ಪವರ್ ಟಿವಿಗೆ ಮತ್ತಷ್ಟು ಸಂಕಷ್ಟ: ಚಾನೆಲ್ ಸ್ಥಗಿತ ಆದೇಶ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ನಕಾರ
ಪವರ್ ಟಿವಿಗೆ ಮತ್ತಷ್ಟು ಸಂಕಷ್ಟ: ಚಾನೆಲ್ ಸ್ಥಗಿತ ಆದೇಶ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ನಕಾರ
ಪತ್ರಿಕೋದ್ಯಮಿ ರಾಕೇಶ್ ಶೆಟ್ಟಿ ನೇತೃತ್ವದ ಪವರ್ ಟಿವಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಚಾನೆಲ್ ಸ್ಥಗಿತದ ಆದೇಶಕ್ಕೆ ತಡೆ ನೀಡಬೇಕು, ಚಾನೆಲ್ ಆರಂಭಿಸಲು ಅವಕಾಶ ಕೊಡಬೇಕು ಎಂಬ ರಾಕೇಶ್ ಶೆಟ್ಟಿ ಅವರ ಎರಡು ಮೇಲ್ಮನವಿಗಳನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾ. ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ರಾಕೇಶ್ ಶೆಟ್ಟಿ ಅವರ ಎರಡು ಅರ್ಜಿಗಳನ್ನು ತಿರಸ್ಕರಿಸಿದೆ.
ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮಿಟ್‌ಕಾನ್ ಇನ್ಫಾಪ್ರಾಜೆಕ್ಟ್ ಪ್ರೈ. ಲಿ. ಸಲ್ಲಿಸಿದ ಅರ್ಜಿ ಹಾಗೂ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಆಲಿಯಾಸ್ ರಾಕೇಶ್ ಶೆಟ್ಟಿ ಅವರ ಎರಡು ಮೇಲ್ಮನವಿಗಳು ಈ ಮೂಲಕ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡಿವೆ.
ಸುದ್ದಿವಾಹಿನಿಯ ಪ್ರಸಾರ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ತುರ್ತಾಗಿ ನಿರ್ಧಾರ ಕೈಗೊಳ್ಳಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಫೆ. 9ರಂದು ಜಾರಿ ಮಾಡಿರವ ಶೋಕಾಸ್ ನೋಟೀಸ್ ಮತ್ತು ಪವರ್ ಟಿವಿ ಬ್ರಾಡ್‌ಕಾಸ್ಟ್ ಲೈಸೆನ್ಸ್ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಆರು ವಾರಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣವನ್ನು ನಿರ್ಧರಿಸುವುದಕ್ಕೂ ಮೊದಲು ಪವರ್ ಟಿವಿಯ ವಾದವನ್ನು ಆಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿದೆ. ಅಗತ್ಯ ಎನಿಸಿದರೆ ಪವರ್ ಟಿವಿ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.