Officers Punished with imprisonment | ಲಂಚಕ್ಕೆ ಬಾಯ್ಬಿಟ್ಟ ಅಧಿಕಾರಿಗಳಿಗೆ ಜೈಲು ಶಿಕ್ಷೆ: ಮಂಗಳೂರು ಜಿಲ್ಲಾ ನ್ಯಾಯಾಲಯ ತೀರ್ಪು
ಲಂಚಕ್ಕೆ ಬಾಯ್ಬಿಟ್ಟ ಅಧಿಕಾರಿಗಳಿಗೆ ಜೈಲು ಶಿಕ್ಷೆ: ಮಂಗಳೂರು ಜಿಲ್ಲಾ ನ್ಯಾಯಾಲಯ ತೀರ್ಪು
ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದ ಪ್ರಕರಣದಲ್ಲಿ ಬೆಳ್ತಂಗಡಿಯ ಗ್ರಾಮಕರಣಿಕ ಮತ್ತು ಗ್ರಾಮ ಸಹಾಯಕನಿಗೆ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ತೆಕ್ಕಾರು ಬಾರ್ಯ ಪುತ್ತಿಲ ಗ್ರಾಮದ ವಿಲೇಜ್ ಅಕೌಂಟೆಂಟ್ ಆಗಿದ್ದ ಎನ್. ಶೇಷಾದ್ರಿ ಮತ್ತು ಗ್ರಾಮ ಸಹಾಯಕನಾಗಿದ್ದ ತಿಮ್ಮಪ್ಪ ಪೂಜಾರಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಸದ್ಯಕ್ಕೆ ಈ ಇಬ್ಬರು ಅಪರಾಧಿಗಳು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಘಟನೆಯ ವಿವರ: 2014ರ ಜೂನ್ 24ರಂದು ವಾಸ್ತವ್ಯದ ಮನೆಯನ್ನು ಸಕ್ರಮಗೊಳಿಸಲು ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಗ್ರಾಪಂ ಕಚೇರಿಯಲ್ಲಿ ನಾಗರಿಕರೊಬ್ಬರು ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ, ತೆಕ್ಕಾರು ಬಾರ್ಯ ಪುತ್ತಿಲ ಗ್ರಾಮದ VA ಆಗಿದ್ದ ಎನ್. ಶೇಷಾದ್ರಿ ಮತ್ತು ಗ್ರಾಮ ಸಹಾಯಕ ತಿಮ್ಮಪ್ಪ ಪೂಜಾರಿ ರೂ. 15,000/- ಲಂಚ ನೀಡಬೇಕೆಂದು ತಾಕೀತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಸ್.ವಿಜಯ ಪ್ರಸಾದ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ CrPC ಕಲಂ 235 ಅಡಿಯಲ್ಲಿ ಭ್ರಷ್ಟಾಚಾರ ತಡೆ ಕಾಯಿದೆ 1988 ಕಲಂ 7ರಂತೆ ಮೂರು ವರ್ಷಗಳ ಸಾದಾ ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿದ್ದಾರೆ. ಆರೋಪಿಗಳು ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 8 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.
ಇದರ ಜೊತೆಗೆ, ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 13(1) (ಡಿ) ಹಾಗೂ 13(2)ರಲ್ಲಿ ನಾಲ್ಕು ವರ್ಷಗಳ ಸಾದಾ ಸಜೆ ಹಾಗೂ 30,000 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 8 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದಿಸಿದ್ದರು.