಹಿಂತಿರುಗಿಸುವಂತೆ ಆದೇಶಿಸಲಾಗಿತ್ತು.
ಆದರೆ, ತೀರ್ಪಿನ ಜಾರಿ ಪ್ರಕ್ರಿಯೆಯನ್ನು ತೀರ್ಪುಋಣಿ (Judgment Debtor) ನಿರಂತರವಾಗಿ ವಿರೋಧಿಸುತ್ತಾ, ನ್ಯಾಯಾಲಯದ ಅಧಿಕಾರವನ್ನೇ ಪ್ರಶ್ನಿಸಿ, ಹಲವು ವರ್ಷಗಳ ಕಾಲ ವಿಳಂಬಗೊಳಿಸಿದ್ದನು. ಒಂದು ಹಂತದಲ್ಲಿ ಅವನನ್ನು ಪತ್ತೆಹಚ್ಚಲು CBI ತನಿಖೆಯನ್ನೂ ಆದೇಶಿಸಲಾಗಿತ್ತು.
2017ರಲ್ಲಿ ಮೂಲ ಡಿಕ್ರಿದಾರರು ನಿಧನರಾದ ನಂತರ, ಅವರಿಂದ ನಾಮನಿರ್ದೇಶಿತ ಉತ್ತರಾಧಿಕಾರಿಯಾಗಿದ್ದ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರು ಎರ್ನಾಕುಳಂ ಜಾರಿ ನ್ಯಾಯಾಲಯದಲ್ಲಿ ಹೆಚ್ಚುವರಿ ಡಿಕ್ರಿದಾರರಾಗಿ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಿದರು. ಆದರೆ, ಜಾರಿ ನ್ಯಾಯಾಲಯವು ಮೊದಲು ಡಿಕ್ರಿ ನೀಡಿದ ತಿರುಪತಿ ನ್ಯಾಯಾಲಯದಿಂದ ಬದಲಿ ಆದೇಶ ಪಡೆಯಬೇಕು ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.
ಹೈಕೋರ್ಟ್‌ನ ತೀರ್ಪು
ಹೈಕೋರ್ಟ್, ಜಾರಿ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, 1976ರ ತಿದ್ದುಪಡಿಯ ಮೂಲಕ ಸೇರಿಸಲಾದ ಆದೇಶ XXI ನಿಯಮ 16ರ ವಿವರಣೆ CPC ಕಲಂ 146ರ ಅನ್ವಯವನ್ನು ಉಳಿಸಿಕೊಂಡಿದೆ ಎಂದು ತಿಳಿಸಿತು.
ನ್ಯಾಯಾಲಯದ ಅಭಿಪ್ರಾಯೋಕ್ತಿ:
ಡಿಕ್ರಿಯನ್ನೇ ಹಸ್ತಾಂತರ ಮಾಡಿದರೆ ಮಾತ್ರ ಡಿಕ್ರಿ ನೀಡಿದ ನ್ಯಾಯಾಲಯದಲ್ಲಿ ಆದೇಶ XXI ನಿಯಮ 16ರ ಅಡಿಯಲ್ಲಿ ಬದಲಿ ಪಡೆಯುವುದು ಅಗತ್ಯ.
ಡಿಕ್ರಿ ತಪಶೀಲು ಆಸ್ತಿಯ ಮೇಲಿನ ಹಕ್ಕು ಮಾತ್ರ ವರ್ಗಾವಣೆಯಾಗಿದ್ದರೆ, ಉತ್ತರಾಧಿಕಾರಿ ಅಥವಾ ಹಕ್ಕು ಪಡೆದ ವ್ಯಕ್ತಿಯು CPC ಕಲಂ 146ರ ಅಡಿಯಲ್ಲಿ ನೇರವಾಗಿ ಜಾರಿ ನ್ಯಾಯಾಲಯವನ್ನು ಸಂಪರ್ಕಿಸಿ ಜಾರಿ ಪ್ರಕ್ರಿಯೆಯನ್ನು ಮುಂದುವರಿಸಬಹುದು.
ಹೀಗೆ ಮಾಡುವುದು 1976ರ ತಿದ್ದುಪಡಿಯ ಉದ್ದೇಶವಾದ ಅನಗತ್ಯ ಪ್ರಕ್ರಿಯೆಗಳನ್ನು ಕಡಿಮೆ ಮಾಡುವುದು ಮತ್ತು ಒಂದೇ ವಿಷಯಕ್ಕೆ ಅನೇಕ ನ್ಯಾಯಾಂಗ ಕ್ರಮಗಳನ್ನು ತಪ್ಪಿಸುವುದು ಎಂಬ ಉದ್ದೇಶಕ್ಕೆ ಅನುಗುಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ Zila Singh v. Hazari (1979), Raj Kumar v. Sardari Lal (2004) ಹಾಗೂ Vaishno Devi Construction v. Union of India (2022) ಪ್ರಕರಣಗಳ ತೀರ್ಪುಗಳನ್ನು ಹೈಕೋರ್ಟ್ ಅವಲಂಬಿಸಿತು.
ಹಿಂದಿನ ಕೇರಳ ಹೈಕೋರ್ಟ್ ತೀರ್ಪುಗಳು ಅನ್ವಯಿಸುವುದಿಲ್ಲ
Sankarambal v. Lalitha Ganesan (1978) ಹಾಗೂ Mathai v. Joy (1986) ಪ್ರಕರಣಗಳಲ್ಲಿ ನೀಡಿದ್ದ ಹಿಂದಿನ ಕೇರಳ ಹೈಕೋರ್ಟ್ ತೀರ್ಪುಗಳು, ಆದೇಶ XXI ನಿಯಮ 16ರ ವಿವರಣೆ ಹಾಗೂ CPC ಕಲಂ 146ರ ಪರಸ್ಪರ ಸಂಬಂಧವನ್ನು ಪರಿಗಣಿಸಿರಲಿಲ್ಲ. ಆದ್ದರಿಂದ, ಅವು ನಂತರದ ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾಗಿರುವ ಮಟ್ಟಿಗೆ ಬಂಧನಕಾರಿ ಪೂರ್ವನಿದರ್ಶನ (Binding Precedent) ಅಲ್ಲ ಎಂದು ನ್ಯಾಯಾಲಯ ತಿಳಿಸಿತು.
ತೀರ್ಪುಋಣಿಯ ಆಕ್ಷೇಪಣೆ ತಿರಸ್ಕಾರ
2011ರಿಂದ ಜಾರಿಯಾಗದೆ ಉಳಿದಿದ್ದ ಡಿಕ್ರಿಯ ಅಮಲ್ಜಾರಿಯನ್ನು ಮತ್ತಷ್ಟು ವಿಳಂಬಗೊಳಿಸುವ ಉದ್ದೇಶದಿಂದಲೇ ತೀರ್ಪುಋಣಿ ಈಗಾಗಲೇ ಇತ್ಯರ್ಥಗೊಂಡ ವಿಷಯಗಳನ್ನು ಪುನಃ ಎತ್ತಲು ಪ್ರಯತ್ನಿಸುತ್ತಿದ್ದಾನೆ ಎಂದು ನ್ಯಾಯಾಲಯ ಹೇಳಿತು.
ಪ್ರಸ್ತುತ ಅರ್ಜಿದಾರರು ಕಾಶಿ ಮಠದ ಮಠಾಧಿಪತಿಯಾಗಿದ್ದಾರೆ ಎಂದು ಘೋಷಿಸುವ ಡಿಕ್ರಿಯೂ ಅವರ ಪರವಾಗಿದೆ. ಪ್ರತಿವಾದಿಯು ರಚಿಸಿದ್ದ ಟ್ರಸ್ಟ್ ಡೀಡ್ ಅನ್ನು ಬೆಂಗಳೂರಿನ ಸಿವಿಲ್ ನ್ಯಾಯಾಲಯ ವಂಚನೆಯ ಆಧಾರದ ಮೇಲೆ ಅಮಾನ್ಯ ಎಂದು ಘೋಷಿಸಿದ್ದು, ಅದರ ವಿರುದ್ಧ ಮೇಲ್ಮನವಿ ಬಾಕಿಯಿದ್ದರೂ, ಆ ತೀರ್ಪು ರದ್ದಾಗುವವರೆಗೆ ಅದು ಜಾರಿಯಲ್ಲಿರುತ್ತದೆ. ಆದ್ದರಿಂದ ಮೇಲ್ಮನವಿ ಬಾಕಿಯಿರುವುದನ್ನು ನೆಪವನ್ನಾಗಿ ಮಾಡಿಕೊಂಡು ಜಾರಿ ಪ್ರಕ್ರಿಯೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
ಅಂತಿಮ ಆದೇಶ
ಹೈಕೋರ್ಟ್ ಮೂಲ ಅರ್ಜಿಯನ್ನು ಅಂಗೀಕರಿಸಿ, ಅರ್ಜಿದಾರರನ್ನು ಹೆಚ್ಚುವರಿ ಡಿಕ್ರಿದಾರರಾಗಿ ಸೇರ್ಪಡೆಗೊಳಿಸಲು,
ಅಮಲ್ಜಾರಿ ಅರ್ಜಿಯಲ್ಲಿ ಅಗತ್ಯ ತಿದ್ದುಪಡಿ ಮಾಡಲು ಹಾಗೂ
ಅಮಲ್ಜಾರಿ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು
ಎರ್ನಾಕುಳಂ ಜಾರಿ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.
ಪ್ರಕರಣದ ಶೀರ್ಷಿಕೆ (Cause Title):
ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿ ವಿರುದ್ದ ರಾಘವೇಂದ್ರ ತೀರ್ಥ ಸ್ವಾಮೀಜಿ*
ನ್ಯೂಟ್ರಲ್ ಸೈಟೇಶನ್: 2026:KER:58592)
ಪಕ್ಷಕಾರರ ಪರವಾಗಿ ವಕೀಲರು:
ಅರ್ಜಿದಾರರ ಪರ:
ಎಸ್. ಬಿ. ಪ್ರೇಮಚಂದ್ರ ಪ್ರಭು, ವಕೀಲರು
ಆರ್. ಲಕ್ಷ್ಮೀ ನಾರಾಯಣ, ಹಿರಿಯ ವಕೀಲರು
ರಾಮನಾರಾಯಣ ಪ್ರಭು, ವಕೀಲರು
ಆರ್. ರಂಜನಿ, ವಕೀಲರು
ಎಂ. ಅಶೋಕ್ ಕಿಣಿ, ವಕೀಲರು
ಪ್ರತಿವಾದಿಯ ಪರ:
ಪಿ. ಬಿ. ಕೃಷ್ಣನ್, ಹಿರಿಯ ವಕೀಲರು
ಹರೀಶ್ ಆರ್. ಮೆನನ್, ವಕೀಲರು
ಕೆ. ಟಿ. ಶ್ಯಾಮಕುಮಾರ್, ವಕೀಲರು.