
ಮೋಟಾರು ಅಪಘಾತ, ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ: ಫಲಾನುಭವಿಗಳ ಪತ್ತೆಗೆ ದೇಶವ್ಯಾಪಿ ಅಭಿಯಾನಕ್ಕೆ ಸುಪ್ರೀಂ ನಿರ್ದೇಶನ
ಮೋಟಾರು ಅಪಘಾತ, ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ: ಫಲಾನುಭವಿಗಳ ಪತ್ತೆಗೆ ದೇಶವ್ಯಾಪಿ ಅಭಿಯಾನಕ್ಕೆ ಸುಪ್ರೀಂ ನಿರ್ದೇಶನ
ಮೋಟಾರು ಅಪಘಾತ ಪ್ರಕರಣ ಮತ್ತು ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ ದೊರೆಯದೇ ಇರುವ ಫಲಾನುಭವಿಗಳ ಪತ್ತೆಗೆ ಬೃಹತ್ ಅಭಿಯಾನ ನಡೆಸುವಂತೆ ನ್ಯಾಯಮಂಡಳಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್‌ನ ಅಭಯ್ ಎಸ್. ಓಕಾ ಮತ್ತು ಉಜ್ವಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ದೇಶದ ಎಲ್ಲ ಹೈಕೋರ್ಟ್‌ಗಳ ಮೂಲಕ ಸುಪ್ರೀಂ ಕೋರ್ಟ್‌ನ ಆದೇಶವನ್ನು ವಿಚಾರಣಾ ನ್ಯಾಯಾಲಯಗಳಿಗೆ ತಲುಪಿಸಿ ಪರಿಹಾರ ದೊರಕಿಸುವ ಅಭಿಯಾನ ದೇಶಾದ್ಯಂತ ನಡೆಸುವಂತೆ ನಿರ್ದೇಶನ ನೀಡಿದೆ.
ಪರಿಹಾರದ ಮೊತ್ತ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲು ಎಲ್ಲ ಮೋಟಾರ್ ವಾಹನ ಅಪಘಾತ ನ್ಯಾಯಮಂಡಳಿ ಮತ್ತು ಕಾರ್ಮಿಕ ಆಯುಕ್ತರಿಗೆ ವಿವರವಾದ ನಿರ್ದೇಶನ ನೀಡಿದ್ದು, ಜುಲೈ 30ರೊಳಗೆ ಸದ್ರಿ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸೂಚನೆ ನೀಡಿದೆ.
ಪರಿಹಾರಕ್ಕೆ ಅರ್ಹರಾಗಿರುವ ಕ್ಲೇಮುದಾರರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಪೊಲೀಸರು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಂದಾಯ ಅಧಿಕಾರಿಗಳ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಹಾಯ ಮಾಡಬೇಕು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಈ ನಿರ್ದೇಶನದ ಪಾಲನೆಯ ಮೇಲ್ವಿಚಾರಣೆ ಮತ್ತು ಜವಾಬ್ದಾರಿಯನ್ನು ಹೊರಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಇದೇ ವೇಳೆ, ಈ ನಿರ್ದೇಶನಗಳು ಪಾಲನೆಯಾಗಿವೆಯೇ ಎಂಬುದನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.