
ಠಾಣೆಯಲ್ಲಿ ಇಸ್ಪೀಟ್ ಆಡಿದ ಪೊಲೀಸರು: ಐವರು ಸಿಬ್ಬಂದಿ ಸಸ್ಪೆಂಡ್, ಎಸ್‌ಐಗೆ ನೋಟೀಸ್
ಠಾಣೆಯಲ್ಲಿ ಇಸ್ಪೀಟ್ ಆಡಿದ ಪೊಲೀಸರು: ಐವರು ಸಿಬ್ಬಂದಿ ಸಸ್ಪೆಂಡ್, ಎಸ್‌ಐಗೆ ನೋಟೀಸ್
ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಡಿದ ಆರೋಪದಲ್ಲಿ ಐವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು (ಸಸ್ಪೆಂಡ್) ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಘಟನೆ ನಡೆದಿರುವುದು ಕಲ್ಬುರ್ಗಿ ಜಿಲ್ಲೆಯ ಚಿತ್ರಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ. ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ.
ವಾಡಿ ಠಾಣೆಯ ಎಎಸ್‌ಐ ಮಹಿಮೂದ್ ಮಿಯಾ, ಹೆಡ್ ಕಾನ್ಸ್‌ಟೆಬಲ್‌ಗಳಾದ ನಾಗರಾಜ, ಸಾಯಿಬಣ್ಣ, ಇಮಾಮ್ ಮತ್ತು ಕಾನ್ಸ್‌ಟೆಬಲ್‌ಗಳಾದ ನಾಗಭೂಷಣ್ ಅವರನ್ನು ಅಮಾನತು ಮಾಡಲಾಗಿದೆ. ಪಿಎಸ್‌ಐ ತಿರುಮಲೇಶ್ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.
ಠಾಣೆಯಲ್ಲಿ ಇಸ್ಪೀಟ್ ಆಟವಾಡಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಎಸ್‌ಐ ಅವರಿಂದ ವರದಿ ತರಿಸಿಕೊಂಡು ಎಸ್‌ಪಿ ಈ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಹಳೆಯ ವೀಡಿಯೋ ಯಾವ ಕಾರಣಕ್ಕೆ ವೈರಲ್ ಆಗಿದೆ ಎಂಬುದು ಕುತೂಹಲ ಮೂಡಿಸಿದೆ.
ಇಸ್ಫೀಟ್ ಆಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಧಿಕಾರಿಗಳು, ಸಿಬ್ಬಂದಿಯ ಶಿಸ್ತು ಉಲ್ಲಂಘನೆ ಬಗ್ಗೆ ಇಲಾಖೆ ಶೂನ್ಯ ಸಹನೆ ಹೊಂದಿದೆ.ಸಾರ್ವಜನಿಕ ಸೇವೆಯಲ್ಲಿ ಕಾನೂನು ಪಾಲನೆಯಲ್ಲಿ ಯಾವುದೇ ಲೋಪವನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಸ್‌ಪಿ ಹೇಳಿದ್ದಾರೆ.
ಒಂದು ವೇಳೆ, ವೀಡಿಯೋ ವೈರಲ್ ಆಗಿರದಿದ್ದರೆ ಪೊಲೀಸರ ಇಸ್ಪೀಟ್ ಆಟ ಠಾಣೆಯಲ್ಲಿ ಮುಂದುವರಿದಿರಬಹುದಿತ್ತು. ಇಂತಹ ಘಟನೆಗಳು ರಾಜ್ಯದ ಎಷ್ಟೋ ಪೊಲೀಸ್ ಠಾಣೆಯಲ್ಲಿ ಈಗಲೂ ನಡೆಯುತ್ತಿದೆ ಎಂದು ಜನರಾಡಿಕೊಳ್ಳುವಂತಾಗಿದೆ.