-->
Dying Declaration: ಮರಣ ಕಾಲೀನ ಘೋಷಣೆ ಕುರಿತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು- 07-05-2021

Dying Declaration: ಮರಣ ಕಾಲೀನ ಘೋಷಣೆ ಕುರಿತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು- 07-05-2021




Dying Declaration: ಮರಣ ಕಾಲೀನ ಘೋಷಣೆ ಕುರಿತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು- 07-05-2021


Jayamma and another Vs State of Karnataka

ಜಯಮ್ಮ ಮತ್ತು ಮತ್ತೊಬ್ಬರು Vs ಕರ್ನಾಟಕ ರಾಜ್ಯ


ತೀರ್ಪು ನೀಡಿದವರು: ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ.ಸೂರ್ಯಕಾಂತ್, ನ್ಯಾ. ಅನಿರುದ್ಧ ಬೋಸ್


ವ್ಯಕ್ತಿಯು ಸಾಯುವ ಸಂದರ್ಭದಲ್ಲಿ ನೀಡುವ ಹೇಳಿಕೆ (ಮರಣ ಕಾಲೀನ ಘೋಷಣೆ)ಗೆ ಕಾನೂನಿನಲ್ಲಿ ಮಹತ್ವದ ಸ್ಥಾನ ಇದೆ. ಈ ಮರಣಕಾಲೀನ ಹೇಳಿಕೆಯನ್ನೇ ಪ್ರಧಾನ ಸಾಕ್ಷ್ಯವಾಗಿಟ್ಟುಕೊಂಡು ವಿಚಾರಣಾ ನ್ಯಾಯಾಲಯ (ಚಿತ್ರದುರ್ಗ) ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿತ್ತು.


 ಈ ತೀರ್ಪನ್ನು ಪ್ರಶ್ನಿಸಿ ಮಾಡಿದ ಮೇಲ್ಮನವಿಯಲ್ಲಿ ಕರ್ನಾಟಕ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು.



ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಆರೋಪಿ ಜಯಮ್ಮ ತಮ್ಮ ವಿರುದ್ಧ ನೀಡಲಾದ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಪ್ರಾರ್ಥಿಸಿಕೊಂಡಿದ್ದರು.


ಪ್ರಕರಣದ ವಿವರ:

ರೆಡ್ಡಿನಾಯಕನ ಪತ್ನಿ ಜಯಮ್ಮ (ಮೇಲ್ಮನವಿದಾರರು) ಮತ್ತು ಸಣ್ಣ ರಾಮನಾಯಕ್ನ ಪತ್ನಿ ಜಯಮ್ಮ (ಮೃತರು) ನಿಕಟ ಸಂಬಂಧಿಗಳಾಗಿದ್ದು, ಎರಡೂ ಕುಟುಂಬದ ಮಧ್ಯೆ ದೀರ್ಘ ಕಾಲದಿಂದ ಕೌಟುಂಬಿಕ ಕಲಹ ಇತ್ತು. ಮೃತರ ಮಗ ತಿಪ್ಪೆಸ್ವಾಮಿನಾಯ್ಕ ಮೇಲ್ಮನವಿದಾರರ ಪತಿ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ಪ್ರಶ್ನಿಸಲು ಮೇಲ್ಮನವಿದಾರರು ಜಯಮ್ಮನ ಮನೆಗೆ ಬಂದಾಗ ಮಾತಿನ ಚಕಮಕಿ ನಡೆಯುತ್ತದೆ. ಈ ಸಂದರ್ಭದಲ್ಲಿ ಜಯಮ್ಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗುತ್ತದೆ. ಈ ಬೆಂಕಿಯ ಜ್ವಾಲೆಯಿಂದ ಗಂಭೀರ ಗಾಯಗೊಳಗಾಗಿರುವ ಜಯಮ್ಮ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ.


ಈ ಮಧ್ಯೆ, ವೈದ್ಯರ ಸಮ್ಮುಖದಲ್ಲಿ ಪೊಲೀಸ್ ಅಧಿಕಾರಿ ಮುಂದೆ ಜಯಮ್ಮ ತಮ್ಮ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಆರೋಪಿಗಳ ಮಾಹಿತಿಯನ್ನು ಮರಣಕಾಲೀನ ಹೇಳಿಕೆ ಮೂಲಕ ನೀಡುತ್ತಾರೆ.



ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಂದರ್ಭ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿಯಾಗಿ ಬದಲಾಗುತ್ತಾರೆ. ಮೃತರ ಪುತ್ರ ಬೇರೆಯೇ ಕಥೆಯನ್ನು ಹೇಳಿ ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸಾಕ್ಷ್ಯ ಹೇಳುತ್ತಾರೆ.



ಮರಣಕಾಲೀನ ಹೇಳಿಕೆ ಬಗ್ಗೆ ವೈದ್ಯರು ಮತ್ತು ಪೊಲೀಸ್ ಅಧಿಕಾರಿಯವರು ನೀಡಿದ ಸಾಕ್ಷ್ಯ ನೀಡಿದ್ದರು. ಬೆಂಕಿ ಜ್ವಾಲೆಯಿಂದ ಮೃತರು ಸತ್ತಿದ್ದಾರೆ ಎಂಬುದು ನಿಶ್ಸಂಶಯವಾಗಿದ್ದರೂ ಅದು ಆತ್ಮಹತ್ಯೆಯೋ ಕೊಲೆಯೋ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಉದ್ಭವಿಸಿತ್ತು.



ಪೂರಕ ಸಾಕ್ಷ್ಯಾಧಾರಗಳ ಕೊರತೆಯಿಂದ ಮತ್ತು ಪ್ರತಿಕೂಲ ಸಾಕ್ಷ್ಯಗಳ ಹೇಳಿಕೆಯನ್ನು ಗಮನಿಸಿ ಮರಣಕಾಲೀನ ಹೇಳಿಕೆಯಿದ್ದರೂ ಆರೋಪಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆ ವಿಫಲವಾಗಿದೆ ಎಂದು ತೀರ್ಪು ನೀಡಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.


ಈ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಆರೋಪಿಯನ್ನು ಖುಲಾಸೆಗೊಳಿಸಿದೆ.

Ads on article

Advertise in articles 1

advertising articles 2

Advertise under the article