ಇಂಗ್ಲಿಷಲ್ಲಿ ವಿವರಣೆ, ಹೇಳಿಕೆ ದಾಖಲು ಹಿನ್ನೆಲೆ: ಆರೋಪಿ ದೋಷಮುಕ್ತ - ಹೈಕೋರ್ಟ್ ತೀರ್ಪು
ಇಂಗ್ಲಿಷಲ್ಲಿ ವಿವರಣೆ, ಹೇಳಿಕೆ ದಾಖಲು ಹಿನ್ನೆಲೆ: ಆರೋಪಿ ದೋಷಮುಕ್ತ - ಹೈಕೋರ್ಟ್ ತೀರ್ಪು
ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ಕೈದಿಯೊಬ್ಬನಿಗೆ ಅರ್ಥವಾಗದ ಇಂಗ್ಲಿಷ್ ಭಾಷೆಯಲ್ಲಿ ಪ್ರಶ್ನೆ ಕೇಳಿ, ಆ ಭಾಷೆಯಲ್ಲಿಯೇ ವಿಚಾರಣೆ ನಡೆಸಲಾಗಿದೆ ಎಂಬ ಕಾರಣಕ್ಕೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯೊಬ್ಬನನ್ನು ಜಾರ್ಖಂಡ್ ಹೈಕೋರ್ಟ್ ದೋಷಮುಕ್ತಗೊಳಿಸಿದೆ.
ಚಾಮರಾ ಒರಾಂ 2009ರಲ್ಲಿ ಪರಮೇಶ್ವರಿ ಎಂಬಾಕೆಯನ್ನು ಹತ್ಯೆ ಮಾಡಿದ್ದ ಎಂಬ ಆರೋಪ ಇತ್ತು. ವಿಚಾರಣೆ ನಡೆಸಿದ್ದ ರಾಂಚಿಯ ನ್ಯಾಯಾಲಯವು 2018ರಲ್ಲಿ ಒರಾಂನನ್ನು ದೋಷ ಎಂದು ಪರಿಗಣಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆದರೆ ತನಗೆ ಅರ್ಥವಾಗದ ಭಾಷೆಯಲ್ಲಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಲಾಗಿದ್ದು, ಶಿಕ್ಷೆ ರದ್ದುಪಡಿಸಬೇಕು ಎಂದು ಒರಾಂ ಹೈಕೋರ್ಟ್ ಮೆಟ್ಟಿಲೇರಿದ್ದ. ಇದರ ವಿಚಾರಣೆ ವೇಳೆ, ಒರಾಂಗೆ ಅರ್ಥವಾಗದ ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿ, ಹೇಳಿಕೆ ಇಂಗ್ಲಿಷ್‌ನಲ್ಲಿ ದಾಖಲಿಸಲಾಗಿದೆ.
ಆರೋಪಿಯ ವಿರುದ್ಧದ ಪರಿಸ್ಥಿತಿಗಳನ್ನು ಆತನಿಗೆ ತಿಳಿದಿರುವ ಭಾಷೆ ಯಲ್ಲಿ ವಿವರಿಸಲಾಗಿಲ್ಲ ಎಂದು ಭಾವಿಸಲು ಸಾಕಷ್ಟು ಕಾರಣಗಳಿವೆ. ಇದು ಆತನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಶಿಕ್ಷೆ ರದ್ದುಗೊಳಿಸಿದೆ.