ಕ್ರಿಮಿನಲ್ ಪ್ರಕರಣ ಮಾಹಿತಿ ಮುಚ್ಚಿಟ್ಟು ಜಡ್ಜ್ ಹುದ್ದೆಗೆ: ವಕೀಲ ವಿರುದ್ಧದ FIR ರದ್ದು ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್
ಕ್ರಿಮಿನಲ್ ಪ್ರಕರಣ ಮಾಹಿತಿ ಮುಚ್ಚಿಟ್ಟು ಜಡ್ಜ್ ಹುದ್ದೆಗೆ: ವಕೀಲ ವಿರುದ್ಧದ FIR ರದ್ದು ಅರ್ಜಿ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್
ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡದ ವಕೀಲರ ವಿರುದ್ಧ ಪೊಲೀಸರು ಸಲ್ಲಿಸಿರುವ ಎಫ್‌ಐಆರ್‌ನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿ ವಕೀಲರಾದ ಸೋಮವಾರಪೇಟೆ ತಾಲೂಕಿನ ವಕೀಲ ಪಾಲಾಕ್ಷ ಎಸ್.ಎಸ್. , ತಮ್ಮ ವಿರುದ್ಧ ವಿಚಾರಣೆಗೆ ಬಾಕಿ ಇದ್ದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಈ ಮಾಹಿತಿಯನ್ನು ಗೌಪ್ಯವಾಗಿಟ್ಟ ವಕೀಲ ಪಾಲಾಕ್ಷ ವಿರುದ್ಧ ಆರೋಪಪಟ್ಟಿ ದಾಖಲಾಗಿತ್ತು. ಇದನ್ನು ವಜಾಗೊಳಿಸಬೇಕು ಎಂದು ಪಾಲಾಕ್ಷ ಹೈಕೋರ್ಟ್ ಕದ ತಟ್ಟಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಪ್ರಕರಣವನ್ನು ಇತ್ಯರ್ಥ ಮಾಡಿದೆ.
ಭದ್ರತೆ ಇರುವ ಉದ್ಯೋಗ ಎಂಬುದು ಮೌಲ್ಯಯುತ ಆಸ್ತಿಗೆ ಸಮಾನವಾದದ್ದು ಎಂದು ಹೇಳಿರುವ ನ್ಯಾಯಪೀಠ, ಮೋಸದಿಂದ ಯಾವುದೇ ಸೊತ್ತನ್ನು ತನ್ನ ಬಳಿ ಇಟ್ಟುಕೊಳ್ಳುವುದು ವಂಚನೆ ಎಸಗಿರುವುದುಕ್ಕೆ ಸಮಾನವಾದ್ದು. ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 415ಕ್ಕೆ ಸಮಾನವಾದ ಅಪರಾಧವಾಗಿದೆ. ಹೀಗಾಗಿ ಭದ್ರತೆ ಇರುವ ಉದ್ಯೋಗ ಪಡೆದುಕೊಳ್ಳಲು ಸುಳ್ಳು ಮಾಹಿತಿ ನೀಡುವುದೂ ವಂಚನೆ ಎಸಗಿದಂತೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಇದು ಕಣ್ತಪ್ಪಿನಿಂದಾದ ಪ್ರಮಾದ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಗ್ರೂಪ್ ಡಿ ನೌಕರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪಾಗಿದೆ ಎಂದರೆ ಒಪ್ಪಬಹುದು. ಆದರೆ, ಸತತ 13 ವರ್ಷಗಳ ಕಾಲ ವಕೀಲ ವೃತ್ತಿ ಮಾಡಿ ಜಿಲ್ಲಾ ನ್ಯಾಯಾದೀಶರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಈ ತಪ್ಪು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಸಂಕ್ಷಿಪ್ತ ವಿವರ
2019ರಲ್ಲಿ ಕರೆಯಾಗಿದ್ದ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಶಿವಮೊಗ್ಗ ನಿವಾಸಿಯಾಗಿದ್ದ ಸದ್ಯ ಸೋಮವಾರಪೇಟೆ ವಾಸಿ ಪಾಲಾಕ್ಷ ಎಸ್.ಎಸ್. ಅರ್ಜಿ ಸಲ್ಲಿಸಿದ್ದರು. 13 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದ ಪಾಲಾಕ್ಷ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ಬಗ್ಗೆ ತಿಳಿಸಬೇಕು ಎಂಬ ಷರತ್ತು ಇಡಲಾಗಿದ್ದರೂ ತಮ್ಮ ವಿರುದ್ಧದ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಅಭ್ಯರ್ಥಿ ಪಾಲಾಕ್ಷ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಜಿಲ್ಲಾ ನ್ಯಾಯಾಧೀಶರಿಗೆ ಒಟ್ಟು ಮೂರು ಹೆಸರುಗಳಲ್ಲಿ ಪಾಲಾಕ್ಷ ಅವರದ್ದೂ ಹೆಸರಿತ್ತು.
ಆದರೆ, ಹೈಕೋರ್ಟ್‌ಗೆ ಬರೆಯಾಗಿದ್ದ ಅನಾಮಧೇಯ ಪತ್ರವೊಂದರಲ್ಲಿ ಪಾಲಾಕ್ಷ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಹೈಕೋರ್ಟ್ ರಿಜಿಸ್ತ್ರಿ ಮಾಹಿತಿ ಕೇಳಿ ನೋಟೀಸ್ ನೀಡಿತ್ತು.
ಇದಕ್ಕೆ ಉತ್ತರಿಸಿದ್ದ ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ವಿರುದ್ಧ ಎಲ್ಲ ಪ್ರಕರಣಗಳು ಇತ್ಯರ್ಥಗೊಂಡಿದೆ. ಆದರೆ, ಒಂದು ಮಾತ್ರ ವಿಚಾರಣೆ ಹಂತದಲ್ಲಿ ಇದೆ. ಇದು ಕಣ್ತಪ್ಪಿನಿಂದಾಗಿ ಅರ್ಜಿಯಲ್ಲಿ ನಮೂದಿಸಲು ಬಿಟ್ಟುಹೋಗಿದೆ ಎಂದು ಲಿಖಿತ ಹೇಳಿಕೆ ನೀಡಿದ್ದರು.
ಇದನ್ನು ವಂಚನೆ ಪ್ರಕರಣ ಎಂದು ಪರಿಗಣಿಸಿ ಹೈಕೋರ್ಟ್ ರಿಜಿಸ್ಟ್ರಾರ್ ವಿಧಾನಸೌಧ ಪೊಲೀಸ್ ಠಾಣೆಗೆ ಅಭ್ಯರ್ಥಿ ವಿರುದ್ಧ ದೂರು ನೀಡಿದ್ದರು.
ಪ್ರಕರಣ: ಪಾಲಾಕ್ಷ ಎಸ್.ಎಸ್. Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್ Crl.P. 1644/2022 Dated 18-11-2023