
ಎಫ್‌ಐಆರ್ ದಾಖಲಿಸುವ ಮುನ್ನವೇ ದಾಖಲೆ ಸಂಗ್ರಹ, ಪ್ರಾಥಮಿಕ ತನಿಖೆ ನಡೆಸುವುದು ಪಿಸಿ ಕಾಯ್ದೆಯ ಉಲ್ಲಂಘನೆ: ಕರ್ನಾಟಕ ಹೈಕೋರ್ಟ್
ಎಫ್‌ಐಆರ್ ದಾಖಲಿಸುವ ಮುನ್ನವೇ ದಾಖಲೆ ಸಂಗ್ರಹ, ಪ್ರಾಥಮಿಕ ತನಿಖೆ ನಡೆಸುವುದು ಪಿಸಿ ಕಾಯ್ದೆಯ ಉಲ್ಲಂಘನೆ: ಕರ್ನಾಟಕ ಹೈಕೋರ್ಟ್
ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸುವ ಮುನ್ನವೇ ಪೊಲೀಸರು ದಾಖಲೆ ಸಂಗ್ರಹಿಸುವುದು ಮತ್ತು ಪ್ರಾಥಮಿಕ ತನಿಖೆ ನಡೆಸುವುದು ಭ್ರಷ್ಟಾಚಾರ ತಡೆ ಕಾಯ್ದೆಯ ಉಲ್ಲಂಘನೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ, ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ತನಿಖಾಧಿಕಾರಿ ವಿಚಾರಣೆ ನಡೆಸುವುದು ಕಡ್ಡಾಯಗೊಳಿಸಿದೆ. ಎಫ್‌ಐಆರ್‌ಗೆ ಮುನ್ನವೇ ದಾಖಲೆ ಸಂಗ್ರಹ ಮತ್ತು ಪ್ರಾಥಮಿಕ ತನಿಖೆ ನಡೆಸಿದರೆ, ಇದು ಪಿಸಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ದಾವಣಗೆರೆಯ ಜಗಳೂರು ಪಟ್ಟಣ ಪಂಚಾಯತ್ ಕಚೇರಿಯಲ್ಲಿ 2015-16ನೇ ಸಾಲಿನಲ್ಲಿ ಮುಖ್ಯಾಧಿಕಾರಿಯಾಗಿದ್ದ ಎಸ್. ಲಕ್ಷ್ಮಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ನಿಷ್ಟ್ರಯೋಜಕ ಮತ್ತು ಕಿರುಕುಳ ನೀಡುವ ಪ್ರಾಸಿಕ್ಯೂಷನ್ ಮತ್ತು ದೂರುಗಳ ತನಿಖೆಯಿಂದ ಸರ್ಕಾರಿ ನೌಕರರಿಗೆ ರಕ್ಷಣೆ ಇದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಆರೋಪಿ ಅಧಿಕಾರಿಗಳಿಗೆ ಕಾನೂನಿನಲ್ಲಿ ಲಭ್ಯವಿರುವ ರಕ್ಷಣೆಯನ್ನು ಗಮನದಲ್ಲಿ ಇಡಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಅಧಿಕಾರಿಗಳ ವಿರುದ್ಧ ಸುಳ್ಳು ದೂರುಗಳ ವಿಚಾರಣೆ, ತನಿಖೆಯನ್ನು ತಡೆಯಬೇಕಾಗುತ್ತದೆ. ಇಲ್ಲದಿದ್ದರೆ ಅಮಾಯಕ ಅಧಿಕಾರಿಗಳಿಗೆ ಕಿರುಕುಳ ಉಂಟು ಮಾಡುವ ಪ್ರಾಸಿಕ್ಯೂಷನ್‌ಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ರಕ್ಷಣಾ ಕವಚವನ್ನು ತಪ್ಪಿತಸ್ಥ ಸರ್ಕಾರಿ ನೌಕರಿರಿಗೆ ಕಲ್ಪಿಸಲಾಗುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
2019ರಲ್ಲಿ ಬಂದಿದ್ದ ಅನಾಮಧೇಯ ಪತ್ರವೊಂದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು 2015-16ರಲ್ಲಿ ಜಗಳೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಲಕ್ಷ್ಮಿ ಅವರ ವಿರುದ್ಧ ದಾಖಲೆ ಸಂಗ್ರಹಿಸಿದ್ದರು. ಎಫ್‌ಐಆರ್ ದಾಖಲಿಸದೆ ವಿಚಾರಣೆ ಆರಂಭಿಸಿದ್ದರು. ಮತ್ತು 2023ರ ಮಾರ್ಚ್‌ನಲ್ಲಿ ಸೆಕ್ಷನ್ 17ಎ ಅಡಿಯಲ್ಲಿ ತನಿಖೆಗೆ ಪೂರ್ವಾನುಮತಿ ಕೋರಿದ್ದರು.
ಅರ್ಜಿದಾರರು ಸುಮಾರು 50 ಲಕ್ಷ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು. ಲೋಕಾಯುಕ್ತ ಕೋರಿಕೆ ಮೇರೆಗೆ ಸಕ್ಷಮ ಪ್ರಾಧಿಕಾರ ಅರ್ಜಿದಾರರ ವಿರುದ್ಧ ತನಿಖೆಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ ಎಸ್. ಲಕ್ಷ್ಮಿ ಮತ್ತಿತರರು Vs ADGP, ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಹೈಕೋರ್ಟ್ WP 11933/2023 Dated 17-03-2025