
ಜನನ ಮರಣ ನೋಂದಣಿ ವಹಿಯಲ್ಲಿ ಹೆಸರು ಬದಲಾವಣೆ: ಕಾಯ್ದೆಗೆ ತಿದ್ದುಪಡಿ ತರುವ ವರೆಗೆ ಅನುಸರಿಸಬೇಕಾದ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್
ಜನನ ಮರಣ ನೋಂದಣಿ ವಹಿಯಲ್ಲಿ ಹೆಸರು ಬದಲಾವಣೆ: ಕಾಯ್ದೆಗೆ ತಿದ್ದುಪಡಿ ತರುವ ವರೆಗೆ ಅನುಸರಿಸಬೇಕಾದ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್
ಜನನ ಮರಣ ನೋಂದಣಿ ವಹಿಯಲ್ಲಿ ಹೆಸರು ಬದಲಾವಣೆಯ ಬಗ್ಗೆ ಶಾಸಕಾಂಗವು ಕಾಯಿದೆಗೆ ತಿದ್ದುಪಡಿ ತರುವ ವರೆಗೆ ಅನುಸರಿಸಬೇಕಾದ ಕಾರ್ಯವಿಧಾನ ಕುರಿತು ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್
ಜನನ ಮರಣ ನೋಂದಣಿ ವಹಿಯಲ್ಲಿ ಒಮ್ಮೆ ದಾಖಲಾದ ನಮೂದನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ನೋಂದಣಾಧಿಕಾರಿಯ ಹಿಂಬರಹವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
1969 ರ ಜನನ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜನನ ನೋಂದಣಿಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಶಾಸಕಾಂಗಕ್ಕೆ ಸೂಚಿಸಿದೆ. ಪ್ರಸ್ತುತ ಜನನ ಮತ್ತು ಮರಣ ನೋಂದಣಿ ಕಾಯ್ದೆಯಡಿ ಮಕ್ಕಳ ಹೆಸರು ಬದಲಾವಣೆಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ತಿದ್ದುಪಡಿ ಅನುಷ್ಠಾನಗೊಳ್ಳುವ ವರೆಗೆ ಮಕ್ಕಳ ಹೆಸರು ಬದಲಾವಣೆಗೆ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಹೊಸ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.
ಮಾನ್ಯ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಎನ್.ಎಸ್. ಸಂಜಯ ಗೌಡ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಅಧೃತ್ ಭಟ್ ವಿರುದ್ಧ ಜನನ ಮರಣ ನೋಂದಣಾಧಿಕಾರಿ, ನಗರ ಸಭೆ, ಉಡುಪಿ ಈ ಪ್ರಕರಣದಲ್ಲಿ ದಿನಾಂಕ 6.2.2025 ರಂದು ಈ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಉಡುಪಿಯ ನಿವಾಸಿ ಸುಬ್ರಹ್ಮಣ್ಯ ಭಟ್ ಎಂಬವರು ತಮ್ಮ ಎರಡು ವರ್ಷ ವಯಸ್ಸಿನ ಮಗುವಿನ ಜಾತಕ ನೋಡಿ ಜ್ಯೋತಿಷಿಗಳು ನೀಡಿದ ಸಲಹೆಯಂತೆ ಈಗಾಗಲೇ ಅದೃತ್ ಭಟ್ ಎಂದು ನಾಮಕರಣ ಮಾಡಿದ ಮಗುವಿನ ಹೆಸರನ್ನು ಶ್ರೀಜಿತ್ ಭಟ್ ಎಂದು ಬದಲಾಯಿಸುವಂತೆ ಕೋರಿ ದಿನಾಂಕ 4.11.2023 ರಂದು ಉಡುಪಿಯ ನಗರ ಸಭೆಯ ಜನನ ಮರಣ ನೋಂದಣಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದರು. 1969 ರ ಜನನ ಮರಣ ಕಾಯ್ದೆಯ ಸೆಕ್ಷನ್ 15 ಮತ್ತು ನಿಯಮ 11(1)(7) ರಡಿ ಒಮ್ಮೆ ನೋಂದಾಯಿಸಿದ ಹೆಸರನ್ನು ಬದಲಾವಣೆ ಮಾಡಲು ಅವಕಾಶವಿಲ್ಲ ಎಂಬ ಹಿಂಬರಹ ನೀಡಿ ಅವರ ಮನವಿಯನ್ನು ತಿರಸ್ಕರಿಸಲಾಯಿತು. ಸದರಿ ಆದೇಶದಿಂದ ಬಾಧಿತರಾದ ಮಗುವಿನ ಪೋಷಕರು ನೋಂದಣಾಧಿಕಾರಿಯ ಹಿಂಬರಹವನ್ನು ರದ್ದುಪಡಿಸಿ ನೋಂದಣಿ ವಹಿಯಲ್ಲಿ ಹೆಸರು ಬದಲಾವಣೆ ಮಾಡುವಂತೆ ನೋಂದಣಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಿದರು. ಸದರಿ ರಿಟ್ ಅರ್ಜಿಯನ್ನು ಪುರಸ್ಕರಿಸಿದ ಮಾನ್ಯ ಹೈಕೋರ್ಟ್ ನೋಂದಣಿ ವಹಿಯಲ್ಲಿ ಮಗುವಿನ ಹೆಸರನ್ನು ಬದಲಾಯಿಸುವಂತೆ ಉಡುಪಿ ನಗರಸಭೆಯ ಜನನ ಮರಣ ನೋಂದಣಾಧಿಕಾರಿಗೆ ನಿರ್ದೇಶನ ನೀಡಿದೆ. ಮಾನ್ಯ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಈ ಕೆಳಗಿನಂತಿವೆ.
ಜನನ ಮರಣ ನೋಂದಣಿ ಕಾಯ್ದೆಯ ಸೆಕ್ಷನ್ 15ರ ಪ್ರಕಾರ ನೋಂದಣಿ ವಹಿಯಲ್ಲಿ ಹೆಸರು ನಮೂದಿಸುವಾಗ ಸಣ್ಣ ತಪ್ಪುಗಳು ಕಂಡು ಬಂದಲ್ಲಿ ನೋಂದಣಾಧಿಕಾರಿಗೆ ಸದರಿ ತಪ್ಪನ್ನು ತಿದ್ದುವ ಅಧಿಕಾರ ಪ್ರದತ್ತವಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ನೋಂದಣಿಯಲ್ಲಿ ಯಾವುದೇ ತಪ್ಪು ಉಂಟಾಗಿಲ್ಲ. ಆದುದರಿಂದ ಸೆಕ್ಷನ್ 15 ರಡಿ ಪ್ರದತ್ತ ಅಧಿಕಾರವನ್ನು ಚಲಾಯಿಸಲು ಅವಕಾಶವಿಲ್ಲ. ಒಂದು ವೇಳೆ ಜನನ ನೋಂದಣಿ ಸಂದರ್ಭದಲ್ಲಿ ಮಗುವಿನ ಹೆಸರನ್ನು ನೀಡದೆ ಇದ್ದಲ್ಲಿ 15 ವರ್ಷಗಳ ಗರಿಷ್ಠ ಕಾಲಾವಧಿಯೊಳಗೆ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ದಾಖಲಿಸಲು ಅವಕಾಶವಿದೆ.
ಪ್ರಸ್ತುತ ಪ್ರಕರಣದಲ್ಲಿ ನೋಂದಣಾಧಿಕಾರಿಯವರು ತಮ್ಮ ಕರ್ತವ್ಯವನ್ನು ಕಾನೂನು ಬದ್ಧವಾಗಿ ನಿರ್ವಹಿಸಿದ್ದಾರೆ ಎಂಬುದು ನಿರ್ವಿವಾದ. ಏಕೆಂದರೆ ನೊಂದಣಿ ವಹಿಯಲ್ಲಿ ಒಂದೇ ಹೆಸರನ್ನು ನಮೂದಿಸಲು ಅವಕಾಶವಿದೆ. ಆದುದರಿಂದ ಈ ಸಂಬಂಧ ಶಾಸಕಾಂಗ ಗಮನಹರಿಸಿ ನಾಗರಿಕರು ತಾವು ಬಯಸಿದ ಸಂದರ್ಭದಲ್ಲಿ ತಮ್ಮ ಹೆಸರುಗಳನ್ನು ಬದಲಾಯಿಸಲು ಅವಕಾಶ ವಾಗುವ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ.
ರಾಜ್ಯ ಕಾನೂನು ಆಯೋಗ ದಿನಾಂಕ 20.7.2023 ರಂದು ಸರಕಾರಕ್ಕೆ ಸಲ್ಲಿಸಿರುವ 24ನೆಯ ವರದಿಯಲ್ಲಿನ ಶಿಫಾರಸುಗಳನ್ನು ಪರಿಗಣಿಸಿ ಕಾಯಿದೆಗೆ ತಿದ್ದುಪಡಿ ಮಾಡುವುದು ಸೂಕ್ತ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಕಾಯ್ದೆಗೆ ತಿದ್ದುಪಡಿ ತರುವ ವರೆಗೆ ಹೆಸರು ಬದಲಾವಣೆ ಕೋರಿ ಸಲ್ಲಿಸುವ ಮನವಿಗಳ ವಿಲೇವಾರಿ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನ್ಯಾಯಪೀಠ ಅಧಿಕಾರಿಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದೆ. ಕಾಯ್ದೆ ತಿದ್ದುಪಡಿ ಆಗುವವರೆಗೂ ಈ ನಿರ್ದೇಶನಗಳನ್ನು ಅನುಸರಿಸುವ ಮೂಲಕ ಹೆಸರು ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಪೀಠ ಹೇಳಿದೆ. ಜನ್ಮ ದಿನಾಂಕ ಮತ್ತು ಇತರ ವಿವರಗಳು ಬದಲಾವಣೆಯಾಗದೆ ಹೆಸರು ಮಾತ್ರ ಬದಲಾದಲ್ಲಿ ಯಾವುದೇ ರೀತಿಯ ದುರುಪಯೋಗಕ್ಕೆ ಅವಕಾಶ ಇಲ್ಲ. ಹೀಗಾಗಿ ಹೆಸರು ಬದಲಾಯಿಸಲು ಕೋರಿ ಬಂದ ಅರ್ಜಿಗಳನ್ನು ಅಂಗೀಕರಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಹೆಸರು ಬದಲಾವಣೆಗೆ ಹೈಕೋರ್ಟ್ ನೀಡಿರುವ ಪ್ರಮುಖ ನಿರ್ದೇಶನಗಳು
1) ಪೋಷಕರು ತಮ್ಮ ಮಗುವಿನ ಹೆಸರನ್ನು ನೋಂದಣಿ ವಹಿಯಲ್ಲಿ ಮತ್ತು ಜನನ ಪ್ರಮಾಣ ಪತ್ರದಲ್ಲಿ ಬದಲಾಯಿಸಬೇಕಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ಅಂತಹ ಅರ್ಜಿಯನ್ನು ಅಧಿಕಾರಿಗಳು ಪೋಷಕರ ಗುರುತನ್ನು ಪರಿಶೀಲಿಸಿ ಹೆಸರು ಬದಲಾವಣೆ ಮಾಡಲು ಕ್ರಮ ಕೈಗೊಳ್ಳತಕ್ಕದ್ದು
2) ಹೆಸರು ಬದಲಾವಣೆ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಖಚಿತಪಡಿಸಿಕೊಂಡು ಹೆಸರನ್ನು ಬದಲಾವಣೆ ಮಾಡಿ ಸಂಬಂಧಪಟ್ಟ ವಹಿಯಲ್ಲಿ ನಮೂದಿಸಬೇಕು. ಮೊದಲು ನೋಂದಾಯಿಸಿದ ಹೆಸರು ಮತ್ತು ಬದಲಾವಣೆ ಮಾಡಿದ ಹೆಸರು ವಹಿಯಲ್ಲಿ ಲಭ್ಯವಾಗುವಂತೆ ಇರಬೇಕು.
3) ವಯಸ್ಕರ ಹೆಸರು ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಇದೇ ರೀತಿಯ ನಿಯಮಗಳನ್ನು ಅನುಸರಿಸಬೇಕು. ಹಳೆಯ ಮತ್ತು ಹೊಸ ಹೆಸರುಗಳು ನೋಂದಣಿ ವಹಿಯಲ್ಲಿ ಇರುವುದರಿಂದ ದುರುಪಯೋಗವನ್ನು ತಡೆಯಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಸ್ತುತ ಹೆಸರು ಬದಲಾವಣೆ ಮಾಡಿಕೊಳ್ಳಬೇಕಿದ್ದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಪಡೆಯಬೇಕಾಗಿತ್ತು. ಹೆಸರು ಬದಲಾವಣೆಗೆ ಅವಕಾಶವಿಲ್ಲ ಎಂಬುದಾಗಿ ನೋಂದಣಾಧಿಕಾರಿ ನೀಡಿದ ಹಿಂಬರಹದ ಆಧಾರದಲ್ಲಿ ಜನನ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆ ಕೋರಿ ಘೋಷಣಾತ್ಮಕ ಮತ್ತು ಆಜ್ಞಾಪಕ ನಿರ್ಬಂಧಕಾಜ್ಞೆಯ ಡಿಕ್ರಿ ಹೊರಡಿಸುವಂತೆ ಕೋರಿ ಬಾಧಿತ ವ್ಯಕ್ತಿಗಳು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಸೂಕ್ತ ಪರಿಹಾರ ಪಡೆಯುತ್ತಿದ್ದರು.
ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ರಾಜ್ಯದ ಸಿವಿಲ್ ನ್ಯಾಯಾಲಯಗಳಲ್ಲಿ ಪ್ರತಿದಿನ ಅತ್ಯಧಿಕ ಸಂಖ್ಯೆಯಲ್ಲಿ ದಾಖಲಾಗುವ ಜನನ ಮರಣ ಸಂಬಂಧಿತ ದಾವೆಗಳ ಹೊರೆಯನ್ನು ಕಡಿಮೆ ಮಾಡಿದೆ.
✍️ ಶ್ರೀ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ