ಅಬಕಾರಿ ಕಚೇರಿಯಲ್ಲಿ ಅಕ್ರಮ ಮದ್ಯ, ಗಾಂಜಾ, ಸಿಗರೇಟ್!- ಲೋಕಾಯುಕ್ತ ದಾಳಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ
ಅಬಕಾರಿ ಕಚೇರಿಯಲ್ಲಿ ಅಕ್ರಮ ಮದ್ಯ, ಗಾಂಜಾ, ಸಿಗರೇಟ್!- ಲೋಕಾಯುಕ್ತ ದಾಳಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ
ಅಬಕಾರಿ ಕಚೇರಿಯಲ್ಲಿ ದಾಖಲೆ ಇಲ್ಲದ ಅಕ್ರಮವಾಗಿ ಸಂಗ್ರಹಿಸಿದ ಮದ್ಯದ ಬಾಟಲಿಗಳು, ಗಾಂಜಾ ಮತ್ತು ಸಿಗರೇಟ್‌ಗಳು ಪತ್ತೆಯಾಗಿವೆ. ವಿವಿಧ ಅಬಕಾರಿ ಇಲಾಖೆ ಕಚೇರಿಗೆ ನಡೆಸಲಾದ ಲೋಕಾಯುಕ್ತ ದಾಳಿಯಲ್ಲಿ ಈ ಆಘಾತಕಾರಿ ಸಂಗತಿ ಬಯಲಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮತ್ತು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ನೇತೃತ್ವದಲ್ಲಿ ಯಶವಂತ ಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ದಾಳಿ ನಡೆಸಲಾಗಿತ್ತು.
ಮದ್ಯದಂಗಡಿಗಳ ಪರವಾನಿಗೆ ಅರ್ಜಿ, ಪರವಾನಿಗೆ ನವೀಕರಣ ಅರ್ಜಿ, ಸ್ಥಳಾಂತರಕ್ಕೆ ಸಲ್ಲಿಸಿದ್ದ ಅರ್ಜಿಗಳು ವಿಲೇವಾರಿ ಆಗುತ್ತಲೇ ಇಲ್ಲ ಎಂಬುದಾಗಿ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಆರೋಪ ಮಾಡಿದ್ದರು.
ಈ ದೂರುಗಳ ಆಧಾರದಲ್ಲಿ ಬೆಂಗಳೂರು ನಗರದ 62 ಅಬಕಾರಿ ವಿಭಾಗಗಳ ಕಚೇರಿಗಳ ಮೇಲೆ ಲೋಕಾಯುಕ್ತ ಏಕಕಾಲಕ್ಕೆ ದಾಳಿ ನಡೆಸಿತ್ತು.
ಸಾರ್ವಜನಿಕ ದೂರುಗಳ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪರಿಶೀಲನೆಯ ಭಾಗವಾಗಿ 62 ಕಚೇರಿಗಳಲ್ಲಿ ಮಂಗಳವಾರ ಮಧ್ಯಾಹ್ನ 3ಗಂಟೆಗೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು.
ಸ್ವತಃ ಅಧಿಕಾರಿಗಳ ಡ್ರಾಯರ್, ಮೇಜುಗಳಲ್ಲಿ ಅಕ್ರಮ ಗಾಂಜಾ ಪತ್ತೆಯಾಗಿದ್ದವು. ಕಚೇರಿಗಳಲ್ಲಿ ದಾಖಲೆ ಇಲ್ಲದ ಮದ್ಯದ ಬಾಟಲಿಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ.