Freedom of Expression- ಅಭಿವ್ಯಕ್ತಿ ಸ್ವಾತಂತ್ರ್ಯ: ಟಿವಿ ಚಾನೆಲ್ ವಿರುದ್ಧದ FIR ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಅಭಿವ್ಯಕ್ತಿ ಸ್ವಾತಂತ್ರ್ಯ: ಟಿವಿ ಚಾನೆಲ್ ವಿರುದ್ಧದ FIR ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
+ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸುಳ್ಳು ಸುದ್ದಿ ಆರೋಪ
+ TV5 ಕನ್ನಡ ಸುದ್ದಿವಾಹಿನಿಯ ಹಿರಿಯ ವರದಿಗಾರನ ವಿರುದ್ಧದ FIR ರದ್ದು
+ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಆಧಾರರಹಿತ ಸುದ್ದಿ ಬಿತ್ತರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ TV5 ಸುದ್ದಿ ವಾಹಿನಿ ಹಿರಿಯ ವರದಿಗಾರರೊಬ್ಬರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಜೆಡಿಎಸ್ ಬೆಂಗಳೂರು ಘಟಕ ಅಧ್ಯಕ್ಷ ಆರ್ ಪ್ರಕಾಶ್ ದಾಖಲಿಸಿರುವ ಎಫ್ಐಆರ್ ಮತ್ತು ಅದರ ಮುಂದುವರಿದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಪತ್ರಕರ್ತ ಬಿ.ಎಲ್. ದಶರಥ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ನ್ಯಾಯ ಪೀಠ ಈ ಆದೇಶ ಹೊರಡಿಸಿದೆ.
ಕೇದಾರನಾಥ್ ಸಿಂಗ್ Vs ಬಿಹಾರ ರಾಜ್ಯ (ಸುಪ್ರೀಂ ಕೋರ್ಟ್) ಪ್ರಕರಣವನ್ನು ಉಲ್ಲೇಖಿಸಿದ ಹೈಕೋರ್ಟ್ ಸುಪ್ರೀಂ ಕೋರ್ಟ್ ಸಹಿತ ಎಲ್ಲ ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ಸೂಚನೆಯ ನಂತರವೂ ದೂರುದಾರರು ಪ್ರಕರಣದ ವಿಚಾರಣೆಗೆ ಹಾಜರಾಗಿಲ್ಲ, ಅರ್ಜಿದಾರರ ವಿರುದ್ಧ ವೈಯಕ್ತಿಕ ದ್ವೇಷದಿಂದ ಸೇಡು ತೀರಿಸಿಕೊಳ್ಳಲು ದುರುದ್ದೇಶದಿಂದ ಪ್ರಕರಣದ ದಾಖಲಿಸಿರುವಂತೆ ಕಾಣುತ್ತಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹಾಗೂ ಶೇಷಾದ್ರಿಪುರಂ ಠಾಣೆ ಪೊಲೀಸ್ ಅಧಿಕಾರಿಗಳು ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಿದೆ.
ಪ್ರಕರಣದ ವಿವರ
2018ರ ನವೆಂಬರ್ 28ರಂದು TV5 ಕನ್ನಡ ಸುದ್ದಿವಾಹಿನಿ ಆಗಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಸುದ್ದಿ ಬಿತ್ತರಿಸಿತ್ತು.
'ಮುಖ್ಯಮಂತ್ರಿಯವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಬೆಳಗಾವಿ ಅಧಿವೇಶನ ಬಳಿಕ ರಾಜೀನಾಮೆ ನೀಡಲಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ' ಎಂದು ಸುದ್ದಿ ಬಿತ್ತರವಾಗಿತ್ತು.
28ರ ಸಂಜೆ 6 ಗಂಟೆಯಿಂದ ನಿರಂತರವಾಗಿ ಸುಳ್ಳು ಸುದ್ದಿ ಪ್ರಕಟಿಸಿದ್ದಾಾರೆ ಎಂದು ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ದೂರನ್ನು ದಾಖಲಿಸಿರುವ ಶೇಷಾದ್ರಿಪುರಂ ಠಾಣೆ ಪೊಲೀಸರು, ಪತ್ರಕರ್ತ ದಶರಥ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) 153 (ಗಲಭೆಗೆ ಪ್ರಚೋದನೆ) 505 (1) ಬಿ ( ಸಾರ್ವಜನಿಕ ಶಾಂತಿ ಕದಡುವಿಕೆ) ಹಾಗೂ ಮಾಹಿತಿ ಹಕ್ಕು ಕಾಯ್ದೆ 2008ಯ ಸೆಕ್ಷನ್ 66 ಇ ( ಗೌಪ್ಯತೆ ಉಲ್ಲಂಘನೆ) ಆರೋಪದಡಿ FIR ದಾಖಲಿಸಿದ್ದರು. FIR ರದ್ದು ಕೋರಿ ಪತ್ರಕರ್ತ ದಶರಥ್ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRL.P 9683/2018)