
ಮೂರು ವಾರಗಳಿಂದ ಸರ್ವರ್ ಡೌನ್: ಹಳ್ಳ ಹಿಡಿದ ಬಿ ಖಾತಾ ಕ್ಯಾಂಪೇನ್- ಅಧಿಕಾರಿಗಳ ಲಂಚಾವತಾರಕ್ಕೆ ನಾಗರಿಕರ ಹಿಡಿಶಾಪ
ಮೂರು ವಾರಗಳಿಂದ ಸರ್ವರ್ ಡೌನ್: ಹಳ್ಳ ಹಿಡಿದ ಬಿ ಖಾತಾ ಕ್ಯಾಂಪೇನ್- ಅಧಿಕಾರಿಗಳ ಲಂಚಾವತಾರಕ್ಕೆ ನಾಗರಿಕರ ಹಿಡಿಶಾಪ
ರಾಜ್ಯಾದ್ಯಂತ ಇ ಖಾತಾ, ಬಿ ಖಾತಾ ಅಭಿಯಾನ ಹಳ್ಳ ಹಿಡಿದಿದೆ. ಸರ್ವರ್ ಡೌನ್ ಸಮಸ್ಯೆಯಿಂದ ಅಭಿಯಾನಕ್ಕೆ ಗರ ಬಡಿದಿದೆ.
ಅರ್ಜಿ ಸಲ್ಲಿಸಿದ ಬಳಿಕ ಇ ಖಾತಾ ಕೈಗೆ ಸಿಗಲು ಒಂದು ತಿಂಗಳ ಹಿಡಿಯುತ್ತಿತ್ತು. ಆದರೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇ-ಖಾತಾ ಅಭಿಯಾನದಲ್ಲಿ ಖಾತಾ ಕೋರಿ ಅರ್ಜಿಯನ್ನು ಸಲ್ಲಿಸಲೂ ಆಗದ ಪರಿಸ್ಥಿತಿ ಇದೆ.
ಇದರಿಂದ ಜನಸಾಮಾನ್ಯರು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
2004ರ ಹಿಂದಿನ ಆಸ್ತಿ ವರ್ಗಾವಣೆಯ ಖಾತಾಗಳಿಗೆ ಋಣಭಾರ ಪ್ರಮಾಣಪತ್ರ ಬೇಕು ಎಂದು ಹೇಳಲಾಗುತ್ತಿದೆ.
ನಗರಪಾಲಿಕೆಯೊಳಗೆ ಭೂ ಪರಿವರ್ತನೆ ಆದೇಶ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹಲವು ತೀರ್ಪುಗಳನ್ನು ನೀಡಿದ್ದರೂ ಪಾಲಿಕೆ ಮಟ್ಟದ ಅಧಿಕಾರಿಗಳು ಅದನ್ನು ಲೆಕ್ಕಕ್ಕೇ ಇಡದೆ, ಭೂ ಪರಿವರ್ತನೆಯ ಆದೇಶ ಬೇಕು ಎಂದು ತಾಕೀತು ಮಾಡುತ್ತಿದ್ದಾರೆ.
ಈ ಮಧ್ಯೆ, ಅಧಿಕಾರಿಗಳ ಲಂಚಾವತಾರಕ್ಕೆ ನಾಗರಿಕರು ಕಂಗಾಲಾಗಿದ್ದಾರೆ. ಹಿಡಿಶಾಪ ಹಾಕಿ ಅಸಹಾಯಕರಾಗಿ ವ್ಯವಸ್ಥೆಯ ಲೋಪಕ್ಕೆ ಶಪಿಸುತ್ತಿದ್ಧಾರೆ.
ಇನ್ನು ಇ-ಸ್ವತ್ತುಗಳಿಗೆ ಸಂಬಂಧಪಟ್ಟ ಸರ್ಕಾರದ ಉನ್ನತ ಮಟ್ಟದ ಸಮಿತಿಯನ್ನು ದುರ್ಬೀನು ಹಾಕಿ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚನೆಯಾದ ಇಸ್ವತ್ತು ಕಾರ್ಯನಿರ್ವಹಣಾ ಸಮಿತಿ ಇದೆಯೋ ಇಲ್ಲವೋ ಒಂದೂ ಅರಿಯದಾಗಿದೆ. ಕಾಲಕಾಲಕ್ಕೆ ಎದುರಾಗುವ ಸಮಸ್ಯೆಗಳ ಅಧ್ಯಯನ ಮಾಡಲು ಉನ್ನತ ಸಮಿತಿ ರಚಿಸಲಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಹೇಳಿದ್ದರು. ಆದರೆ, ಸಮಸ್ಯೆ ಭೀಕರವಾಗಿದ್ದರೂ ಯಾವುದೇ ಪರಿಹಾರ ಕಾಣುತ್ತಿಲ್ಲ.
ಈ ಎಲ್ಲ ಅವ್ಯವಸ್ಥೆಯನ್ನು ಎನ್‌ಕ್ಯಾಶ್ ಮಾಡುತ್ತಿದ್ದ ಅಧಿಕಾರಿ ವರ್ಗ ಜನರನ್ನು 'ಕೈಬಿಸಿ' ಮಾಡಲು ಪೀಡಿಸುತ್ತಿದೆ. ತೆರಿಗೆ ಕಟ್ಟಿದರೂ ಅದನ್ನು ಇ-ಸೊತ್ತು ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಲು ಮತ್ತೆ ಪಾಲಿಕೆ ಅಧಿಕಾರಿಗಳ ಕಾಲಿಗೆರಬೇಕು. ಒಂದು ಕ್ಲಿಕ್‌ನಲ್ಲಿ ರಿಫ್ರೆಶ್ ಮಾಡಬಹುದಾದ ಕೆಲಸವನ್ನು ದೊಡ್ಡದನ್ನಾಗಿ ಬಿಂಬಿಸಿ ನಾಗರಿಕರನ್ನು ಪೀಡಿಸಲಾಗುತ್ತಿದೆ.
ಇದೆಲ್ಲದರ ಮಧ್ಯೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಯಾಕೆ ಮೌನ ವಹಿಸಿದ್ದಾರೆ ಎಂದೇ ಅರ್ಥವಾಗುವುದಿಲ್ಲ.