-->
Dept Exam : ಇಲಾಖಾ ಪರೀಕ್ಷೆಗಳ ಐತಿಹ್ಯ ಮತ್ತು ಹಿನ್ನೆಲೆ ಕುರಿತ ಸಮಗ್ರ ಮಾಹಿತಿ: ಶ್ರೀ ಪ್ರಕಾಶ್ ನಾಯಕ್ ಲೇಖನ

Dept Exam : ಇಲಾಖಾ ಪರೀಕ್ಷೆಗಳ ಐತಿಹ್ಯ ಮತ್ತು ಹಿನ್ನೆಲೆ ಕುರಿತ ಸಮಗ್ರ ಮಾಹಿತಿ: ಶ್ರೀ ಪ್ರಕಾಶ್ ನಾಯಕ್ ಲೇಖನ

ಇಲಾಖಾ ಪರೀಕ್ಷೆಗಳ ಐತಿಹ್ಯ ಮತ್ತು ಹಿನ್ನೆಲೆ ಕುರಿತ ಸಮಗ್ರ ಮಾಹಿತಿ: ಶ್ರೀ ಪ್ರಕಾಶ್ ನಾಯಕ್ ಲೇಖನ





ಸರಕಾರಿ ಸೇವೆಗೆ ಸೇರಿದ ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ನೌಕರರು/ ಅಧಿಕಾರಿಗಳು KCS (Service and Kannada language examination) 1974 ಪ್ರಕಾರ ತಮ್ಮ ಇಲಾಖೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲೇಬೇಕು. ಇದಕ್ಕೆ ತಪ್ಪಿದ್ದಲ್ಲಿ ಆಯಾ ನೌಕರರ ವೇತನ ಬಡ್ತಿ, ಮುಂಬಡ್ತಿ, ಪದೋನ್ನತಿ(ಪ್ರಮೋಷನ್) ಪರೀಕ್ಷಾರ್ಥ ಅವಧಿ (ಪ್ರೊಬೇಷನರಿ) ಘೋಷಣೆ ಮುಂತಾದ ಸೇವಾ ಸೌಲಭ್ಯಗಳನ್ನು ಮಂಜೂರು ಮಾಡಲು ತೊಂದರೆ ಆಗುವುದು.



ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ ಸರಕಾರಿ ಸೇವೆಗೆ ಸೇರಿದ ಎಲ್ಲಾ ವರ್ಗದ ನೌಕರರು ಕನ್ನಡ ಭಾಷೆಯ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಲೇಬೇಕು. ಆದರೆ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್‌.ಸಿ. ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರೆ, ಅಥವಾ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ತೆಗೆದುಕೊಂಡು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.



ಹಾಗೆಯೆ ಅಕೌಂಟ್ಸ್ ಹೈಯರ್ ಮತ್ತು ಜನರಲ್ ಲಾ ಪರೀಕ್ಷೆಗಳು 90% ಶೇ ನೌಕರರಿಗೆ ನಿಗದಿಪಡಿಸಿದ (obligatory) ಪರೀಕ್ಷೆಗಳಾಗಿವೆ. 2012 ರ ನಂತರ ಸೇವೆಗೆ ಸೇರಿದ ಸರಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕಾಗಿದೆ.



ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿರುವ ಅಥವಾ ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ಮೂರು ವರ್ಷಗಳನ್ನು ಪೂರೈಸಿರುವ ಸರಕಾರಿ ನೌಕರರು ಎಸ್.ಎ.ಎಸ್. ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶವಿದೆ ಈ ಪರೀಕ್ಷೆಯಲ್ಲಿ ಮೂರು ಭಾಗಗಳಿವೆ. ಪರೀಕ್ಷಾ ಕೇಂದ್ರ ಬೆಂಗಳೂರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪತ್ರಾಂಕಿತ ಹುದ್ದೆಯಾದ ಅಕೌಂಟ್ ಆಫೀಸರ್ ಹುದ್ದೆಗೆ ಭಡ್ತಿ ಪಡೆಯುವ ಅವಕಾಶವಿದೆ.


ಭಾಷಾವಾರು ಪ್ರಾಂತ್ಯಗಳ ರಚನೆಯಾದ ಬಳಿಕ ವಿಶಾಲ ಕರ್ನಾಟಕದ ಏಕೀಕರಣವಾಯಿತು. ಬಾಂಬೆ; ಮದ್ರಾಸ್; ಹೈದರಾಬಾದ್ ಪ್ರಾಂತ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ ನೌಕರರು ಹಳೇ ಮೈಸೂರು ಪ್ರಾಂತ್ಯದೊಂದಿಗೆ ಸೇರಿ ಮೈಸೂರು ರಾಜ್ಯದ ಸರಕಾರಿ ನೌಕರರಾದರು. 1973ರಲ್ಲಿ ಮೈಸೂರು ಕರ್ನಾಟಕ ರಾಜ್ಯವೆಂಬ ಹೆಸರು ಪಡೆಯಿತು .1956 ರಿಂದ 1974ರ ವರೆಗೆ ಸರಕಾರಿ ನೌಕರರಿಗೆ ಯಾವುದೇ ಇಲಾಖೆ ಪರೀಕ್ಷೆಗಳನ್ನು ನಿಗದಿಪಡಿಸಿರಲಿಲ್ಲ. ಸರಕಾರಿ ನೌಕರರ ಕರ್ತವ್ಯದ ಗುಣಮಟ್ಟವು ಅತೃಪ್ತಿಕರವೆ೦ದು ಕಂಡು ಬಂದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಗೆ ಪ್ರತ್ಯೇಕವಾದ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಲಾಯಿತು.


ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ನೀಡುವ ಕ್ರಮ ಪ್ರಾರಂಭವಾಯಿತು. ಕನ್ನಡ ಭಾಷಾ ಪರೀಕ್ಷೆ ಉತ್ತೀರ್ಣರಾದವರಿಗೆ ಉತ್ತೇಜನ ನೀಡುವ ಸಲುವಾಗಿ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಲಾಯಿತು. 1987ನೇ ಇಸವಿಯ ವರೆಗೆ ಸರ್ಕಾರಿ ಸೇವೆಗೆ ಸೇರ್ಪಡೆ ಆದವರಿಗೆ ಈ ವೇತನ ಬಡ್ತಿಯ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಆದರೆ, ಆ ಬಳಿಕ ಇದನ್ನು ನಿಲುಗಡೆಗೊಳಿಸಲಾಗಿದೆ.


1974 ರವರೆಗೆ ಎಲ್ಲಾ ಇಲಾಖೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಆಡಳಿತ ವ್ಯವಹಾರ ನಡೆಯುತ್ತಿತ್ತು. 1974 ರ ಬಳಿಕ ಆಡಳಿತ ವ್ಯವಹಾರ ಕನ್ನಡದಲ್ಲಿ ಎಂಬ ನಿಯಮ ಜಾರಿಯಾಯಿತು. ಪದವಿಯನ್ನು ಹೊಂದಿ ಹೊಸದಾಗಿ ಸೇವೆಗೆ ಸೇರಿದ ಎಸ್.ಡಿ.ಎ; ಟೈಪಿಸ್ಟ್; ಟೈಪಿಸ್ಟ್ ಕಾಪಿಸ್ಟ್ ಮುಂತಾದ ಹುದ್ದೆಗಳಿಗೆ ಸೇರಿದ ನೌಕರರಿಗೆ ನಾಲ್ಕು Advance increment ನೀಡಲಾಗುತ್ತಿತ್ತು. ಈ ಪದ್ಧತಿಯನ್ನು ಕೂಡಾ ಕಾಲಕ್ರಮೇಣ ನಿಲ್ಲಿಸಲಾಯಿತು.


ಈಗ ನೂತನವಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರು 2 ವರ್ಷಗಳ ಪರೀಕ್ಷಾರ್ಥ ಅವಧಿಯಲ್ಲಿ ನಿಗದಿಪಡಿಸಿದ (obligatory) ಪರೀಕ್ಷೆ ತೇರ್ಗಡೆ ಮಾಡಬೇಕು. ತಪ್ಪಿದ್ದಲ್ಲಿ ಆತನಿಗೆ ಮೂರನೇ ವರ್ಷದ ವೇತನ ಬಡ್ತಿಯನ್ನು ನೀಡಲಾಗುವುದಿಲ್ಲ. ಇಲಾಖಾ ಪರೀಕ್ಷೆಗಳನ್ನು ಪಾಸು ಮಾಡಿದ ಅವಧಿಯ ಬಳಿಕ ತಡೆಹಿಡಿದ ವೇತನ ಬಡ್ತಿಗಳನ್ನು ಮಂಜೂರು ಮಾಡಲಾಗುವುದು. ಹಾಗೂ ಪರೀಕ್ಷಾರ್ಥ ಅವಧಿಯನ್ನು (Probationary Period) ಘೋಷಿಸಲಾಗುವುದು.



ಒಂದು ವೇಳೆ ಓರ್ವ ಸರಕಾರಿ ನೌಕರ ಡಿ ಗ್ರೂಪಿನಿಂದ ಸಿ ಗ್ರೂಪಿಗೆ ಬಡ್ತಿ ಹೊಂದಿದಲ್ಲಿ ಆತನು ಸ್ಥಾನಾ ಪನ್ನ ಅವಧಿಯಲ್ಲಿ (officiating period) ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗ ಬೇಕಾಗಿದೆ.ಒಂದು ವೇಳೆ ಆತನಿಗೆ 45 ವರ್ಷ ವಯಸ್ಸಾಗಿದ್ದಲಿ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗುವುದರಿಂದ ವಿನಾಯಿತಿ ಇದೆ. ಆದರೆ ಆತನಿಗೆ ವೇತನ ಬಡ್ತಿ ಮಾತ್ರ ಮಂಜೂರಾಗುವುದು. ಪದೋನ್ನತಿಗೆ ಅವಕಾಶ ಇರುವುದಿಲ್ಲ. ಇದರ ಜೊತೆಗೆ ಇತ್ತೀಚೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸ್‌ ಆಗಬೇಕು ಎಂಬ ನಿಯಮವನ್ನು ಸರ್ಕಾರಿ ನೌಕರರಿಗೆ ಕಡ್ಡಾಯ ಮಾಡಲಾಗಿದೆ.



ಇಲಾಖಾ ಪರೀಕ್ಷೆಗಳು ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುತ್ತದೆ. ಪ್ರತಿ ವರ್ಷ ಎರಡು ಬಾರಿ ಇಲಾಖಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನ್ಯಾಯಾಂಗ ಇಲಾಖೆಯಲ್ಲಿ ಶೀಘ್ರ ಲಿಪಿಗಾರರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಜನರಲ್ ಲಾ ಭಾಗ -1 ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಉಳಿದಂತೆ ಎಸ್.ಡಿ.ಎ; ಎಫ್.ಡಿ.ಎ.ರವರಿಗೆ ಅಕೌಂಟ್ಸ್ ಹಯರ್; ರಿಜಿಸ್ಟ್ರೇಷನ್ ಜನರಲ್ ಲಾ ಭಾಗ-1 ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದೆ.



ಟೈಪಿಸ್ಟ್: ಬೆರಳಚ್ಚುಗಾರರು (ಟೈಪಿಸ್ಟ್) ಪ್ರತಿಕಾರರು (ಕಾಪಿಸ್ಟ್) ಹುದ್ದೆಗೆ ಯಾವುದೇ ಕಡ್ಡಾಯ ಪರೀಕ್ಷೆಗಳನ್ನು ನಿಗದಿ ಮಾಡಿಲ್ಲ. ಆದರೆ, ಪ್ರಮೋಷನ್ ಯಾ ಪದೋನ್ನತಿ ಸಿಗಬೇಕಾಗಿದ್ದರೆ ಅವರಿಗೆ Accounts Higher General Law - Part 1 (ಅಕೌಂಟ್ಸ್ ಹೈಯರ್ ಜನರಲ್ ಲಾ ಭಾಗ-1) ಮತ್ತು Registration Exam (ರಿಜಿಸ್ಟ್ರೇಷನ್ ಪರೀಕ್ಷೆ)ಯಲ್ಲಿ ಉತ್ತೀರ್ಣರಾಗಬೇಕಾಗಿದೆ.

ನ್ಯಾಯಾಂಗ ಇಲಾಖಾ ನೌಕರರಿಗೆ General Law Part-2 (ಜನರಲ್ ಲಾ ಭಾಗ-2) ಪರೀಕ್ಷೆ ಕಡ್ಡಾಯವಲ್ಲ. ಹಾಗಿದ್ದರೂ ನ್ಯಾಯಾಂಗ ಇಲಾಖೆಯ ಪ್ರತಿಯೊಬ್ಬ ನೌಕರೂ ಈ ಪರೀಕ್ಷೆಯನ್ನು ಕಡ್ಡಾಯ ಪರೀಕ್ಷೆ ಎಂದು ತಿಳಿದು ಅದನ್ನು ಎದುರಿಸಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸುತ್ತಿದ್ದಾರೆ.



ಒಬ್ಬ ಡಿ ಗ್ರೂಪ್ ನೌಕರ ಸಿ ಗ್ರೂಪ್ ಹುದ್ದೆಗೆ ಬಡ್ತಿ ಹೊಂದಿ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣನಾಗದೆ ಇದ್ದಲ್ಲಿ ಸಾಮಾನ್ಯವಾಗಿ ಆತನನ್ನು ಮತ್ತೆ ಡಿ ಗ್ರೂಪ್ ಹುದ್ದೆಗೆ ಹಿಂಬಡ್ತಿ ಮಾಡುವಂತಿಲ್ಲ. ವೇತನ ಬಡ್ತಿಯನ್ನು ತಡೆ ಹಿಡಿಯಬಹುದು. ಒಂದು ವೇಳೆ, ಡಿ ಗ್ರೂಪ್ ನೌಕರನಿಗೆ 45 ವರ್ಷ ವಯಸ್ಸಾಗಿದ್ದರೆ ಇಲಾಖಾ ಪರೀಕ್ಷೆಗಳಲ್ಲಿ ಪಾಸ್ ಆಗುವುದಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ ಸಿ ಹುದ್ದೆಯಲ್ಲಿ ಪದೋನ್ನತಿ ಅಂಥವರಿಗೆ ಸಿಗುವ ಅವಕಾಶವಿಲ್ಲ. ಪದೋನ್ನತಿ ದೊರಕಬೇಕಾದರೆ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲೇಬೇಕು.



ಈ ರೀತಿಯ ಇಲಾಖಾ ಪರೀಕ್ಷೆಗಳಿಗೆ ಹಾಜರಾಗುವ ನೌಕರರಿಗೆ ಗರಿಷ್ಟ ಎರಡು ಬಾರಿ ಅನ್ಯ ಕಾರ್ಯ ನಿಮಿತ್ತ (OOD) ಅನುಮತಿ ನೀಡಲಾಗುವುದು. ಎರಡು ಬಾರಿಯ ಪ್ರಯತ್ನದಲ್ಲಿ ಉತ್ತೀರ್ಣರಾಗಲು ವಿಫಲರಾದಲ್ಲಿ ಆ ಬಳಿಕ ಸಾಂದರ್ಭಿಕ ರಜೆಯನ್ನು ಬಳಸಬಹುದು. ‌ ಪರೀಕ್ಷಾ ಕೇಂದ್ರ ದೂರವಿದ್ದಲ್ಲಿ ತಗಲುವ ಪ್ರಯಾಣದ ವೆಚ್ಚವನ್ನು ( TA) ನೀಡಲಾಗುವುದು. ಆದರೆ ದಿನಭತ್ಯೆ (DA) ಸಿಗುವುದಿಲ್ಲ. ಇಲಾಖಾ ಪರೀಕ್ಷೆಗಳಲ್ಲಿ ಪರೀಕ್ಷೆಗೆ ಸಂಬಂಧಪಟ್ಟ ವಿಷಯದ ಕಾಯಿದೆ ನಿಯಮಗಳ ಪುಸ್ತಕಗಳನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಲು ಅವಕಾಶವಿದೆ. ಆದರೆ ಗೈಡ್ ಒಯ್ಯುವುದನ್ನು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.



ಇಲಾಖಾ ಪರೀಕ್ಷೆಗಳು ಕಬ್ಬಿಣದ ಕಡಲೆಕಾಯಿಯಲ್ಲ. ಒಮ್ಮೆ ಪರೀಕ್ಷಾ ವಿಷಯಕ್ಕೆ ಸಂಬಂಧಪಟ್ಟ ಕಾಯಿದೆ ನಿಯಮಗಳ ಪುಸ್ತಕವನ್ನು ಕಣ್ಣಾಡಿಸಿದಲ್ಲಿ ಉತ್ತೀರ್ಣರಾಗುವ ಎಲ್ಲಾ ಅವಕಾಶಗಳು ಇವೆ.


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಕಳೆದ ಹಲವಾರು ದಶಕಗಳಿಂದ ಸರಕಾರಿ ನೌಕರರಿಗೆ ಇಲಾಖಾ ಪರೀಕ್ಷೆಗೆ ತರಬೇತಿ ತರಗತಿಗಳನ್ನು ನಡೆಸುತ್ತಿದೆ. . ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ನೌಕರರು ಈ ತರಬೇತಿ ತರಗತಿಗಳ ಸದುಪಯೋಗವನ್ನು ಪಡೆಯಬೇಕೆಂದು ಕೋರಲಾಗಿದೆ.


ಸಮಗ್ರ ಮಾಹಿತಿ: ಶ್ರೀ ಪ್ರಕಾಶ್ ನಾಯಕ್; ನಿಕಟಪೂರ್ವ ಜಿಲ್ಲಾಧ್ಯಕ್ಷರು; ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ; ದಕ್ಷಿಣ ಕನ್ನಡ ಜಿಲ್ಲಾ ಶಾಖೆ; ಮಂಗಳೂರು



Photo : Sri Prakash Nayak, Mangaluru

Ads on article

Advertise in articles 1

advertising articles 2

Advertise under the article