ಆರ್ಟಿಐ ಅರ್ಜಿ: ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ- ಇನ್ನು ಮುಂದೆ RTI ಅರ್ಜಿ ಸಲ್ಲಿಸಲು ಏನು ಮಾಡಬೇಕು..?
ಆರ್ಟಿಐ ಅರ್ಜಿ: ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ- ಇನ್ನು ಮುಂದೆ RTI ಅರ್ಜಿ ಸಲ್ಲಿಸಲು ಏನು ಮಾಡಬೇಕು..?
ನಾಗರಿಕರು ಮಾಹಿತಿ ಹಕ್ಕು (RTI) ಕಾಯ್ದೆಯನ್ನು ಸುಲಭವಾಗಿ ಬಳಸಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರ ಎರಡು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಈ ವಿಷಯವನ್ನು ಪ್ರಜಾ ಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದ್ದಾರೆ.
ಭೌತಿಕ ಆರ್ಟಿಐ ಅರ್ಜಿಗಳ ದಾಖಲಾತಿ ಸಕಾಲ ಸೇವೆಯಡಿ:
ಪೋಸ್ಟ್ ಅಥವಾ ಅಂಚೆ ಮೂಲಕ, ಯಾ ವೈಯಕ್ತಿಕವಾಗಿ ಸಲ್ಲಿಸುವ ಭೌತಿಕ RTI ಅರ್ಜಿಗಳನ್ನು ಸ್ವೀಕರಿಸುವ ಸಾರ್ವಜನಿಕ ಪ್ರಾಧಿಕಾರವು ಎರಡು ದಿನಗಳ ಒಳಗಾಗಿ ಆ ಅರ್ಜಿಗಳನ್ನು ಆರ್ಟಿಐ ಆನ್ಲೈನ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ವ್ಯವಸ್ಥೆಯನ್ನು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011ರ ಅಡಿಯಲ್ಲಿ ಖಾತರಿ ಸೇವೆಯಾಗಿ ಅಧಿಸೂಚಿಸಲಾಗಿದೆ.
ಇದರಿಂದ ಪ್ರತಿಯೊಬ್ಬ ಅರ್ಜಿದಾರರಿಗೂ ಆನ್ಲೈನ್ ನೋಂದಣಿ ಸಂಖ್ಯೆ ದೊರೆಯಲಿದ್ದು, ಅರ್ಜಿಯ ಸ್ಥಿತಿಗತಿಯನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು. ಅರ್ಜಿಗಳು ಕಳೆದುಹೋಗುವುದು ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗುವುದನ್ನು ತಡೆಯಲು ಈ ಕ್ರಮ ಸಹಕಾರಿಯಾಗಲಿದೆ. ನಿಗದಿತ ಎರಡು ದಿನಗಳೊಳಗೆ ಅರ್ಜಿಯನ್ನು ಪೋರ್ಟಲ್ನಲ್ಲಿ ದಾಖಲಿಸದಿದ್ದರೆ, ನಾಗರಿಕರು ಸಕಾಲ ಕಾಯ್ದೆಯಡಿ ಪರಿಹಾರ ವೆಚ್ಚ ಪಡೆಯಲು ಅರ್ಹರಾಗಿರುತ್ತಾರೆ. ಈ ವಿಳಂಬಕ್ಕೆ ಸಂಬಂಧಪಟ್ಟ ಅಧಿಕಾರಿಯೇ ಹೊಣೆಯಾಗುತ್ತಾರೆ.
ಎಲ್ಲ ಒನ್ ಕೇಂದ್ರಗಳಲ್ಲೂ ಆನ್ಲೈನ್ ಆರ್ಟಿಐ ಸೇವೆ:
ಇಂಟರ್ನೆಟ್ ಅಥವಾ ಕಂಪ್ಯೂಟರ್ ಬಳಕೆಯ ಜ್ಞಾನವಿಲ್ಲದ ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಆನ್ಲೈನ್ ಆರ್ಟಿಐ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ನಾಗರಿಕರು ತಮ್ಮ ಸಮೀಪದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯ ನೆರವಿನಿಂದ ಅರ್ಜಿ ಸಲ್ಲಿಸಬಹುದು. ನಿಗದಿತ ಆರ್ಟಿಐ ಶುಲ್ಕ ಹಾಗೂ ಕೇಂದ್ರದ ನಾಮಮಾತ್ರ ಸೇವಾ ಶುಲ್ಕ ಪಾವತಿಸಿದ ಬಳಿಕ ಸ್ಥಳದಲ್ಲೇ ಆನ್ಲೈನ್ ಸ್ವೀಕೃತಿ ಪತ್ರವನ್ನು ಪಡೆಯಬಹುದು. ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮ ಒನ್ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶದ ನಾಗರಿಕರಿಗೂ ಆನ್ಲೈನ್ ಆರ್ಟಿಐ ಸೇವೆ ಲಭ್ಯವಾಗಲಿದೆ.
ಏಕರೂಪದ ವೇದಿಕೆಯಲ್ಲಿ ಅರ್ಜಿಗಳ ನಿರ್ವಹಣೆ:
ಭೌತಿಕವಾಗಿ, ಆನ್ಲೈನ್ ಮೂಲಕ ಅಥವಾ ಸೇವಾ ಕೇಂದ್ರಗಳ ಮೂಲಕ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳನ್ನು ಒಂದೇ ವೇದಿಕೆಯಡಿ ತರಲು ಈ ಕ್ರಮಗಳು ಸಹಕಾರಿಯಾಗಲಿವೆ. ಇದರಿಂದ ಮಾಹಿತಿ ಹಕ್ಕು ಕಾಯ್ದೆ, 2005ರ ಅಡಿಯಲ್ಲಿ ನಿಗದಿಪಡಿಸಿರುವ ಕಾಲಮಿತಿಗಳ ಪಾಲನೆಯನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು. ಮಾಹಿತಿ ಅಧಿಕಾರಿಗಳಿಂದ ಉಂಟಾಗುವ ವಿಳಂಬವನ್ನು ಶೀಘ್ರವಾಗಿ ಗುರುತಿಸಲು ಸಾಧ್ಯವಾಗುವುದರ ಜೊತೆಗೆ, ನಾಗರಿಕರಿಗೆ ತಮ್ಮ ಅರ್ಜಿಗಳ ವಿಶ್ವಾಸಾರ್ಹ ದಾಖಲೆ ಲಭ್ಯವಾಗಲಿದೆ.
ಸಾರ್ವಜನಿಕರು ನೇರವಾಗಿ ಆನ್ಲೈನ್ ಮೂಲಕ ಅಥವಾ ತಮ್ಮ ಸಮೀಪದ ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬಹುದು.