ಮಗನನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿದ ನ್ಯಾಯಾಧೀಶರು ಈಗ ರಾಜ್ಯಕ್ಕೆ ಫೇಮಸ್!!
ಮಗನನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿದ ನ್ಯಾಯಾಧೀಶರು ಈಗ ರಾಜ್ಯಕ್ಕೆ ಫೇಮಸ್!!
ಪ್ರಧಾನ ಸಿವಿಲ್ ನ್ಯಾಯಾಧೀಶರೊಬ್ಬರು ತಮ್ಮ ಪುತ್ರನನ್ನು ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರ ಮಾದರಿ ನಡೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಮಹೇಂದ್ರ ಅವರು ತಮ್ಮ ಮೂರುವರೆ ವರ್ಷದ ಪುತ್ರನನ್ನು ಸರ್ಕಾರಿ ಅಂಗನವಾಡಿಗೆ ಸೇರ್ಪಡೆ ಮಾಡಿದ್ದಾರೆ. ಚನ್ನಪಟ್ಟಣದ ಕೋಟೆ ಆಂಜನೇಯ ದೇವಾಲಯ ಬಳಿ ಇರುವ ಅಂಗನವಾಡಿ ಕೇಂದ್ರಕ್ಕೆ ಪತ್ನಿಯ ಜೊತೆಗೆ ಬಂದ ನ್ಯಾಯಧೀಶರು, ಪುತ್ರ ಎಚ್.ಎಂ. ನಿದರ್ಶ್ ನನ್ನು ಅಂಗನವಾಡಿಗೆ ಸೇರ್ಪಡೆ ಮಾಡಿದರು.
'ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ. ಸರ್ಕಾರ ಕೂಡ ಸಾಕಷ್ಟು ಸವಲತ್ತು ನೀಡುತ್ತಿದೆ. ಸರಕಾರಿ ಶಾಲೆ ಎಂದರೆ ಕೆಲ ಪೋಷಕರು ಕೀಳರಿಮೆ ತೋರುತ್ತಿದ್ದಾರೆ. ನನ್ನ ಈ ನಡೆ ಅಂಥವರಿಗೆ ಪ್ರೇರಣೆಯಾಗಲಿ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಸ್ವತಃ ನಾನು ಸರಕಾರಿ ಶಾಲೆ ಮತ್ತು ಕಾಲೇಜಿನಲ್ಲೇ ವಿದ್ಯಾಭ್ಯಾಸ ಮಾಡಿದ್ದೇನೆ. ನನ್ನ ಮಗನಿಗೂ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬ ಮಹದಾಸೆ ಇತ್ತು. ಅದೀಗ ಪೂರ್ಣಗೊಂಡಿದೆ' ಎಂದು ಮಹೇಂದ್ರ ಮಾಧ್ಯಮಕ್ಕೆ ತಿಳಿಸಿದರು.
'ಸರಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ತಾತ್ಸಾರ ಭಾವನೆ ಇದೆ. ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಕಳಪೆ ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಾಲೆಗಳಿಗೆ ಸೇರಿಸುವ ಪೋಷಕರಿಗೆ ನ್ಯಾಯಾಧೀಶರ ನಡೆ ಮಾದರಿಯಾಗುತ್ತಾರೆ' ಎಂದು ಸಿಡಿಪಿಒ ಎಂ.ಕೆ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.