
ಬಾಣಂತಿ ಸಾವು ಪ್ರಕರಣ: ತುರ್ತು ಪರಿಸ್ಥಿತಿ ನಿಭಾಯಿಸಲು ವಿಫಲ- 10 ಲಕ್ಷ ಪರಿಹಾರ ನೀಡಲು ಆಸ್ಪತ್ರೆಗೆ ಗ್ರಾಹಕ ನ್ಯಾಯಾಲಯದ ಆದೇಶ
ಬಾಣಂತಿ ಸಾವು ಪ್ರಕರಣ: ತುರ್ತು ಪರಿಸ್ಥಿತಿ
ನಿಭಾಯಿಸಲು ವಿಫಲ- 10 ಲಕ್ಷ ಪರಿಹಾರ ನೀಡಲು ಆಸ್ಪತ್ರೆಗೆ ಗ್ರಾಹಕ ನ್ಯಾಯಾಲಯದ ಆದೇಶ
ಹೆರಿಗೆಯ ನಂತರ ಬಾಣಂತಿ ಮೃತಪಟ್ಟ ಪ್ರಕರಣವೊಂದರಲ್ಲಿ
ಖಾಸಗಿ ಆಸ್ಪತ್ರೆಯ ಮಂಡಳಿ ಮೃತರ ಸಂಬಂಧಿಕರಿಗೆ ಪರಿಹಾರವಾಗಿ 10 ಲಕ್ಷ ರೂ. ನೀಡುವಂತೆ ದಕ್ಷಿಣ ಕನ್ನಡ
ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ಹೊರಡಿಸಿದೆ.
2011ರ ಮಾರ್ಚ್ 29ರಂದು ಪುತ್ತೂರು ತಾಲೂಕು
ಕೆಮ್ಮಿಂಜೆ ಗ್ರಾಮದ ಬಾಣಂತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ ಗಣೇಶ್ ಬಂಗೇರ
ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯ
ಈ ದೂರನ್ನು 2017ರಲ್ಲಿ ವಜಾಗೊಳಿಸಿತ್ತು.
ಈ ವಜಾ ಆದೇಶವನ್ನು ಪ್ರಶ್ನಿಸಿ ಬಾಧಿತ ದೂರುದಾರರಾದ
ಗಣೇಶ್ ಬಂಗೇರ ಅವರು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮಾನ್ಯ ರಾಜ್ಯ ಗ್ರಾಹಕರ ನ್ಯಾಯಾಲಯ, ಪ್ರಕರಣದ ಮರುವಿಚಾರಣೆ
ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಅದರಂತೆ, ಮತ್ತೆ ವಿಚಾರಣೆ ನಡೆಸಿದ ದಕ್ಷಿಣ
ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ, ದರ್ಬೆಯ ನಿಸರ್ಗ ಹೆಲ್ತ್ ಸೆಂಟರ್ ವಿರುದ್ಧ ತೀರ್ಪು ನೀಡಿದೆ.
ಮೃತ ಮಹಿಳೆಯ ಪತಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಪ್ರಕರಣ ದಾಖಲಾದ ದಿನದಿಂದ ಶೇಕಡಾ 6ರ ಬಡ್ಡಿದರವನ್ನು
ಸೇರಿಸಿ ವ್ಯಾಜ್ಯ ವೆಚ್ಚದ ಜೊತೆಗೆ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯದ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು,
ಬಾಣಂತಿ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂಬುದನ್ನು
ಗಮನಿಸಿದ್ದು, ಆಸ್ಪತ್ರೆಯ ವ್ಯವಹಾರ ಸೇವಾ ನ್ಯೂನ್ಯತೆಯಿಂದ ಕೂಡಿದೆ ಎಂದು ತೀರ್ಪು ನೀಡಿದೆ.
ಹೆರಿಗೆ ನಂತರದ ಪರಿಸ್ಥಿತಿಯನ್ನು ಸೂಕ್ತ
ರೀತಿಯಲ್ಲಿ ನಿಭಾಯಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ. ಆಸ್ಪತ್ರೆಯಲ್ಲಿ ತುರ್ತು ಸಮಯದಲ್ಲಿ ಹೊಂದಿರಬೇಕಾದ
ವ್ಯವಸ್ಥೆ ಇಲ್ಲದಿರುವುದರನ್ನೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗಮನಿಸಿದೆ.
ಪ್ರಕರಣದಲ್ಲಿ ಕೇಸ್ ಶೀಟ್, ಡಿಸ್ಚಾರ್ಚ್ ಸಮ್ಮರಿಗಳನ್ನು ಆಸ್ಪತ್ರೆ ತನ್ನ ಗ್ರಾಹಕರಾದ ದೂರುದಾರರಿಗೆ ನೀಡದೇ ಇರುವುದು ಸೇವಾ ನ್ಯೂನ್ಯತೆಯಾಗಿದ್ದು, ವೃತ್ತಿ ನಿಯಮದ ಉಲ್ಲಂಘನೆಯಾಗಿದೆ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.