ವಂಶವೃಕ್ಷ ದೃಢೀಕರಣಕ್ಕೆ ಮಾರ್ಗಸೂಚಿ: ಅನ್ಯಸ್ಥಳದ ಅರ್ಜಿದಾರರಿಗೆ ಪ್ರಮಾಣಪತ್ರ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್
ವಂಶವೃಕ್ಷ ದೃಢೀಕರಣಕ್ಕೆ ಮಾರ್ಗಸೂಚಿ: ಅನ್ಯಸ್ಥಳದ ಅರ್ಜಿದಾರರಿಗೆ ಪ್ರಮಾಣಪತ್ರ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್
ಅನ್ಯಸ್ಥಳದಲ್ಲಿ ವಾಸವಾಗಿರುವ ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣಪತ್ರವನ್ನು ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ವಂಶವೃಕ್ಷ ದೃಢೀಕರಣಕ್ಕೆ ನೂತನ ಮಾರ್ಗಸೂಚಿ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಮೃತ ವ್ಯಕ್ತಿಯ ಕುಟುಂಬದ ವಂಶಸ್ಥರು ಅಥವಾ ಜೀವಂತವಾಗಿರುವ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ವಂಶವೃಕ್ಷ ಪ್ರಮಾಣಪತ್ರ ನೀಡಲು ನಿರಾಕರಿಸಲಾಗುತ್ತಿತ್ತು. ಇದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಕುಟುಂಬದ ಪೂರ್ವಜರು ಮತ್ತು ಇತರ ಸದಸ್ಯರ ವಿಳಾಸದ ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆ ತಮ್ಮ ಕುಟುಂಬ ಸದಸ್ಯರ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಲು ನಿರಾಕರಿಸಿ ಬೆಂಗಳೂರು ನಗರ ದಕ್ಷಿಣ ತಾಲೂಕಿನ ತಾವರೆಕರೆಯ ಉಪ ವಲಯದ ತಹಸೀಲ್ದಾರ್ 2021 ರ ಡಿ.27ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಿ.ಎಸ್.ಅಭಿನಂದನ ಕುಮಾರ್ ಎಂಬುವರು ಹೈಕೋರ್ಟ್ಗೆ ಮೊರೆ ಹೋಗಿದ್ದರು.
ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಪರದಾಡುತ್ತಿದ್ದ ರಾಜ್ಯದ ನೂರಾರು ಕುಟುಂಬಗಳಿಗೆ ಈ ತೀರ್ಪಿನಿಂದ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ವಂಶವೃಕ್ಷ ನೀಡುವುದಕ್ಕಾಗಿ ಯಾವುದೇ ಪ್ರತ್ಯೇಕ ಶಾಸನಬದ್ಧ ಕಾನೂನಿಲ್ಲ. ಬದಲಿಗೆ ಸಕಾಲ ಕಾಯ್ದೆ ಹಾಗೂ 2026ರ ಜುಲೈ 17 ರಂದು ಹೊರಡಿಸಲಾದ ಸರ್ಕಾರದ ಸುತ್ತೋಲೆಗಳನ್ನು ಆಧರಿಸಿಯೇ ವಂಶವೃಕ್ಷ ನೀಡುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.
ಮೃತ ವ್ಯಕ್ತಿಯ ಕಾನೂನುಬದ್ಧ ವಾರಸುದಾರರು ನೀಡುವ ಮಾಹಿತಿಯನ್ನು ಗ್ರಾಮ ಆಡಳಿತಾಧಿಕಾರಿ ಅಥವಾ ಕಂದಾಯ ನಿರೀಕ್ಷಕರು ಸ್ಥಳೀಯ ತನಿಖೆ ನಡೆಸಿ ಪರಿಶೀಲಿಸುತ್ತಾರೆ. ಹೀಗಿರುವಾಗ, ವಾರಸುದಾರರು ಬೇರೆ ಬೇರೆ ಕಡೆ ವಾಸಿಸಲು ಹಲವು ಕಾರಣಗಳಿರಬಹುದು, ಅದನ್ನು ನೆಪ ಮಾಡಿಕೊಂಡು ಅರ್ಜಿ ತಿರಸ್ಕರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಂಶವೃಕ್ಷದ ಪ್ರಮಾಣಪತ್ರವೇ ಅಂತಿಮ ಕಾನೂನಾತ್ಮಕ ಹಕ್ಕು ಅಥವಾ ಸಾಕ್ಷ್ಯವಾಗುವುದಿಲ್ಲ. ವಾರಸುದಾರರ ಬಗ್ಗೆ ಯಾವುದೇ ವಿವಾದಗಳಿದ್ದರೆ ಸಿವಿಲ್ ನ್ಯಾಯಾಲಯಗಳೇ ತೀರ್ಮಾನಿಸಬೇಕು. ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದರೆ ಅದಕ್ಕೆ ಅರ್ಜಿದಾರರೇ ಹೊಣೆಗಾರರಾಗುತ್ತಾರೆ ಎಂದು ಹೈಕೋರ್ಟ್ ತಿಳಿಸಿದೆ. ಹಾಗೂ, ಜುಲೈ 2026ರ ಸುತ್ತೋಲೆಯಂತೆ ನಿಯಮಾನುಸಾರ ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣಪತ್ರ ನೀಡುವಂತೆ ತಹಸೀಲ್ದಾರ್ಗೆ ಆದೇಶಿಸಿದೆ.
ಅರ್ಜಿದಾರರು ನಾಡ ಕಚೇರಿ, ಗ್ರಾಮ ವನ್ ಸೇವಾ ಕೇಂದ್ರ, ಕರ್ನಾಟಕ ವನ್ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ನಾಗರಿಕ ಆನ್‌ಲೈನ್ ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿಯನ್ನೂ ಸಲ್ಲಿಸಬಹುದು.
ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿದ್ದು, ಆಧಾರ್ ಆಧಾರಿಕ ಇ-ಕೆವೈಸಿ ದೃಢೀಕರವನ್ನು ಕಡ್ಡಾಯವಾಗಿ ಮಾಡಬೇಕಾಗಿದೆ.