ವಾರ್ಷಿಕ ವೇತನ ಬಡ್ತಿಯ ಹಿಂದಿನ ದಿನ ನಿವೃತ್ತರಾದ ಸರಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ವಾರ್ಷಿಕ ವೇತನ ಬಡ್ತಿಯ ಹಿಂದಿನ ದಿನ ನಿವೃತ್ತರಾದ ಸರಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನಿವೃತ್ತಿಯ ಮರು ದಿನದಂದು ನೌಕರನು ಸೇವೆಯಲ್ಲಿ ಇರುವುದಿಲ್ಲ ಎಂಬ ಕಾರಣಕ್ಕೆ, ನಿವೃತ್ತಿಗೆ ಹಿಂದಿನ ದಿನ ಅಗತ್ಯವಿರುವ ಒಂದು ವರ್ಷದ (12 ತಿಂಗಳು) ಸೇವೆಯನ್ನು ಉತ್ತಮ ನಡತೆ ಮತ್ತು ದಕ್ಷತೆಯಿಂದ ಸಲ್ಲಿಸಿ ಈಗಾಗಲೇ ಗಳಿಸಿರುವ ವಾರ್ಷಿಕ ವೇತನ ಬಡ್ತಿಯನ್ನು ನಿರಾಕರಿಸುವುದು ನ್ಯಾಯಸಮ್ಮತವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಾರ್ಷಿಕ ವೇತನ ಬಡ್ತಿಯ ಹಿಂದಿನ ದಿನ ನಿವೃತ್ತಿಯಾದ ನೌಕರರಿಗೆ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡುವಂತೆ ತೀರ್ಪು ನೀಡಿದೆ.
ಭಾರತದ ಸುಪ್ರೀಂ ಕೋರ್ಟ್ ಭಾರತ ಸರಕಾರ ವಿರುದ್ಧ ಎಂ ಸಿದ್ದರಾಜು ಹಾಗೂ ಕೆಪಿಟಿಸಿಎಲ್ ವಿರುದ್ಧ ಸಿ.ಪಿ. ಮುಂದಿನಮನಿ (ಸಿವಿಲ್ ಅಪೀಲ್ ಸಂಖ್ಯೆ 2471/2023 ಮತ್ತು ಎಸ್.ಎಲ್.ಪಿ(ಸಿ) ಸಂಖ್ಯೆ 6185/2020) ಪ್ರಕರಣಗಳಲ್ಲಿ ತೀರ್ಪು ಘೋಷಿಸಿದ್ದು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.
ಅದರಂತೆ, ನಿವೃತ್ತಿಗೆ ಹಿಂದಿನ ಒಂದು ವರ್ಷದ ಸೇವೆಯನ್ನು ಉತ್ತಮ ನಡತೆ ಮತ್ತು ದಕ್ಷತೆಯಿಂದ ಸಲ್ಲಿಸಿದ ಮೂಲ ರಿಟ್ ಅರ್ಜಿದಾರರಿಗೆ, ಸೇವೆಯ ಕೊನೆಯ ದಿನದಂದು ಅವರು ಅರ್ಹತೆ ಗಳಿಸಿದ್ದ ಒಂದು ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವಂತೆ ಮೇಲ್ಮನವಿದಾರರಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಗೆ ನಿರ್ದೇಶನ ನೀಡಲಾಗಿದೆ.
*ಪ್ರಕರಣದ ಸಂಕ್ಷಿಪ್ತ ವಿವರಗಳು*
ಮೇಲ್ಮನವಿದಾರರಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 12 ತಿಂಗಳ ಸೇವೆಯನ್ನು ಪೂರ್ಣಗೊಳಿಸಿ ಮರುದಿನ ನಿವೃತ್ತರಾದ ಸರಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿಯನ್ನು ನಿರಾಕರಿಸಲು ಈ ಕೆಳಗಿನ ಕಾರಣಗಳನ್ನು ನೀಡಿ ಸುಪ್ರೀಂ ಕೋರ್ಟ್ ನ ಸಮಕ್ಷಮ ತನ್ನ ವಾದವನ್ನು ಮಂಡಿಸಿತು.
1) ಈ ವಿಷಯದ ಕುರಿತು ವಿವಿಧ ಹೈಕೋರ್ಟ್ಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ.
2) ವಾರ್ಷಿಕ ವೇತನ ಬಡ್ತಿಯು ಅದನ್ನು ಗಳಿಸಿದ ದಿನದ ಮರುದಿನದಿಂದ ಜಾರಿಗೆ ಬರುತ್ತದೆ.
3) ವೇತನ ಬಡ್ತಿ ಪಡೆಯುವ ಹಕ್ಕು ಉಂಟಾಗುವ ಸಮಯದಲ್ಲಿ ನೌಕರನು ಸೇವೆಯಲ್ಲಿ ಇರಬೇಕು.
4) ವೇತನ ಬಡ್ತಿಯು ಜಾರಿಗೆ ಬರುವ ದಿನದಂದು ಸಂಬಂಧಪಟ್ಟ ನೌಕರರು ಸೇವೆಯಲ್ಲಿರಲಿಲ್ಲ.
5) ವಾರ್ಷಿಕ ವೇತನ ಬಡ್ತಿಯು ಉತ್ತಮ ಸೇವೆಗೆ ನೀಡುವ ಪ್ರತಿಫಲವಾಗಿದ್ದು, ನೌಕರನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಉತ್ತಮ ಸೇವೆ ಸಲ್ಲಿಸುವಂತೆ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.
6) ನೌಕರರು ಸೇವೆಯಲ್ಲಿ ಇಲ್ಲದಿರುವುದರಿಂದ, ಉತ್ತಮ ಕಾರ್ಯಕ್ಷಮತೆಗೆ ಪ್ರೋತ್ಸಾಹ ನೀಡುವ ಉದ್ದೇಶದ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಪ್ರತ್ಯರ್ಜಿದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು.
1) ನಿವೃತ್ತಿಗೆ ಮುಂಚಿನ ಒಂದು ವರ್ಷದ ಸೇವೆಯನ್ನು ಸಲ್ಲಿಸುವ ಮೂಲಕ ವಾರ್ಷಿಕ ವೇತನ ಬಡ್ತಿಗೆ ಅರ್ಹತೆ ಗಳಿಸಿರುವ ನೌಕರರು, ಮರುದಿನವೇ ನಿವೃತ್ತಿ ವಯಸ್ಸನ್ನು ತಲುಪಿದ ಕಾರಣಕ್ಕಾಗಿ ತಾವು ನೈಜವಾಗಿ ಗಳಿಸಿರುವ ವೇತನ ಬಡ್ತಿಯ ಪ್ರಯೋಜನದಿಂದ ವಂಚಿತರಾಗಬಾರದು.
2) ನೌಕರನ ನಡತೆ ಉತ್ತಮವಾಗಿಲ್ಲದಿದ್ದರೆ ಅಥವಾ ಆತನ ಕೆಲಸ ತೃಪ್ತಿಕರವಾಗಿಲ್ಲದಿದ್ದರೆ, ಸಕ್ಷಮ ಪ್ರಾಧಿಕಾರವು ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಬಹುದು.
3) ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸುವ ಮೂಲಕ ನೌಕರನು ವೇತನ ಬಡ್ತಿಗೆ ಅರ್ಹತೆ ಗಳಿಸಿದ ನಂತರ, ಮರುದಿನವೇ ನಿವೃತ್ತಿ ವಯಸ್ಸನ್ನು ತಲುಪಿದ ಅಥವಾ ನಿವೃತ್ತನಾದ ಕಾರಣಕ್ಕಾಗಿ ಆತನಿಗೆ ವಾರ್ಷಿಕ ವೇತನ ಬಡ್ತಿಯ ಪ್ರಯೋಜನವನ್ನು ನಿರಾಕರಿಸಲಾಗುವುದಿಲ್ಲ.
4) ವಾರ್ಷಿಕ ವೇತನ ಬಡ್ತಿಯು ನೌಕರನನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಮತ್ತು ನೌಕರನು ಸೇವೆಯಲ್ಲಿ ಇಲ್ಲದಿರುವಾಗ ಬಡ್ತಿ ನೀಡುವ ಪ್ರಶ್ನೆಯೇ ಇಲ್ಲ ಎಂಬ ವಾದದಲ್ಲಿ ಯಾವುದೇ ಸಮರ್ಥನೀಯತೆಯಿಲ್ಲ. ಏಕೆಂದರೆ, ವೇತನ ಶ್ರೇಣಿಯಲ್ಲಿನ ಒಂದು ವರ್ಷದ ಹಿಂದಿನ ಸೇವೆಯನ್ನು ಸಲ್ಲಿಸುವ ಮೂಲಕವೇ ನೌಕರನು ವೇತನ ಬಡ್ತಿಯನ್ನು ಗಳಿಸುತ್ತಾನೆ.
5) ಉತ್ತಮ ನಡತೆ ಹೊಂದಿರುವ ಅಧಿಕಾರಿಗಳಿಗೆ ಪ್ರತಿ ವರ್ಷ ವೇತನ ಬಡ್ತಿ ನೀಡಲಾಗುತ್ತದೆ. ಶಿಸ್ತು ಕ್ರಮದ ಶಿಕ್ಷೆಯಾಗಿ ಅಥವಾ ಕಾರ್ಯದಕ್ಷತೆಯ ಆಧಾರದ ಮೇಲೆ ವೇತನ ಬಡ್ತಿಯನ್ನು ತಡೆಹಿಡಿದಿದ್ದರೆ ಮಾತ್ರ ಇದಕ್ಕೆ ಅಪವಾದವಿರುತ್ತದೆ.
6) ಸರ್ಕಾರಿ ನೌಕರನು ಮರುದಿನವೇ ನಿವೃತ್ತನಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ, ಆತ ಗಳಿಸಿರುವ ವಾರ್ಷಿಕ ವೇತನ ಬಡ್ತಿಯನ್ನು ನಿರಾಕರಿಸಲಾಗುವುದಿಲ್ಲ.
7) ಜೂನ್ 30ರಂದು ನಿವೃತ್ತಿಯಾಗುವ ಕೇಂದ್ರ ಸರ್ಕಾರಿ ನೌಕರನು, ಆತನ ನಡತೆ ಉತ್ತಮವಾಗಿದ್ದರೆ, ಈಗಾಗಲೇ ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿ ವಾರ್ಷಿಕ ವೇತನ ಬಡ್ತಿಗೆ ಅರ್ಹತೆ ಗಳಿಸಿರುತ್ತಾನೆ. ಮುಂದಿನ ದಿನದಂದು ಆತ ಸೇವೆಯಲ್ಲಿ ಇರಲಿಲ್ಲ ಎಂಬ ಕಾರಣವೊಂದರಿಂದ, ಒಂದು ವರ್ಷದ ಉತ್ತಮ ನಡತೆಯ ಸೇವೆಯ ಆಧಾರದ ಮೇಲೆ ಗಳಿಸಿರುವ ವೇತನ ಬಡ್ತಿಯನ್ನು ನಿರಾಕರಿಸುವುದು ಸಂಪೂರ್ಣವಾಗಿ ಅನಿಯಂತ್ರಿತ ಮತ್ತು ಅನ್ಯಾಯಕರ ಕ್ರಮವಾಗುತ್ತದೆ.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ವಿವಿಧ ಹೈಕೋರ್ಟ್ಗಳ ಭಿನ್ನಾಭಿಪ್ರಾಯಗಳನ್ನು ಕೂಡ ಪರಿಗಣಿಸಿತು.
ವಾರ್ಷಿಕ ವೇತನ ಬಡ್ತಿ ನೀಡುವುದರ ವಿರುದ್ಧದ ತೀರ್ಪುಗಳು
ಕೆಳಕಂಡ ತೀರ್ಪುಗಳಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ:
ಎ) ಆಂಧ್ರಪ್ರದೇಶದ ಪ್ರಿನ್ಸಿಪಲ್ ಅಕೌಂಟೆಂಟ್ ಜನರಲ್ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಪೂರ್ಣಪೀಠ ನೀಡಿದ ತೀರ್ಪು.
ಬಿ) ಭಾರತ ಸರಕಾರ ವಿರುದ್ಧ ಪವಿತ್ರನ್ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ ತೀರ್ಪು
ಡಿ) ಹರಿಪ್ರಕಾಶ್ ವಿರುದ್ಧ ಹಿಮಾಚಲ ಪ್ರದೇಶ ರಾಜ್ಯ ಮತ್ತು ಇತರರು ಪ್ರಕರಣದಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ನೀಡಿದ ತೀರ್ಪು
*ವಾರ್ಷಿಕ ವೇತನ ಬಡ್ತಿ ನೀಡುವುದನ್ನು ಸಮರ್ಥಿಸಿದ ತೀರ್ಪುಗಳು
ಎ) ಪಿ ಅಯ್ಯಂ ಪೆರುಮಾಳ್ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು.
ಬಿ) ಗೋಪಾಲ್ ಸಿಂಗ್ ವಿರುದ್ಧ ಭಾರತ ಸರಕಾರ ಮತ್ತು ಇತರರು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪು
ಸಿ) ನಂದ ವಿಜಯ ಸಿಂಗ್ ಮತ್ತು ಇತರರು ವಿರುದ್ಧ ಭಾರತ ಸರಕಾರ ಮತ್ತು ಇತರರು ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು
ಡಿ) ಯೋಗೇಂದ್ರ ಸಿಂಗ್ ಭಧೌರಿಯ ಮತ್ತು ಇತರರು ವಿರುದ್ಧ ಮಧ್ಯಪ್ರದೇಶ ಸರಕಾರ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ ತೀರ್ಪು.
ಇ) ಎಎಫ್ಆರ್ ಅರುಣ್ ಕುಮಾರ್ ಬಿಸ್ವಾಲ್ ವಿರುದ್ಧ ಒರಿಸ್ಸಾ ರಾಜ್ಯ ಮತ್ತು ಇನ್ನೊಬ್ಬರು ಪ್ರಕರಣದಲ್ಲಿ ಒಡಿಶಾ ಹೈಕೋರ್ಟ್ ನೀಡಿರುವ ತೀರ್ಪು
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕೆಳಕಂಡ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸಿದೆ:
1) ಸರ್ಕಾರಿ ನೌಕರನು ಹಿಂದಿನ ಒಂದು ವರ್ಷದ ನಿಗದಿತ ಸೇವಾವಧಿಯನ್ನು ಉತ್ತಮ ನಡತೆ ಮತ್ತು ದಕ್ಷತೆಯಿಂದ ಸಲ್ಲಿಸುವ ಮೂಲಕ ಈಗಾಗಲೇ ಗಳಿಸಿರುವ ವಾರ್ಷಿಕ ವೇತನ ಬಡ್ತಿಯ ಪ್ರಯೋಜನವನ್ನು ನಿರಾಕರಿಸುವುದು ಅನಿಯಂತ್ರಿತ ಕ್ರಮಕ್ಕೆ ಕಾರಣವಾಗುತ್ತದೆ. ನೌಕರನ ಯಾವುದೇ ತಪ್ಪಿಲ್ಲದಿದ್ದರೂ ಆತನನ್ನು ಶಿಕ್ಷಿಸಿದಂತಾಗುತ್ತದೆ.
2) ನೌಕರನ ನಡತೆ ಉತ್ತಮವಾಗಿಲ್ಲದಿದ್ದರೆ ಅಥವಾ ಆತ ತನ್ನ ಕರ್ತವ್ಯಗಳನ್ನು ದಕ್ಷತೆಯಿಂದ ನಿರ್ವಹಿಸದಿದ್ದರೆ ಮಾತ್ರ, ಅನ್ವಯಿಸುವ ನಿಯಮಗಳ ಪ್ರಕಾರ ವೇತನ ಬಡ್ತಿಯನ್ನು ತಡೆಹಿಡಿಯಬಹುದು. ಅನಿಯಂತ್ರಿತ ಅಥವಾ ಅಸಮಂಜಸ ಫಲಿತಾಂಶಕ್ಕೆ ಕಾರಣವಾಗುವ ಯಾವುದೇ ವ್ಯಾಖ್ಯಾನವನ್ನು ತಪ್ಪಿಸಬೇಕು.
3) ಸರ್ಕಾರಿ ನೌಕರನು ಉತ್ತಮ ನಡತೆಯೊಂದಿಗೆ ಒಂದು ವರ್ಷದ ಸೇವೆಯನ್ನು ಸಲ್ಲಿಸುವ ಮೂಲಕ ಗಳಿಸಿರುವ ವಾರ್ಷಿಕ ವೇತನ ಬಡ್ತಿಯನ್ನು ನಿರಾಕರಿಸುವಂತಾಗಬಾರದು. ಅಗತ್ಯವಿರುವ ಸೇವಾವಧಿಯನ್ನು ಉತ್ತಮ ನಡತೆಯೊಂದಿಗೆ ಪೂರ್ಣಗೊಳಿಸಿದ ಕ್ಷಣದಲ್ಲಿಯೇ ವೇತನ ಬಡ್ತಿಗೆ ಆತನ ಅರ್ಹತೆ ದೃಢವಾಗುತ್ತದೆ; ಅದು ಮುಂದಿನ ದಿನದಂದು ಪಾವತಿಗೆ ಅರ್ಹವಾಗುತ್ತದೆ.
4) ಇದಕ್ಕೆ ವಿರುದ್ಧವಾದ ಅಭಿಪ್ರಾಯವು ಅನಿಯಂತ್ರಿತ ಮತ್ತು ಅಸಮಂಜಸ ಫಲಿತಾಂಶಕ್ಕೆ ಕಾರಣವಾಗುತ್ತದೆ. ಒಂದು ವರ್ಷದ ಉತ್ತಮ ನಡತೆ ಮತ್ತು ದಕ್ಷತೆಯ ಸೇವೆಯನ್ನು ಸಲ್ಲಿಸಿರುವ ನೌಕರನಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಒಂದು ವಾರ್ಷಿಕ ವೇತನ ಬಡ್ತಿಯನ್ನು ನಿರಾಕರಿಸಿದಂತಾಗುತ್ತದೆ. ಆದ್ದರಿಂದ ಇಂತಹ ಸಂಕುಚಿತ ವ್ಯಾಖ್ಯಾನವನ್ನು ತಪ್ಪಿಸಬೇಕು.
ಸುಪ್ರೀಂ ಕೋರ್ಟ್ನ ಅಂತಿಮ ಅಭಿಪ್ರಾಯ
ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ಸಂಪೂರ್ಣ ಸಹಮತ ವ್ಯಕ್ತಪಡಿಸಿದೆ. ನಿವೃತ್ತಿಯ ಹಿಂದಿನ ಒಂದು ವರ್ಷದ ಸೇವೆಯನ್ನು ಉತ್ತಮ ನಡತೆ ಮತ್ತು ದಕ್ಷತೆಯಿಂದ ಸಲ್ಲಿಸುವ ಮೂಲಕ, ತಮ್ಮ ಸೇವೆಯ ಕೊನೆಯ ದಿನದಂದು ವಾರ್ಷಿಕ ವೇತನ ಬಡ್ತಿಗೆ ಅರ್ಹತೆ ಗಳಿಸಿರುವ ಮೂಲ ರಿಟ್ ಅರ್ಜಿದಾರರಿಗೆ ಆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವಂತೆ ಕರ್ನಾಟಕ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬೆಳಕಿನಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳು
ವಾರ್ಷಿಕ ವೇತನ ಬಡ್ತಿ ದೊರೆಯುವ ದಿನಾಂಕದ ಹಿಂದಿನ ದಿನ ಸೇವೆಯಿಂದ ನಿವೃತ್ತಿಯಾದ ರಾಜ್ಯ ಸರ್ಕಾರಿ ನೌಕರರಿಗೆ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿ, ಅದರ ಆಧಾರದ ಮೇಲೆ ಪಿಂಚಣಿಯನ್ನು ಮರುನಿಗದಿಪಡಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 51(1) ರ ಪ್ರಕಾರ, ವಾರ್ಷಿಕ ವೇತನ ಬಡ್ತಿಯು ಅದನ್ನು ಗಳಿಸಿದ ದಿನದ ಮರುದಿನದಿಂದ ಪ್ರಾಪ್ತವಾಗುತ್ತದೆ.
ಒಬ್ಬ ನೌಕರನು ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಪೂರ್ಣಗೊಳಿಸಿ ಜುಲೈ 1 ರಂದು ವಾರ್ಷಿಕ ವೇತನ ಬಡ್ತಿಗೆ ಅರ್ಹನಾಗಿದ್ದರೂ, ಜೂನ್ 30 ರಂದು ನಿವೃತ್ತಿಯಾದರೆ ಅವನಿಗೆ ಆ ಬಡ್ತಿಯ ಲಾಭ ದೊರೆಯುತ್ತಿರಲಿಲ್ಲ. ಇದರಿಂದಾಗಿ, ಪೂರ್ಣ ಒಂದು ವರ್ಷದ ಸೇವೆ ಸಲ್ಲಿಸಿ ಬಡ್ತಿಯನ್ನು “ಗಳಿಸಿದ್ದರೂ” ಕೇವಲ ಒಂದು ದಿನದ ತಾಂತ್ರಿಕ ಕಾರಣದಿಂದ ಆ ನೌಕರನ ಪಿಂಚಣಿ ಕಡಿಮೆಯಾಗುತ್ತಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 20-05-2025ರ ಅಧಿಕೃತ ಜ್ಞಾಪನದ ಮೂಲಕ, ಜೂನ್ 30 ಅಥವಾ ಡಿಸೆಂಬರ್ 31 ರಂದು ನಿವೃತ್ತಿಯಾಗುವ ನೌಕರರಿಗೆ ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿದೆ.
ಕರ್ನಾಟಕ ಸರ್ಕಾರವು ಈಗ ಇದೇ ತತ್ತ್ವವನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸಿದ್ದು 4.6.2026 ರಂದು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಕೆಳಗಿನ ಷರತ್ತುಗಳನ್ನು ಪೂರೈಸುವ ನೌಕರರು ಈ ಸೌಲಭ್ಯಕ್ಕೆ ಅರ್ಹರು.
ವಾರ್ಷಿಕ ವೇತನ ಬಡ್ತಿಗೆ ಅಗತ್ಯವಿರುವ ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಪೂರ್ಣಗೊಳಿಸಿರಬೇಕು.
ವಾರ್ಷಿಕ ವೇತನ ಬಡ್ತಿ ದೊರೆಯುವ ದಿನಾಂಕದಂದು ವಯೋನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಹೊಂದಿರಬೇಕು.
ವಾರ್ಷಿಕ ವೇತನ ಬಡ್ತಿಯನ್ನು ಗಳಿಸಿರಬೇಕು.
ಸೌಲಭ್ಯ ಏನು?
ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಲಾಗುವುದು. ಆ ವೇತನದ ಆಧಾರದ ಮೇಲೆ ಪಿಂಚಣಿಯನ್ನು ಮರುನಿಗದಿಪಡಿಸಲಾಗುವುದು.
ಹೆಚ್ಚಿದ ಪಿಂಚಣಿ ಭವಿಷ್ಯದಲ್ಲಿ ದೊರೆಯಲಿದೆ.
ಈ ಆದೇಶದಡಿ ಕೆಲವು ಪ್ರಮುಖ ನಿರ್ಬಂಧಗಳಿವೆ:
ಪಿಂಚಣಿಗೆ ಮಾತ್ರ ಅನ್ವಯ
ಕಾಲ್ಪನಿಕ ವೇತನ ಬಡ್ಡಿಯನ್ನು ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗುತ್ತದೆ.
ಇತರೆ ನಿವೃತ್ತಿ ಸೌಲಭ್ಯಗಳಿಗೆ ಅನ್ವಯಿಸುವುದಿಲ್ಲ
ಈ ಬಡ್ತಿಯನ್ನು ಕೆಳಗಿನ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದಿಲ್ಲ:
1) ನಿವೃತ್ತಿ ಉಪಾದಾನ (ಡಿ.ಸಿ.ಆರ್.ಜಿ)
2) ಗಳಿಕೆ ರಜೆ ನಗದೀಕರಣ
3) ಇತರೆ ಸೇವಾಂತ್ಯ ಸೌಲಭ್ಯಗಳು
4) ಬಾಕಿ ಹಣ ಸಿಗುವುದಿಲ್ಲ
5) ಈ ಆದೇಶವು ಭವಿಷಾನ್ವಯವಾಗಿ ಮಾತ್ರ ಜಾರಿಯಾಗುತ್ತದೆ.
ಯಾರಿಗೆ ಅನ್ವಯಿಸುವುದಿಲ್ಲ?
ಸೇವೆಯಲ್ಲಿರುವಾಗಲೇ ಮೃತಪಟ್ಟ ನೌಕರರಿಗೆ ಮತ್ತು ಕಡ್ಡಾಯ ನಿವೃತ್ತಿ ದಂಡನೆಗೆ ಒಳಗಾದ ನೌಕರರಿಗೆ
ಈ ಸೌಲಭ್ಯ ಅನ್ವಯಿಸುವುದಿಲ್ಲ.
ಕುಟುಂಬ ಪಿಂಚಣಿದಾರರಿಗೂ ಪ್ರಯೋಜನ
ಅರ್ಹ ಪಿಂಚಣಿದಾರರು ಮೃತಪಟ್ಟಿದ್ದಲ್ಲಿ, ಅವರ ಕುಟುಂಬ ಪಿಂಚಣಿದಾರರು ಸಹ ಈ ಆದೇಶದಡಿ ಮರುನಿಗದಿಪಡಿಸಿದ ಪಿಂಚಣಿಯ ಪ್ರಯೋಜನವನ್ನು ಭವಿಷ್ಯಾನ್ವಯವಾಗಿ ಪಡೆಯಬಹುದು.
✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ
