Execution Case | 6 ತಿಂಗಳಲ್ಲಿ ಅಮಲ್ಜಾರಿ ಪ್ರಕರಣ ಇತ್ಯರ್ಥ ಮಾಡಿ, ಇಲ್ಲವೇ ಕಾರಣ ಕೊಡಿ: ವಿಚಾರಣಾ ನ್ಯಾಯಾಲಗಳಿಗೆ ಸುಪ್ರೀಂ ಕೋರ್ಟ್ ತಾಕೀತು
6 ತಿಂಗಳೊಳಗೆ ಅಮಲ್ಜಾರಿ ಪ್ರಕರಣ ಇತ್ಯರ್ಥ ಮಾಡಿ, ಇಲ್ಲವೇ ಕಾರಣ ಕೊಡಿ: ವಿಚಾರಣಾ ನ್ಯಾಯಾಲಗಳಿಗೆ ಸುಪ್ರೀಂ ಕೋರ್ಟ್ ತಾಕೀತು
ಅಮಲ್ಜಾರಿ ಪ್ರಕರಣಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಬೇಕು; ಸಾಧ್ಯವಾಗದಿದ್ದರೆ ನ್ಯಾಯಾಲಯಗಳು ಸಮರ್ಪಕ ಕಾರಣಗಳನ್ನು ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ತಾಕೀತು ಮಾಡಿದೆ.
ಜಸ್ಟಿಸ್ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಮಾಡಿದ್ದು, ಅರ್ಜಿ ಸಲ್ಲಿಸಿದ ಆರು ತಿಂಗಳೊಳಗೆ ಪ್ರಕರಣಗಳನ್ನು ಮುಗಿಸಬೇಕು ಎಂದು ತೀರ್ಪಿನಲ್ಲಿ ತಾಕೀತು ಮಾಡಲಾಗಿದೆ.
20-03-2019ರಲ್ಲಿ ಸಲ್ಲಿಸಿರುವ ತಮ್ಮ ಅಮಲ್ಜಾರಿ ಪ್ರಕರಣದಲ್ಲಿ ತ್ವರಿತ ಪ್ರಕ್ರಿಯೆ ನಡೆಸಬೇಕು ಎಂದು ಸಲ್ಲಿಸಿದ ತಮ್ಮ ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಡಿಕ್ರಿದಾರರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ಮೊರೆ ಹೋಗಿದ್ದರು. ಈ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ಕೂಡ ನಿರಾಕರಿಸಿತ್ತು.
ಈ ಹಿನ್ನೆಲೆಯಲ್ಲಿ ಡಿಕ್ರಿದಾರರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು. ರಾಹುಲ್ ಶಾ Vs ಜಿನೇಂದ್ರ ಕುಮಾರ್ ಗಾಂಧಿ (2021) 6 SCC 418 ಪ್ರಕರಣವನ್ನು ಉಲ್ಲೇಖಿಸಿದ ಡಿಕ್ರಿದಾರರು, ಈ ತೀರ್ಪು ಅಮಲ್ಜಾರಿ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ ಎಂಬ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ವಾದವನ್ನು ವಿರೋಧಿಸಿದ್ದರು. ಸ್ವತಃ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶಕ ತತ್ವಗಳನ್ನು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಗಾಳಿಗೆ ತೂರಿದೆ ಎಂದು ಡಿಕ್ರಿದಾರರು ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ್ದರು.
2019ರಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಅಮಲ್ಜಾರಿ ಪ್ರಕರಣಗಳಲ್ಲಿ ಆಗುತ್ತಿರುವ ಅನಗತ್ಯ ವಿಳಂಬವನ್ನು ತಡೆಯಲು ಗಮನ ನೀಡುವಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿತ್ತು. ಅಮಲ್ಜಾರಿ ಪ್ರಕರಣ ಸಲ್ಲಿಸಿದ ಆರು ತಿಂಗಳೊಳಗೆ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು, ಇಲ್ಲವೇ ಕಡ್ಡಾಯವಾಗಿ ಸೂಕ್ತ ಕಾರಣಗಳನ್ನು ದಾಖಲಿಸಬೇಕು ಎಂದು ನ್ಯಾಯಪೀಠ ಹೇಳಿತ್ತು.
ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥ ಮಾಡಲು ವಿಫಲರಾದರೆ, ಡಿಕ್ರಿದಾರರು ತಮ್ಮ ವ್ಯಾಜ್ಯದಲ್ಲಿ ತಮಗೆ ದೊರೆತ ಡಿಕ್ರಿಯ ನಿಜವಾದ ಫಲವನ್ನು ಅನುಭವಿಸಲು ವಿಫಲರಾಗುತ್ತಾರೆ ಎಂಬುದಾಗಿ ಈ ಪ್ರಕರಣದಲ್ಲಿ ಸ್ಪಷ್ಟವಾಗಿ ತಿಳಿಸಿತ್ತು.
ಪ್ರಕರಣ: ಭೋಜ್ ರಾಜ್ ಗಾರ್ಗ್ Vs ಗೋಯಲ್ ಎಜುಕೇಷನಲ್ ಆಂಡ್ ವೆಲ್‌ಫೇರ್ ಸೊಸೈಟಿ
ಸುಪ್ರೀಂ ಕೋರ್ಟ್, SLP(C) 19654/2022 Dated: 18-11-2022
Referred Case:
ರಾಹುಲ್ ಶಾ Vs ಜಿನೇಂದ್ರ ಕುಮಾರ್ ಗಾಂಧಿ (2021) 6 SCC 418
...