ಬ್ಯಾಂಕ್, ಕೋರ್ಟ್, ಸರ್ಕಾರಿ ಕಚೇರಿಗಳಿಗೆ ಸತತ ಮೂರು ದಿನ ರಜೆ: ವಾರಾಂತ್ಯದಲ್ಲಿ ರಜಾ ಸಂಭ್ರಮ
ಬ್ಯಾಂಕ್, ಕೋರ್ಟ್, ಸರ್ಕಾರಿ ಕಚೇರಿಗಳಿಗೆ ಸತತ ಮೂರು ದಿನ ರಜೆ: ವಾರಾಂತ್ಯದಲ್ಲಿ ರಜಾ ಸಂಭ್ರಮ
ದಸರಾ ರಜೆಗಳು ಮುಗಿದ ತಕ್ಷಣ ಮತ್ತೆ ದೈನಂದಿನ ಕೆಲಸ ಕಾರ್ಯ ಆರಂಭವಾಗಲಿದ್ದು, ಎರಡು ದಿನಗಳ ಬಳಿಕ ಮತ್ತೆ ಬ್ಯಾಂಕ್, ಸರ್ಕಾರಿ ಕಚೇರಿಗಳಿಗೆ ಸತತ ಮೂರು ದಿನ ರಜೆ ದೊರೆಯಲಿದೆ. ಈ ಮೂಲಕ ಸಿಬ್ಬಂದಿಗೆ ವಾರಾಂತ್ಯದಲ್ಲಿ ರಜಾ ಸಂಭ್ರಮ ಸಿಗಲಿದೆ.
ಶನಿವಾರ ಕಲಾಪ ರಹಿತ ಅರ್ಧ ದಿನ ಕರ್ತವ್ಯದ ದಿನವಾಗಿದ್ದು, ಕೋರ್ಟ್ ಸಿಬ್ಬಂದಿಗೆ ಮಾತ್ರ ಮಧ್ಯಾಹ್ನದ ವರೆಗೆ ಕೆಲಸ ನಿರ್ವಹಿಸಬೇಕಿದೆ.
ಮಹರ್ಷಿ ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ ದಿನಾಂಕ ಬದಲಾವಣೆ ಮಾಡಿ ಈಗಾಗಲೇ ಸರ್ಕಾರ ಅಧಿಸೂಚನೆ ಪ್ರಕಟ ಮಾಡಿದ್ದು, ಅಕ್ಟೋಬರ್ 25ರ ಬದಲಿಗೆ ಅಕ್ಟೋಬರ್ 26ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ನೀಡಲಾಗಿರುವ ಸಾರ್ವತ್ರಿಕ ರಜೆಯ ದಿನಾಂಕವನ್ನು ಬದಲಾಯಿಸಿ ಮಹತ್ವದ ಅಧಿಸೂಚನೆಯನ್ನು ಹೊರಡಿಸಿದೆ.
ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದಿನಾಂಕ 05-10-2026ರಂದು ಅಧಿಸೂಚನೆ ಹೊರಡಿಸಿದ್ದು, (ಸಿಆಸುಇ 30 ಹೆಚ್‌ಹೆಚ್‌ಎಲ್ 2026) ಇದರ ಪ್ರಕಾರ, 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಈ ಹಿಂದೆ ದಿನಾಂಕ 25-10-2026, ಭಾನುವಾರ ಎಂದು ಘೋಷಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ರಜೆಯನ್ನು ಇದೀಗ ದಿನಾಂಕ 26-10-2026, ಸೋಮವಾರಕ್ಕೆ ಬದಲಾಯಿಸಲಾಗಿದೆ.
ಅದರಂತೆ, ದಿನಾಂಕ 26-10-2026, ಸೋಮವಾರ, ಶೀಗಿ ಹುಣ್ಣಿಮೆಯ ದಿನದಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುವುದು ಹಾಗೂ ಆ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಲಾಗಿದೆ.
ಈ ಬದಲಾವಣೆಯ ಪರಿಣಾಮವಾಗಿ, ಸಾರ್ವಜನಿಕರು, ಸರ್ಕಾರಿ ನೌಕರರು, ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ಗಳು, ನ್ಯಾಯಾಲಯಗಳು ಹಾಗೂ ಇತರ ಸಂಬಂಧಿತ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಅಕ್ಟೋಬರ್ 26, 2026ರ ರಜೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿಕೊಳ್ಳಬೇಕಾಗಿದೆ.
ಇದಲ್ಲದೆ, ಸದರಿ ರಜೆಯನ್ನು Negotiable Instruments Act, 1881ರ (1881ರ ಅಧಿನಿಯಮ ಸಂಖ್ಯೆ 26) ಸೆಕ್ಷನ್ 25ರಲ್ಲಿರುವ ವಿವರಣೆಯ ಅನ್ವಯವೂ ಸಾರ್ವತ್ರಿಕ ರಜೆಯನ್ನಾಗಿ ಸರ್ಕಾರವು ಘೋಷಿಸಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು ವತಿಯಿಂದ ಹೊರಡಿಸಲಾದ ಅಧಿಸೂಚನೆಯನ್ನು ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್, ಭಾರತೀಯ ರಿಸರ್ವ್ ಬ್ಯಾಂಕ್, ಮಹಾಲೇಖಪಾಲರು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮಾಹಿತಿಗಾಗಿ ರವಾನಿಸಲಾಗಿದೆ.