ಕಿರಿಯ ವಕೀಲರಿಗೆ ಲೈಂಗಿಕ ಕಿರುಕುಳ: ವಕೀಲನ ಸನದು ರದ್ದು ಮಾಡಿದ KSBC ಆದೇಶ ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್
ಕಿರಿಯ ವಕೀಲರಿಗೆ ಲೈಂಗಿಕ ಕಿರುಕುಳ: ವಕೀಲನ ಸನದು ರದ್ದು ಮಾಡಿದ KSBC ಆದೇಶ ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್
ಸಹೋದ್ಯೋಗಿ ಕಿರಿಯ ವಕೀಲರಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಹೊತ್ತ ಬೆಂಗಳೂರಿನ ವಕೀಲ ಎಚ್. ಮಂಜುನಾಥ್ ಅವರ ಸನದು ರದ್ದು ಮಾಡಿದ KSBC ಆದೇಶವನ್ನು ಕರ್ನಾಟಕ ಹೈಕೋರ್ಟ್ ಬದಿಗೆ ಸರಿಸಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದಲ್ಲಿ ಮತ್ತು ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ವಕೀಲರಾದ ಮಂಜುನಾಥ್ ಅವರಿಗೆ ನಿರ್ಬಂಧ ಹೇರಿ ಸನದು ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಕೀಲರಾದ ಮಂಜುನಾಥ್ ಹೈಕೋರ್ಟ್ ಮೊರೆ ಹೋಗಿದ್ದರು.
ತಮ್ಮ ಪ್ರಕರಣವನ್ನು ತಾವೇ ವಾದಿಸಿದ ವಕೀಲ ಮಂಜುನಾತ್, ತಮ್ಮಿಂದ ಆಕ್ಷೇಪಣೆ ಸಲ್ಲಿಸಲು ವಿಳಂಬವಾಗಿದೆ. ಅಷ್ಟಕ್ಕೆ ತಮ್ಮನ್ನು ಅಮಾನತು ಮಾಡಿರುವುದು ಸರಿಯಲ್ಲ. ನನಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕಿತ್ತು. ತಮ್ಮ ವಿರುದ್ಧದ ದೂರನ್ನು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ (ನಿಷೇಧ ಮತ್ತು ಪರಿಹಾರ) ಕಾಯ್ದೆಯ ಅಡಿ ಸ್ಥಾಪಿಸಲಾಗಿರುವ ಸಮಿತಿಯ ಮುಂದೆ ಇಡಬೇಕಿತ್ತು. ಹೀಗಾಗಿ ನನ್ನ ವಿರುದ್ಧದ ದೂರು ಊರ್ಜಿತವಾಗುವುದಿಲ್ಲ ಎಂದು ವಾದಿಸಿದರು.
ಮಂಜುನಾಥ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಆದರೂ ಕಾಲಮಿತಿಯಲ್ಲಿ ಅವರು ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಪರ ವಕೀಲರು ಕೆಎಸ್‌ಬಿಸಿ ಆದೇಶವನ್ನು ಸಮರ್ಥಿಸಿಕೊಂಡರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹೊರಡಿಸಿರುವ ಆದೇಶವು ಅರ್ಜಿದಾರರಿಗೆ ಸಿವಿಲ್ ಮತ್ತು ವೃತ್ತಿಪರವಾಗಿ ಗಂಭೀರವಾದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆರೋಪಿ ವಕೀಲರ ವಿರುದ್ಧ ಮಾಡಲಾದ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಅವುಗಳ ಪರಿಣಾಮವೂ ಭಯಾನಕವಾಗಿರಲಿದೆ. ಈ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಆರೋಪಿ ವಕೀಲರಿಗೆ ಅವಕಾಶ ಕಲ್ಪಿಸಬೇಕಿತ್ತು. ಈ ನೆಲೆಯಲ್ಲಿ ಮಂಜುನಾಥ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿ ಕೆಎಸ್‌ಬಿಸಿ ಆದೇಶವನ್ನು ನ್ಯಾಯಪೀಠ ಬದಿಗೆ ಸರಿಸಿತು.
ಪ್ರಕರಣ: ಎಚ್. ಮಂಜುನಾಥ್ Vs ಕೆಎಸ್‌ಬಿಸಿ ಮತ್ತಿತರರು
ಕರ್ನಾಟಕ ಹೈಕೋರ್ಟ್, WP 27909/2023 Dated 3-01-2024