
ಹೈಕೋರ್ಟ್ ಕಟ್ಟಡದ ಕಚೇರಿಯಲ್ಲಿ ಜನ್ಮದಿನ ಆಚರಣೆ, ಮೋಜು-ಮಸ್ತಿ: ಎಂಜಿನಿಯರ್ ಸಹಿತ ನಾಲ್ವರನ್ನು ಸಸ್ಪೆಂಡ್ ಮಾಡಿದ ಲೋಕೋಪಯೋಗಿ ಇಲಾಖೆ
ಹೈಕೋರ್ಟ್ ಕಟ್ಟಡದ ಕಚೇರಿಯಲ್ಲಿ ಜನ್ಮದಿನ ಆಚರಣೆ, ಮೋಜು-ಮಸ್ತಿ: ಎಂಜಿನಿಯರ್ ಸಹಿತ ನಾಲ್ವರನ್ನು ಸಸ್ಪೆಂಡ್ ಮಾಡಿದ ಲೋಕೋಪಯೋಗಿ ಇಲಾಖೆ
ಕರ್ನಾಟಕ ಹೈಕೋರ್ಟ್ ಕಟ್ಟಡದ ನೆಲಮಾಳಿಗೆಯಲ್ಲಿ ಇರುವ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಜನ್ಮದಿನ ಆಚರಣೆ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿದ ಸಹಾಯಕ ಎಂಜಿನಿಯರ್ ಸಹಿತ ನಾಲ್ವರು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ದೂರಿನ ಕುರಿತು ವಿಚಾರಣೆ ನಡೆಸಿದ್ದ ಶಿವಮೊಗ್ಗದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಇಲಾಖಾ ಮುಖ್ಯ ಎಂಜಿನಿಯರ್ ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಜನ್ಮ ದಿನ ಆಚರಣೆ ಮಾಡಿಕೊಂಡಿರುವ ಎ.ಟಿ. ಮೀನಾ ಹಾಗೂ ಆ ಸಂದರ್ಭದಲ್ಲಿ ಅವರ ಜೊತೆಗೆ ಪಾಲ್ಗೊಂಡಿದ್ದ ಸಿಬ್ಬಂದಿ ಸಿಸಿಟಿವಿ ಕ್ಯಾಮರಾ ಆಫ್ ಮಾಡಿಸಿರುವುದು ಭದ್ರತೆ ಮತ್ತು ಕರ್ತವ್ಯ ಲೋಪವಾಗಿದೆ. ಕಚೇರಿಯ ಘನತೆ ಹಾಗೂ ಗೌರವ ಕಾಪಾಡಿಕೊಳ್ಳುವಲ್ಲಿ ಆರೋಪಿತ ಸಿಬ್ಬಂದಿ ವಿಫಲವಾಗಿದ್ದಾರೆ ಎಂದು ಸಸ್ಪೆಂಡ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಥಮ ದರ್ಜೆ ಸಹಾಯಕ ಜಿ.ಎಚ್. ಚಿಕ್ಕೇಗೌಡ, ಸಹಾಯಕ ಎಂಜಿನಿಯರ್‌ಗಳಾದ ಲಾವಣ್ಯ, ನವೀನ್ ಮತ್ತು ಅಮೀನ್ ಎಸ್. ಅನ್ನದಿನ್ನಿ ಸಸ್ಪೆಂಡ್ ಆದವರು. ಅಮಾನತುಗೊಳಗಾದವರು ಸರ್ಕಾರಿ ನೌಕರರಿಗೆ ಒಪ್ಪಿತವಲ್ಲದ ರೀತಿಯಲ್ಲಿ ವರ್ತನೆ ತೋರಿದ್ದಾರೆ.
ಕರ್ನಾಟಕ ರಾಜ್ಯ ನಾಗರಿಕ (ನಡತೆ) ನಿಯಮಗಳು-2012ರ ನಿಯಮ 3(1)(1-4)ಅನ್ನು ಸಿಬ್ಬಂದಿ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಹಾಗಾಗಿ, ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದಿಂದ ಅಧಿಸೂಚನೆಗೊಂಡ ಪ್ರಮುಖ ಮತ್ತು ಗಣ್ಯ ವ್ಯಕ್ತಿಗಳ ಜಯಂತಿಯನ್ನು ಹೊರತುಪಡಿಸಿ ಸರ್ಕಾರಿ ಕಚೇರಿ ಹಾಗೂ ಆವರಣಗಳಲ್ಲಿ ಸರ್ಕಾರಿ ಕಾರ್ಯಕ್ರಮ ಮಾತ್ರ ಆಚರಿಸಲು ಕಾನೂನುಬದ್ಧ ಅವಕಾಶ ಇರುತ್ತದೆ.