-->
ಹೈಕೋರ್ಟ್‌ಗೆ ಬಡ್ತಿ: ಜಡ್ಜ್ ಸಲ್ಲಿಸಿದ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ಹೈಕೋರ್ಟ್‌ಗೆ ಬಡ್ತಿ: ಜಡ್ಜ್ ಸಲ್ಲಿಸಿದ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ

ಹೈಕೋರ್ಟ್‌ಗೆ ಬಡ್ತಿ: ಜಡ್ಜ್ ಸಲ್ಲಿಸಿದ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಕಾರ





ಹೈಕೋರ್ಟ್‌ಗೆ ಬಡ್ತಿ ನೀಡುವ ವಿಚಾರದಲ್ಲಿ ಪರಿಗಣಿಸುವಂತೆ ನಿರ್ದೇಶನ ಕೋರಿ ಕುಟುಂಬ ನ್ಯಾಯಾಲಯದ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ


ಮಹಾರಾಷ್ಟ್ರದ ಏಳು ಕುಟುಂಬ ನ್ಯಾಯಾಲಯಗಳ ನ್ಯಾಯಾಧೀಶರು, ಸಂವಿಧಾನದ ವಿಧಿ 217ರ ಅಡಿಯಲ್ಲಿ ತಮ್ಮನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡುವ (ಬಡ್ತಿ ನೀಡುವ) ವಿಚಾರದಲ್ಲಿ ಪರಿಗಣಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ.


ಅರ್ಜಿದಾರರು, ಕುಟುಂಬ ನ್ಯಾಯಾಲಯಗಳ ನ್ಯಾಯಾಧೀಶರಾಗಿರುವುದರಿಂದ ತಾವು ಭಾರತ ದೇಶದ ವ್ಯಾಪ್ತಿಯಲ್ಲಿ ‘ನ್ಯಾಯಾಂಗ ಹುದ್ದೆ’ (Judicial Office) ಹೊಂದಿದ್ದು, ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದ್ದರಿಂದ, ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳ್ಳಲು ತಮ್ಮನ್ನೂ ಪರಿಗಣಿಸುವ ಹಕ್ಕು ಹೊಂದಿದ್ದಾರೆ ಎಂದು ವಾದಿಸಿದರು.


ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು, “ಸಮಸ್ಯೆಯು ಕುಟುಂಬ ನ್ಯಾಯಾಲಯಗಳಿಗಾಗಿ ಪ್ರತ್ಯೇಕ ಕೇಡರ್ (ವೃಂದ) ರಚಿಸಿರುವುದರಲ್ಲಿದೆ” ಎಂದು ಹೇಳಿತು. ಅಲ್ಲದೆ, ಯಾವುದೇ ವಾಸ್ತವಾಂಶ ಅಥವಾ ಕಾನೂನು ಬದಲಾವಣೆ ಆಗದಿರುವ ಸಂದರ್ಭದಲ್ಲಿ ಈ ಹಿಂದೆ ನೀಡಿರುವ ತೀರ್ಪುಗಳನ್ನು ಮರುಪರಿಶೀಲಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.


ಪೀಠವು ಹೀಗೆ ಹೇಳಿತು:


«“ಅರ್ಜಿದಾರರಿಗೆ ಲಭ್ಯವಿರಬಹುದಾದ ಏಕೈಕ ಮಾರ್ಗವೆಂದರೆ, ಕುಟುಂಬ ನ್ಯಾಯಾಲಯಗಳ ಅಧ್ಯಕ್ಷಾಧಿಕಾರಿಗಳನ್ನು ನೇಮಕ ಮಾಡುವ ನಿಯಮಗಳನ್ನು ಮರುರೂಪಿಸುವಂತೆ ಸಂಬಂಧಪಟ್ಟ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದು. ವಿಶೇಷವಾಗಿ, ಇತರ ರಾಜ್ಯಗಳಲ್ಲಿ ಇಂತಹ ನೇಮಕಾತಿಗೆ ಜಾರಿಯಲ್ಲಿರುವ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಬಹುದು.”»


ಮುಂದುವರಿದು ಪೀಠವು,

“ಇದು ಮೂಲತಃ ನೀತಿ (Policy) ಸಂಬಂಧಿತ ವಿಷಯವಾಗಿದೆ. ಆದ್ದರಿಂದ, ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ ಪರಸ್ಪರ ಸಮಾಲೋಚನೆ ನಡೆಸಿ ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು”

ಎಂದು ತಿಳಿಸಿತು.


ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಆರ್. ಬಸಂತ್, ಈ ಅರ್ಜಿಯು ಸಂವಿಧಾನದ ವಿಧಿ 217ರ ವ್ಯಾಖ್ಯಾನಕ್ಕೆ ಸಂಬಂಧಿಸಿದ ಮಹತ್ವದ ಪ್ರಶ್ನೆಯನ್ನು ಒಳಗೊಂಡಿದೆ ಎಂದು ವಾದಿಸಿದರು.


ಸಂವಿಧಾನದ ವಿಧಿ 217 ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ, ಅವರ ಅರ್ಹತೆ, ಅಧಿಕಾರಾವಧಿ ಹಾಗೂ ಸೇವಾ ಷರತ್ತುಗಳಿಗೆ ಸಂಬಂಧಿಸಿದ ನಿಯಮಗಳನ್ನು ವಿವರಿಸುತ್ತದೆ.

ಈ ಪ್ರಕರಣದಲ್ಲಿ ಅರ್ಜಿದಾರರು ಹೈಕೋರ್ಟ್‌ಗೆ ತೆರಳಿ ಪರಿಹಾರ ಪಡೆಯಲು ಸಾಧ್ಯವಿಲ್ಲ. ಏಕೆಂದರೆ, ಇದೇ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪಿನಲ್ಲಿ ಅಂತಹ ಪರಿಹಾರವನ್ನು ನಿರಾಕರಿಸಿರುವುದಾಗಿ ಹಿರಿಯ ವಕೀಲರು ತಿಳಿಸಿದರು.


ಈ ಹಿಂದೆ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದೇನೆಂದರೆ, ಕುಟುಂಬ ನ್ಯಾಯಾಲಯಗಳ ನ್ಯಾಯಾಧೀಶರನ್ನು ಸಾಮಾನ್ಯ ಅರ್ಥದಲ್ಲಿ (‘generic sense’) ಆ ನ್ಯಾಯಾಲಯಗಳ ಅಧ್ಯಕ್ಷತೆ ವಹಿಸುವ ‘ನ್ಯಾಯಾಧೀಶರು’ ಎಂದು ಕರೆಯಬಹುದಾದರೂ, ಅವರು ರಾಜ್ಯದ ‘ನ್ಯಾಯಾಂಗ ಸೇವೆ’ಯ (Judicial Services) ಸದಸ್ಯರಾಗಿರುವುದಿಲ್ಲ ಅಥವಾ ಅದರ ಅವಿಭಾಜ್ಯ ಅಂಗವಾಗಿರುವುದಿಲ್ಲ. ಹಾಗೆಯೇ, ಸಂವಿಧಾನದ ವಿಧಿ 217ರಲ್ಲಿ ಉಲ್ಲೇಖಿಸಿರುವ ಅರ್ಥದಲ್ಲಿ ಅವರು ‘ನ್ಯಾಯಾಂಗ ಹುದ್ದೆ’ (Judicial Office) ಹೊಂದಿರುವವರೂ ಅಲ್ಲ.


ಹೀಗಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡುವ ವಿಚಾರದಲ್ಲಿ ತಮ್ಮನ್ನು ಪರಿಗಣಿಸಬೇಕೆಂಬ ಯಾವುದೇ ಹಕ್ಕು ಕುಟುಂಬ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu