LAW POINT 55 : 'ಟ್ರ್ಯಾಪ್' ಹಣ, ಆಸ್ತಿ ಜಪ್ತಿ-ಮರುಸ್ಥಾಪಿಸುವ ಪೊಲೀಸರ ಅಧಿಕಾರ: ಎರಡು ಮಹತ್ವದ ತೀರ್ಪುಗಳು
'ಟ್ರ್ಯಾಪ್' ಹಣ, ಆಸ್ತಿ ಜಪ್ತಿ-ಮರುಸ್ಥಾಪಿಸುವ ಪೊಲೀಸರ ಅಧಿಕಾರ: ಎರಡು ಮಹತ್ವದ ತೀರ್ಪುಗಳು
ARTICLE BY: Sri Sukesh Kumar Shetty, Panel Advocate, District Legal Service Authority, D.K. at Mangaluru (MOB-9483804040)
ಆನ್‌ಲೈನ್ ವಂಚನೆಗಳೇ ಹಾಗೆ.. ಚಿಟಿಕಿ ಹೊಡೆಯುವಷ್ಟರಲ್ಲಿ ನಡೆದು ಬಿಡುತ್ತದೆ. ವಂಚಕನ ವಂಚನಾ ಜಾಲದ ಸಂದರ್ಭದಲ್ಲಿ ಸಂತ್ರಸ್ತರು ಭಯ, ಆತಂಕ, ದುಗುಡ ದುಮ್ಮಾನದಿಂದ ಬಳಲಿ ಸಾಮಾನ್ಯ ವಿವೇಚನಾ ಜ್ಞಾನಕ್ಕೂ ಮಂಕು ಕವಿಯುತ್ತದೆ.
ಸೈಬರ್ ಅಪರಾಧ, ಆನ್‌ಲೈನ್ ವಂಚನೆಯ ಸಂದರ್ಭಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಬೇಕು. ಈ ಮಾಹಿತಿ ಸ್ವೀಕರಿಸಿದ ಕೂಡಲೇ ಪೊಲೀಸರೂ ಕಾರ್ಯೋನ್ಮುಖರಾದರೆ ವಂಚನಾ ಜಾಲವನ್ನು ನಿಶ್ಶಂಶಯವಾಗಿ ಸದೆಬಡೆಯಬಹುದು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 106 ಮತ್ತು 107 ಈ ವಿಷಯದಲ್ಲಿ ಪೊಲೀಸರಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಸೆಕ್ಷನ್ 107ರಲ್ಲಿ ಹೆಚ್ಚುವರಿ ಕಾರ್ಯವಿಧಾನವನ್ನು ಪರಿಚಯಿಸುತ್ತದೆ. ಇದರ ಜೊತೆಗೆ ಹಿಂದಿನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 102ರಲ್ಲಿ ಇರುವಂತೆ ಬಿಎನ್‌ಎಸ್‌ಎಸ್‌ನಲ್ಲಿ ಸೆಕ್ಷನ್ 106ನ್ನು ಉದ್ದೇಶಪೂರ್ವಕವಾಗಿ ಉಳಿಸಿಕೊಳ್ಳಲಾಗಿದೆ.
ಸೆಕ್ಷನ್ 106: ನಿರ್ದಿಷ್ಟ ಆಸ್ತಿಯನ್ನು ಜಪ್ತಿ ಮಾಡುವ ಪೊಲೀಸ್ ಅಧಿಕಾರಿಯ ಅಧಿಕಾರ
ಸೆಕ್ಷನ್ 107: ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಜಪ್ತಿ ಮಾಡುವುದು ಮತ್ತು ಪುನರ್‌ಸ್ಥಾಪಿಸುವುದು.
ಈ ಎರಡು ಸೆಕ್ಷನ್‌ಗಳ ಮಹತ್ವ ಮತ್ತು ಪೊಲೀಸರ ಅಧಿಕಾರದ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಆನ್‌ಲೈನ್ ಆರ್ಥಿಕ ವಂಚನೆ ಮತ್ತು ಸೈಬಲ್ ಅಪರಾಧಗಳ ತನಿಖೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಮತ್ತು ನಿರ್ದಿಷ್ಟ ಆಸ್ತಿಗಳನ್ನು ಜಪ್ತಿ ಮಾಡಲು ಮ್ಯಾಜಿಸ್ಟ್ರೇಟ್ ಪೂರ್ವಾನುಮತಿ ಕಡ್ಡಾಯವಲ್ಲ ಎಂದು ಈ ತೀರ್ಪು ಹೇಳಿದೆ.
"ಕರ್ನಾಟಕ ರಾಜ್ಯ ವಿರುದ್ಧ ಜೆಎಆರ್ ಗೋಲ್ಡ್ ರಿಟೇಲ್ ಪ್ರೈ.ಲಿ." ಪ್ರಕರಣದಲ್ಲಿ (10-08-2026) ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಜಡ್ಜ್ ಹೊರಡಿಸಿದ ಆದೇಶವನ್ನು ರದ್ದುಗೊಳಿಸಿದೆ.
ಬಿಎನ್‌ಎಸ್‌ಎಸ್‌ನ ಸೆಕ್ಷನ್ 106ರ ಮಹತ್ವನ್ನು ಎತ್ತಿತೋರಿಸಿದ ಈ ತೀರ್ಪು, ಪೊಲೀಸರಿಗೆ ಮೊದಲು ಖಾತೆಗಳನ್ನು ಸ್ಥಗಿತಗೊಳಿಸುವ ಮತ್ತು ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವನ್ನು ನೀಡುತ್ತದೆ. ಆ ಬಳಿಕ ಈ ಕಾರ್ಯಾಚರಣೆಯ ಬಗ್ಗೆ ಸಂಬಂಧಿತ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ನೀಡುವ ಜವಾಬ್ದಾರಿ ಪೊಲೀಸರದ್ದಾಗಿದೆ. ಸೆಕ್ಷನ್ 107ರ ಅಡಿಯಲ್ಲೇ ಆಸ್ತಿ ಮುಟ್ಟುಗೋಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ.
ಕ್ಷಣ ಮಾತ್ರದಲ್ಲಿ ನಡೆದು ಹೋಗುವ ಸೈಬರ್ ಮೋಸ ಆರ್ಥಿಕ ವಂಚನೆಗಳನ್ನು ತಡೆಯಬೇಕಾದರೆ, ಸಂತ್ರಸ್ತರ ಹಣವನ್ನು ರಕ್ಷಿಸಲು ಸೆಕೆಂಡುಗಳು ಮತ್ತು ನಿಮಿಷಗಳ ಅವಧಿಯಲ್ಲಿಯೇ ಖಾತೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಮ್ಯಾಜಿಸ್ಟ್ರೇಟರ ಪೂರ್ವಾನುಮತಿಗೆ ಕಾದು ಕುಳಿತರೆ ಸಂತ್ರಸ್ತರು ದೊಡ್ಡ ಪ್ರಮಾಣದ ತೊಂದರೆಗೆ ಸಿಲುಕಬಹುದು ಎಂಬುದನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಬಿಎನ್‌ಎಸ್‌ಎಸ್‌ನ ಕಲಂ 107ನ್ನು ಅತಿಯಾಗಿ ವಿಸ್ತರಿಸಿ ಅರ್ಥೈಸುವ ಮೂಲಕ ಸಕ್ಷನ್ 106ರ ಅಸ್ತಿತ್ವವನ್ನು ಇಲ್ಲವಾಗಿಸುವಂತಿಲ್ಲ. ಇಂತಹ ವ್ಯಾಖ್ಯಾನವು ಸಕ್ಷನ್ 106ರ ಶಾಸನಬದ್ಧ ಮರು ಜಾರಿಯನ್ನು ಮೂಲಭೂತವಾಗಿ ನಿಷ್ಪ್ರಯೋಜಕಗೊಳಿಸುತ್ತದೆ ಎಂದು ಈ ತೀರ್ಪು ಹೇಳಿದೆ.
ಬಿಎನ್‌ಎಸ್‌ಎಸ್ ಕಲಂ 106(3)ರ ಅಡಿಯಲ್ಲಿ ಪೊಲೀಸರು ಮೊದಲು ನಿಷೇಧಾಜ್ಞೆ ಹೊರಡಿಸಬಹುದು ಮತ್ತು ನಂತರ ಆ ಕ್ರಮದ ಬಗ್ಗೆ ಸಂಬಂಧಿತ ಮ್ಯಾಜಿಸ್ಟ್ರೇಟರಿಗೆ ತಕ್ಷಣ ವರದಿ ಸಲ್ಲಿಸಬೇಕು. ಇದರಿಂದ ಕಾನೂನು ನಿಯಮಗಳ ಪಾಲನೆಯ ಜೊತೆಗೆ ವಂಚಕರ ಕೈಸೇರಲಿರುವ ಸಂತ್ರಸ್ತರ ಹಣದ ಪರಿಣಾಮಕಾರಿ ರಕ್ಷಣೆಯನ್ನೂ ಖಾತ್ರಿಪಡಿಸಬಹುದು ಎಂಬ ಸದಾಶಯವನ್ನು ತೀರ್ಪು ವ್ಯಕ್ತಪಡಿಸಿದೆ.
"ತೀಸ್ತಾ ಸೆಟಲ್ವಾಡ್ ವಿರುದ್ಧ ಗುಜರಾತ್ ರಾಜ್ಯ", "ಮಹಾರಾಷ್ಟ್ರ ವಿರುದ್ಧ ತಪಸ್ ನ್ಯೋಜಿ" ಸೇರಿದಂತೆ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಅವಲಂಬಿಸಿದ ಕರ್ನಾಟಕ ಹೈಕೋರ್ಟ್, ಆರ್ಥಿಕ ವಂಚನೆಗಳ ಪ್ರಕರಣಗಳಲ್ಲಿ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸದೇ ಇದ್ದರೆ ಅಂತಿಮವಾಗಿ ಸಂತ್ರಸ್ತರಿಗೆ ಉಳಿಯುವುದು ಕೇವಲ ಖಾಲಿ ಖಾತೆಯ ಮೇಲಿನ ಜಪ್ತಿ ಆದೇಶ ಮಾತ್ರ ಎಂಬ ತೀರ್ಪಿನ ಮಾತುಗಳು ಅತ್ಯಂತ ಮಾರ್ಮಿಕವಾಗಿದೆ.
ಮೊದಲು ಸಂರಕ್ಷಣೆ. ನಂತರ ತಕ್ಷಣವೇ ನ್ಯಾಯಾಲಯಕ್ಕೆ ಮಾಹಿತಿ. ಅಪಾಯವನ್ನು ತಡೆಯುವುದಕ್ಕೆ ಮೊದಲ ಪ್ರಾಶಸ್ತ್ಯ. ಇದು ಹೈಕೋರ್ಟ್ ಈ ತೀರ್ಪಿನ ಮೂಲಕ ನೀಡಿದ ಸೂಕ್ಷ್ಮ ವ್ಯಾಖ್ಯೆ. ಆನ್‌ಲೈನ್ ವಂಚನೆಯ ಸಂದರ್ಭದಲ್ಲಿ ಅನೂಹ್ಯ ರೀತಿಯಲ್ಲಿ ಮ್ಯೂಲ್ ಖಾತೆಗಳ ಮೂಲಕ ಹರಿದಾಡುವ ಹಣದ ವರ್ಗಾವಣೆಗಳು ಕ್ಷಣ ಮಾತ್ರದಲ್ಲಿ ನಡೆಯುವಾಗ ಅದೇ ವೇಗದ ಮಿಂಚಿನ ಕಾರ್ಯಾಚರಣೆಗಳು ಅನಿವಾರ್ಯ.
ಟ್ರ್ಯಾಪ್ ಹಣ ಬಿಡುಗಡೆ:
ಕಾನೂನಿಗೆ ಹೊಸ ಸ್ಪರ್ಶ
ಭ್ರಷ್ಟಾಚಾರ ಪ್ರಕರಣಗಳಲ್ಲಿ ಲಂಚದ ಹಣವನ್ನು ಪಡೆಯಲು ದೂರುದಾರರು ಹರಸಾಹಸ ಪಡಬೇಕಾಗಿತ್ತು. ಆದರೆ, ಇಂತಹ ದುಗುಡವನ್ನು ಹೊಂದಿರುವ ದೂರುದಾರರನ್ನು ನಿರಾಳಗೊಳಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಲಂಚದ ಹಣ ತಕ್ಷಣ ದೂರುದಾರರು ಅಥವಾ ಸಂತ್ರಸ್ತರ ಕೈ ಸೇರಬೇಕು ಎಂದು ಅದು ತನ್ನ ತೀರ್ಪಿನಲ್ಲಿ ತಾಕೀತು ಮಾಡಿದೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಲಂಚ ಸ್ವೀಕರಿಸಿ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದ ಪ್ರಕರಣಗಳಲ್ಲಿ ವಶಪಡಿಸಿದ ಟ್ರ್ಯಾಪ್ ಹಣವನ್ನು ಪ್ರಕರಣದ ಸಂತ್ರಸ್ತರು ಯಾ ದೂರುದಾರರಿಗೆ ಶೀಘ್ರವೇ ಹಿಂತಿರುಗಿಸಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮತ್ತೊಂದು ಮಹತ್ವದ ತೀರ್ಪು ನೀಡಿದೆ.
'ಪ್ರಾಸಿಕ್ಯೂಷನ್‌ಗೆ ನೆರವಾದ ಕಾರಣಕ್ಕಾಗಿ ದೂರುದಾರರು ತಮ್ಮ ಆಸ್ತಿಯನ್ನು ಮರಳಿ ಪಡೆಯಲು ವರ್ಷಗಟ್ಟಲೆ ಕಾಯುವಂತೆ ಒತ್ತಾಯಿಸುವುದು ಅವರಿಗೆ ಅದೊಂದು ಶಿಕ್ಷೆಯಾಗಿ ಪರಿವರ್ತನೆಯಾದಂತಾಗುತ್ತದೆ
"ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ (ಬಿಎನ್‌ಎಸ್‌ಎಸ್) ಕಲಂ 497 ಮತ್ತು 503ರ ಅಡಿಯಲ್ಲಿ ದೂರುದಾರರು ವಿಶೇಷ ನ್ಯಾಯಾಲಯದಲ್ಲಿ ಸೂಕ್ತ ಅರ್ಜಿಯನ್ನು ಸಲ್ಲಿಸುವ ಮೂಲಕ, ತಾನು ಹೊಂದಿಸಿಕೊಟ್ಟಿದ್ದ 'ಟ್ರಾಪ್ ಹಣ'ಕ್ಕೆ ಸಮಾನವಾದ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಬಹುದು ಎಂದು ಹೈಕೋರ್ಟ್ ಹೇಳಿದೆ.
ಇಂತಹ ಅರ್ಜಿಯನ್ನು ಸಲ್ಲಿಸಿದಾಗ, ವಿಶೇಷ ನ್ಯಾಯಾಲಯ ಸದರಿ ತೀರ್ಪಿನಲ್ಲಿ ನೀಡಲಾಗಿರುವ ಅವಲೋಕನಗಳನ್ನು ಗಮನದಲ್ಲಿ ಇರಿಸಿಕೊಂಡು ಪರಿಶೀಲಿಸಿ ವಿಲೇವಾರಿ ಮಾಡಬೇಕು' ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ನಿರ್ದೇಶಿಸಿದೆ. ಅಂತೆಯೇ, 'ಹಾಲಿ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ನಾಲ್ಕು ವಾರಗಳಲ್ಲಿ ಮುಕ್ತಾಯಗೊಳಿಸಬೇಕು ಎಂದೂ ಗಡುವು ವಿಧಿಸಿದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಕೇವಲ ಕಾನೂನಿನ ಮೂಲಕ ಮಾತ್ರದಿಂದಲೇ ಮುಂದುವರಿಸುವುದು ಅಸಾಧ್ಯ. ಇಂತಹ ಕಾನೂನು ಹೋರಾಟಗಳು ತಮಗೆ ಆರ್ಥಿಕ ಸಂಕಷ್ಟ ಉಂಟುಮಾಡುವುದಿಲ್ಲ ಎಂಬ ಖಾತ್ರಿಯನ್ನು ದೂರುದಾರರಿಗೆ ದೊರೆತರೆ ಮತ್ತಷ್ಟು ಪ್ರಬಲ ಹೋರಾಟ ನಡೆಯಬಹುದು. ಇಂತಹ ಭರವಸೆಯನ್ನು ಪ್ರತಿಯೊಬ್ಬ ದೂರುದಾರನಿಗೂ ಸರ್ಕಾರ ನೀಡುವಂತಾಗಬೇಕು ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದ್ದು ಪರಿಣಾಮಕಾರಿಯಾಗಿದೆ.
ಅಧಿಕಾರಿಗಳ ಲಂಚದ ದಾಹಕ್ಕೆ ಬ್ರೇಕ್ ಬೀಳಬೇಕಾದರೆ, ಟ್ರ್ಯಾಪ್ ಕಾರ್ಯಾಚರಣೆಗಳು ಭಯ ಮುಕ್ತವಾಗಬೇಕು, ಸರಳವಾಗಬೇಕು, ಕಾನೂನು ಕೂಡ ಸಂತ್ರಸ್ತರ ಪರ ನಿಲ್ಲಬೇಕು. ಏಕೆಂದರೆ, ಪ್ರತಿಯೊಂದು ಟ್ರ್ಯಾಪ್ ಕಾರ್ಯಾಚರಣೆಗಳು ಪ್ರಾಮಾಣಿಕ ನಾಗರಿಕರು ಮತ್ತು ಅವರ ಧೈರ್ಯದ ಮೇಲೆ ನಿಂತಿರುತ್ತದೆ. ಇಂತಹ ನಾಗರಿಕರು ಭ್ರಷ್ಟ ಮುಕ್ತ ಸಮಾಜ ಮತ್ತು ಕಾನೂನು ಆಡಳಿತಕ್ಕೆ ನೆರವಾದ ತೃಪ್ತಿಯನ್ನು ಹೊಂದಿರಬೇಕು. ಅದಕ್ಕೆ ಬದಲಾಗಿ, ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಮಾತ್ರಕ್ಕೆ ತನ್ನ ಹಣವನ್ನು ನ್ಯಾಯಾಲಯದ ವಶದಲ್ಲಿ ದೀರ್ಘಕಾಲದವರೆಗೆ ಇರಿಸಿಕೊಳ್ಳುವುದು ಮತ್ತು ಅದರಿಂದ ಉಂಟಾಗುವ ಆರ್ಥಿಕ ಸಂಕಷ್ಟದ ಹೆಚ್ಚುವರಿ ಹೊರೆಗೆ ಒಳಗಾಗಬಾರದು ಎಂಬುದು ಈ ತೀರ್ಪಿನ ಆಶಯ. ಇಂತಹ ತೀರ್ಪುಗಳು ಟ್ರ್ಯಾಪ್ ಪ್ರಕರಣಗಳಿಗೆ ಕಾನೂನಿನ ಹೊಸ ಸ್ಪರ್ಶ ನೀಡುತ್ತದೆ ಎಂಬುದು ನಿಸ್ಸಂದೇಹ.
ಈ ಮೇಲಿನ ಎರಡು ತೀರ್ಪುಗಳೂ ಸೈಬರ್ ವಂಚನೆಗೊಳಗಾದವರು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವರಿಗೆ ಹೊಸ ಶಕ್ತಿಯನ್ನು ನೀಡಿದೆ.
Author: Sri Sukesh Kumar Shetty, Panel Advocate, District Legal Service Authority, D.K. at Mangaluru