-->
ಎಫ್‌ಐಆರ್ ದಾಖಲಿಸಲು ನಿರಾಕರಣೆ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಮುನ್ನ ಪೊಲೀಸರ ಅಭಿಪ್ರಾಯ ಕಡ್ಡಾಯ ಆಲಿಸಬೇಕೆ?

ಎಫ್‌ಐಆರ್ ದಾಖಲಿಸಲು ನಿರಾಕರಣೆ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಮುನ್ನ ಪೊಲೀಸರ ಅಭಿಪ್ರಾಯ ಕಡ್ಡಾಯ ಆಲಿಸಬೇಕೆ?

ಎಫ್‌ಐಆರ್ ದಾಖಲಿಸಲು ನಿರಾಕರಣೆ: ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಮುನ್ನ ಪೊಲೀಸರ ಅಭಿಪ್ರಾಯ ಕಡ್ಡಾಯ ಆಲಿಸಬೇಕೆ?





ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ - ಬಿಎನ್‌ಎಸ್‌ಎಸ್ (BNSS) ಕಲಂ 175(3) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ನಿರಾಕರಿಸಿದ ಸಂದರ್ಭದಲ್ಲಿ ತನಿಖೆಗೆ ಆದೇಶಿಸುವ ಮೊದಲು ಪೊಲೀಸರ ಅಭಿಪ್ರಾಯ ಆಲಿಸುವುದು ಮ್ಯಾಜಿಸ್ಟ್ರೇಟ್‌ಗೆ ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.


ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಕಲಂ 175(3)ರ ಅಡಿಯಲ್ಲಿ ಖಾಸಗಿ ದೂರನ್ನು ತನಿಖೆಗಾಗಿ ಪೊಲೀಸರಿಗೆ ವರ್ಗಾಯಿಸುವಾಗ ಕಾನೂನಿನ ಕಡ್ಡಾಯ ಪ್ರಕ್ರಿಯೆಯನ್ನು ಪಾಲಿಸದ ಮ್ಯಾಜಿಸ್ಟ್ರೇಟ್ ಅವರ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರರು ಆರಂಭದಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಎಫ್‌ಐಆರ್ ದಾಖಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿತ್ತು. ಆದರೆ, ಎಫ್‌ಐಆರ್ ದಾಖಲಿಸದಿರಲು ಕಾರಣಗಳೇನು ಎಂಬುದನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ನ್ಯಾಯಾಲಯದ ಮುಂದೆ ಮಂಡಿಸಲು ಅವಕಾಶ ನೀಡದೆ, ಮ್ಯಾಜಿಸ್ಟ್ರೇಟ್ ಅವರು ಕಲಂ 175(3)ರ ಅಡಿಯಲ್ಲಿ ತನಿಖೆಗೆ ಆದೇಶಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು, 20.11.2024ರಂದು PCR No.12868/2024ರಲ್ಲಿ ಹೊರಡಿಸಲಾದ ಆದೇಶದಲ್ಲಿ, ಎಫ್‌ಐಆರ್ ದಾಖಲಿಸದಿರಲು ಕಾರಣಗಳನ್ನು ಸಲ್ಲಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ಅವಕಾಶ ನೀಡಲಾಗಿತ್ತೇ ಅಥವಾ ಅವರು ಸಲ್ಲಿಸಿದ ಅಂಶಗಳನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸಿದ್ದಾರೆಯೇ ಎಂಬುದಕ್ಕೆ ಯಾವುದೇ ಉಲ್ಲೇಖವಿಲ್ಲ ಎಂದು ಅಭಿಪ್ರಾಯಪಟ್ಟಿತು.


ಆದ್ದರಿಂದ, ಸದರಿ ಆದೇಶವು ಬಿಎನ್‌ಎಸ್‌ಎಸ್ ಕಲಂ 175(3)ರ ಕಡ್ಡಾಯ ನಿಯಮಗಳ ಪಾಲನೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.


ನ್ಯಾಯಾಲಯದ ಪ್ರಮುಖ ಅಭಿಪ್ರಾಯಗಳು


ಬಿಎನ್‌ಎಸ್‌ಎಸ್ ಕಲಂ 175(3)ರ ಪ್ರಕಾರ, ತನಿಖೆಗೆ ಆದೇಶಿಸುವ ಮೊದಲು ಮ್ಯಾಜಿಸ್ಟ್ರೇಟ್ ಅವರು:

ಕಲಂ 173(4)ರ ಅಡಿಯಲ್ಲಿ ಅಫಿಡವಿಟ್‌ನೊಂದಿಗೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಬೇಕು.

ಅಗತ್ಯವೆಂದು ಕಂಡುಬಂದಲ್ಲಿ ಸೂಕ್ತ ವಿಚಾರಣೆ ನಡೆಸಬೇಕು.


ಎಫ್‌ಐಆರ್ ದಾಖಲಿಸದಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಲ್ಲಿಸುವ ಅಭಿಪ್ರಾಯ ಅಥವಾ ವಿವರಣೆಯನ್ನು ಪರಿಗಣಿಸಬೇಕು.

ತನಿಖೆಗೆ ಆದೇಶಿಸುವ ಅಧಿಕಾರವನ್ನು ನ್ಯಾಯಾಲಯವು ಸೂಕ್ತ ರೀತಿಯಲ್ಲಿ, ನ್ಯಾಯಾಂಗ ವಿವೇಚನೆಯನ್ನು ಅನ್ವಯಿಸಿ ಮತ್ತು ಎಫ್‌ಐಆರ್ ದಾಖಲಿಸದಿರುವ ಹಿಂದಿನ ಸನ್ನಿವೇಶಗಳನ್ನು ಪರಿಗಣಿಸಿದ ನಂತರವೇ ಚಲಾಯಿಸುವಂತಾಗಲು ಶಾಸನಸಭೆಯು ಈ ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ ಎಂದು ನ್ಯಾಯಪೀಠ ತಿಳಿಸಿತು.


ಈ ಸಂದರ್ಭದಲ್ಲಿ Manjunath & Others v. State by Kengeri Police Station & Another (2025) ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ, ಬಿಎನ್‌ಎಸ್‌ಎಸ್ ಕಲಂ 175(3)ರ ಅಡಿಯಲ್ಲಿ ತನಿಖೆಗೆ ಆದೇಶಿಸುವ ಮೊದಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಅವಕಾಶ ನೀಡಬೇಕು ಮತ್ತು ಅದನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸಬೇಕು ಎಂಬುದನ್ನು ಪುನರುಚ್ಚರಿಸಿತು.


ಅಂತಿಮ ಆದೇಶ

ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗೆ ತಮ್ಮ ವಿವರಣೆ ಸಲ್ಲಿಸಲು ಅವಕಾಶ ನೀಡದಿರುವುದು ಹಾಗೂ ಅಂತಹ ವಿವರಣೆಯನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸದಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಮ್ಯಾಜಿಸ್ಟ್ರೇಟ್ ಅವರ ಹಿಂದಿನ ಆದೇಶವನ್ನು ರದ್ದುಗೊಳಿಸಿತು.

ಅಲ್ಲದೆ, ಮ್ಯಾಜಿಸ್ಟ್ರೇಟ್ ಅವರು ಈ ಆದೇಶದಲ್ಲಿನ ಯಾವುದೇ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ, ಪ್ರಕರಣವನ್ನು ಹೊಸದಾಗಿ ಸ್ವತಂತ್ರವಾಗಿ ಮತ್ತು ಕಾನೂನಿನ ಪ್ರಕಾರ ಮರುಪರಿಶೀಲಿಸಬೇಕು ಎಂದು ನಿರ್ದೇಶಿಸಿತು.


ತೀರ್ಪಿನ ಸಾರಾಂಶ:

ಬಿಎನ್‌ಎಸ್‌ಎಸ್ ಕಲಂ 175(3)ರ ಅಡಿಯಲ್ಲಿ ತನಿಖೆಗೆ ಆದೇಶಿಸುವ ಮೊದಲು, ಎಫ್‌ಐಆರ್ ದಾಖಲಿಸದಿರಲು ಕಾರಣಗಳನ್ನು ವಿವರಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ಅವಕಾಶ ನೀಡುವುದು ಮತ್ತು ಅವರ ವಿವರಣೆಯನ್ನು ಮ್ಯಾಜಿಸ್ಟ್ರೇಟ್ ಪರಿಗಣಿಸುವುದು ಕಡ್ಡಾಯ. ಈ ಪ್ರಕ್ರಿಯೆ ಪಾಲಿಸದೆ ಹೊರಡಿಸಿದ ತನಿಖೆಯ ಆದೇಶ ಕಾನೂನುಬದ್ಧವಾಗಿರುವುದಿಲ್ಲ.


ಪ್ರಕರಣದ ಶೀರ್ಷಿಕೆ: ಆರ್ ವಿಜಯಕುಮಾರ್ ಮತ್ತೊಬ್ಬರು ವಿರುದ್ಧ ಕರ್ನಾಟಕ ರಾಜ್ಯ ಮತ್ತೊಬ್ಬರು


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu