48 ಗಂಟೆ ಜೈಲಲ್ಲಿದ್ದರೆ ಸರಕಾರಿ ನೌಕರ ಸ್ವಯಂ ಅಮಾನತು: ಸುಪ್ರೀಂ ಮಹತ್ವದ ತೀರ್ಪು
48 ಗಂಟೆ ಜೈಲಲ್ಲಿದ್ದರೆ ಸರಕಾರಿ ನೌಕರ ಸ್ವಯಂ ಅಮಾನತು: ಸುಪ್ರೀಂ ಮಹತ್ವದ ತೀರ್ಪು
ಕ್ರಿಮಿನಲ್ ಪ್ರಕರಣದಲ್ಲಿ ಸರ್ಕಾರಿ ನೌಕರರು 48 ಗಂಟೆಗಳಿಗಿಂತಲೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದರೆ ಅಂಥವರು 'ಡೀಮ್ಸ್ ಸಸ್ಪೆಂಡ್' (ಸ್ವಯಂಚಾಲಿತ ಅಮಾನತು) ವ್ಯಾಪ್ತಿಗೆ ಬರುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದಕ್ಕಾಗಿ ಯಾವುದೇ ಪ್ರತ್ಯೇಕ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಲಂಚದ ಆರೋಪದ ಮೇಲೆ ಬಂಧಿತರಾಗಿದ್ದ ಬಿಹಾರದ ಸಮಸ್ತಿಪುರದ ಸದರ್ ಆಸ್ಪತ್ರೆಯ ಆಡಳಿತಾಧಿಕಾರಿ ವಿಶ್ವಜಿತ್ ಸಿಂಗ್ ಅವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ಸುಮಾರು 15 ದಿನಗಳ ಕಾಲ ಜೈಲಿನಲ್ಲಿದ್ದ ವಿಶ್ವಜಿತ್ ಸಿಂಗ್ ಅವರ ಅಮಾನತು ಆದೇಶವನ್ನು ಸರಕಾರವು ರದ್ದುಗೊಳಿಸಿ, ಮತ್ತೆ ಅದೇ ಆಸ್ಪತ್ರೆಯ ಅದೇ ಹುದ್ದೆಗೆ ಮರುನೇಮಕ ಮಾಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಾತ್ರವಲ್ಲದೆ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.