
ಜಡ್ಜ್ ಮನೆಯಲ್ಲಿ ಭಾರೀ ಪ್ರಮಾಣದ ಹಣದ ಕಂತೆ ಪತ್ತೆ ಪ್ರಕರಣ: ನ್ಯಾಯಾಂಗದ ಪಾರದರ್ಶಕತೆ ಬಗ್ಗೆ ಎದ್ದ ಅನುಮಾನ- ಆಂತರಿಕ ತನಿಖೆ ಆರಂಭಿಸಿದ ಸುಪ್ರೀಂ ಕೋರ್ಟ್
ಜಡ್ಜ್ ಮನೆಯಲ್ಲಿ ಭಾರೀ ಪ್ರಮಾಣದ ಹಣದ ಕಂತೆ ಪತ್ತೆ ಪ್ರಕರಣ: ನ್ಯಾಯಾಂಗದ ಪಾರದರ್ಶಕತೆ ಬಗ್ಗೆ ಎದ್ದ ಅನುಮಾನ- ಆಂತರಿಕ ತನಿಖೆ ಆರಂಭಿಸಿದ ಸುಪ್ರೀಂ ಕೋರ್ಟ್
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ಹಣದ ರಾಶಿ ಪತ್ತೆಯಾಗಿರುವುದು ನ್ಯಾಯಾಂಗ ವ್ಯವಸ್ಥೆಯ ನಂಬಿಕೆಯ ಕಂಬಗಳನ್ನೇ ಅಲುಗಾಡಿಸಿದಂತಾಗಿದೆ. ನ್ಯಾಯಾಂಗದ ಪಾರದರ್ಶಕತೆ ಮತ್ತು ದಕ್ಷತೆ ಬಗ್ಗೆ ಜನ ಅಪಹಾಸ್ಯ ಮಾಡುವಂತಾಗಿದೆ.
ನ್ಯಾಯಾಂಗದ ಕಪ್ಪು ಚುಕ್ಕೆಯಾದ ಈ ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಎಚ್ಚೆತ್ತುಕೊಂಡಿದ್ದು, ಶುಕ್ರವಾರ ಆಂತರಿಕ ತನಿಖೆ ಆರಂಭಿಸಿದೆ. ಇದೇ ವೇಳೆ, ವರ್ಗಾವಣೆಗೂ ಹಣದ ಕಂತೆ ಪತ್ತೆ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಹಣದ ಕಂತೆ ಪ್ರಕರಣದ ಬಗ್ಗೆ ವರದಿ ನೀಡುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರನ್ನು ಸುಪ್ರೀಂ ಕೋರ್ಟ್ ಕೇಳಿಕೊಂಡಿದೆ.
ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಹಿನ್ನೆಲೆಯಲ್ಲಿ ನಿವಾಸಕ್ಕೆ ಆಗಮಿಸಿದ ಅಗ್ನಿ ಶಾಮಕ ದಳಕ್ಕೆ ಬೆಂಕಿ ನಂದಿಸುವ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಣದ ಕಂತೆಗಳ ರಾಶಿ ಗೋಚರಿಸಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಲೇ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆ ಮೇಲೆ ಕಾಕದೃಷ್ಟಿ ಬಿದ್ದಂತಾಗಿತ್ತು.
ಈ ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲೀಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ಅವರ ಮಾತೃ ಹೈಕೋರ್ಟ್ ಆದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸ್ಸನ್ನು ಪರಿಗಣಿಸಿತ್ತು. ಶುಕ್ರವಾರದ ನಡೆದ ಸುಪ್ರೀಂ ನ್ಯಾಯಮೂರ್ತಿಗಳ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಪ್ರಸಕ್ತ ಪ್ರಕರಣದಲ್ಲಿ ಕೇವಲ ಶಿಕ್ಷಾರ್ಹ ವರ್ಗಾವಣೆ ಮಾತ್ರ ಸಾಲದು. ಜಡ್ಜ್ ವಿರುದ್ಧ ಕೆಲ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಪೂರ್ಣ ನ್ಯಾಯಾಲಯವು ಆಂತರಿಕ ತನಿಖೆಗೆ ಸರ್ವಾನಮತಿಯಿಂದ ಒಪ್ಪಿಗೆ ಸೂಚಿಸಿತ್ತು. ಮೊದಲ ಹಂತವಾಗಿ ವರ್ಗಾವಣೆ ಆಗಿದ್ದು, ನ್ಯಾಯಮೂರ್ತಿ ವರ್ಮಾ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಲಿಲ್ಲ. ಅವರ ಕೋರ್ಟ್ ಸಿಬ್ಬಂದಿ ವರ್ಮಾ ಅವರು ರಜೆಯಲ್ಲಿ ಇರುವುದಾಗಿ ಮುಕ್ತ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.