ಕೋರ್ಟ್ ಆದೇಶದ ಅಸಮ್ಮತಿ ಅಪರಾಧವಲ್ಲ: ಎಫ್‌ಐಆರ್ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಕೋರ್ಟ್ ಆದೇಶದ ಅಸಮ್ಮತಿ ಅಪರಾಧವಲ್ಲ: ಎಫ್‌ಐಆರ್ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಸಮ್ಮತಿ ಅಥವಾ ವಿರೋಧ ವ್ಯಕ್ತಪಡಿಸಿದರೆ ಅದು ದೇಶದ್ರೋಹದ ಕೃತ್ಯ ಎಸಗಿದಂತಾಗದು ಅಥವಾ ಸಾರ್ವಜನಿಕ ಅಶಾಂತಿಗೆ ಕಾರಣವಾಗದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಮಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪೋಸ್ಟರ್ ಅಂಟಿಸಿದ ಕಾರಣಕ್ಕೆ ದಾಖಲಾಗಿದ್ದ ಎಫ್‌ಐಆರ್‌ನ್ನು ರದ್ದುಪಡಿಸಿದೆ.
2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಅಸಮ್ಮತಿ ಸೂಚಿಸಿ ‘ನ್ಯಾಯ ನಿರಾಕರಣೆಯಾಗಿದೆ, ನ್ಯಾಯಕ್ಕಾಗಿ ಧ್ವನಿ ಎತ್ತಿ’ ಎಂದು ಮಂಗಳೂರಿನಲ್ಲಿ ರಸ್ತೆ ಬದಿಯ ಗೋಡೆಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಈ ಬಗ್ಗೆ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಕ್ರಮವನ್ನುಪ್ರಶ್ನಿಸಿ ಆರೋಪಿಗಳು ಎಫ್‌ಐಆರ್ ರದ್ದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಎಫ್‌ಐಆರ್‌ನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಪೋಸ್ಟರ್ ಹಾಕುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದಿಸುವ ಅಪರಾಧವಾಗುವುದಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.