ಪೊಲೀಸ್ ಅಧಿಕಾರಿಗಳ ನೈತಿಕ ಪೊಲೀಸ್‌ಗಿರಿ ಒಪ್ಪಲಾಗದು: ಸುಪ್ರೀಂ ಕೋರ್ಟ್
ಪೊಲೀಸ್ ಅಧಿಕಾರಿಗಳ ನೈತಿಕ ಪೊಲೀಸ್‌ಗಿರಿ ಒಪ್ಪಲಾಗದು: ಸುಪ್ರೀಂ ಕೋರ್ಟ್
ಪೊಲೀಸ್ ಅಧಿಕಾರಿಗಳೇ ನೈತಿಕ ಪೊಲೀಸ್‌ಗಿರಿಗೆ ಮುಂದಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪೊಲೀಸರು ಯಾವುದೇ ನಾಗರಿಕರಿಂದ ಭೌತಿಕ ಅಥವಾ ವಸ್ತು ರೂಪದಲ್ಲಿ ಏನಾದರೂ ಡಿಮ್ಯಾಂಡ್ ಮಾಡಿ ಪಡೆಯುವಂತಿಲ್ಲ ಎಂದು ಅದು ಹೇಳಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF) ಕಾನ್ಸ್‌ಟೆಬಲ್ ಸಂತೋಷ ಕುಮಾರ್ ಪಾಂಡೆ ಎಂಬವರನ್ನು ಸೇವೆಯಿಂದ ವಜಾಗೊಳಿಸಿದ್ದ ಶಿಸ್ತು ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ಜೆ.ಕೆ.ಮಾಹೇಶ್ವರಿ ಅವರಿದ್ದ ನ್ಯಾಯಪೀಠ, ಸಂತೋಷ ಕುಮಾರ್ ಪಾಂಡೆ ಅವರನ್ನು ಶೇ. 50ರಷ್ಟು ಬಾಕಿ ವೇತನದ ಜೊತೆಗೆ ಮತ್ತೆ ಸೇವೆಯಲ್ಲಿ ಮುಂದುವರಿಸಬೇಕು ಎಂಬ ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಗುಜರಾತ್‌ನ ವಡೋದರಾ ದಲ್ಲಿ ಇರುವ ICCL ಟೌನ್‌ಶಿಪ್‌ನಲ್ಲಿ ಸಂತೋಷ್ ಕುಮಾರ್ ಪಾಂಡೆ ಕರ್ತವ್ಯ ನಿರ್ವಹಿಸುತ್ತಿದ್ದರು. 2001ರ ಅ.26ರಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪಾಂಡೆ ನಾಗರಿಕರ ಜೊತೆಗೆ ಅಸಭ್ಯ ಹಾಗೂ ಅನುಚಿತ ವರ್ತನೆ ತೋರಿದ್ದರು.
ತಮ್ಮ ಭಾವಿ ಪತ್ನಿಯೊಂದಿಗೆ ಬೈಕ್‌ನಲ್ಲಿ ಟೌನ್‌ಶಿಪ್‌ಗೆ ಬರುತ್ತಿದ್ದ ಮಹೇಶ್ ಚೌಧರಿ ಅವರನ್ನು ನಿಲ್ಲಿಸಿ ವಿಚಾರಣೆ ನಡೆಸಿದ್ದರು. ಇಬ್ಬರನ್ನು ಪ್ರಶ್ನಿಸಿದ್ದ ಪಾಂಡೆ, ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದರು. "ನಿನ್ನ ಪ್ರೇಯಸಿಯ ಜೊತೆಗೆ ಕೆಲ ಕಾಲ ಏಕಾಂತದ ಸಮಯ ಕಳೆಯುತ್ತೇನೆ" ಎಂದು ಚೌಧರಿಗೆ ಹೇಳಿದ್ದರು.
ಇದನ್ನು ತೀವ್ರವಾಗಿ ಪ್ರತಿಭಟಿಸಿದ್ದ ಚೌಧರಿ ಪಾಂಡೆ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಏನಾದರೂ ವಸ್ತುವನ್ನು ಬಹುಮಾನವಾಗಿ ಕೊಡುವಂತೆ ಪಾಂಡೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಚೌಧರಿ ತನ್ನ ವಾಚನ್ನು ಪಾಂಡೆಗೆ ನೀಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಮರುದಿನ, ಸಂತ್ರಸ್ತ ಚೌಧರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಇಲಾಖೆ ಪಾಂಡೆ ಅವರನ್ನು ಸೇವೆಯಿಂದ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಪಾಂಡೆ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:
ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ