
ಅಜ್ಞಾನದಿಂದ ಮಾಡುವ ಕರ್ತವ್ಯ ಲೋಪಕ್ಕೆ ಕ್ಷಮೆ ಇಲ್ಲ: ಡಿಸಿಗೆ 2 ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್- ತಮ್ಮ ಜೇಬಿನಿಂದಲೇ ದಂಡ ಭರಿಸಲು ಆದೇಶ
ಅಜ್ಞಾನದಿಂದ ಮಾಡುವ ಕರ್ತವ್ಯ ಲೋಪಕ್ಕೆ ಕ್ಷಮೆ ಇಲ್ಲ: ಡಿಸಿಗೆ 2 ಲಕ್ಷ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್- ತಮ್ಮ ಜೇಬಿನಿಂದಲೇ ದಂಡ ಭರಿಸಲು ಆದೇಶ
ಸರ್ಕಾರಿ ಅಧಿಕಾರಿಗಳು ಅಜ್ಞಾನದಿಂದ ಮಾಡುವ ಕರ್ತವ್ಯ ಲೋಪಕ್ಕೆ ಯಾವುದೇ ಕ್ಷಮೆ ಕೊಡಲಾಗದು. ಜಾತಿ ಪ್ರಮಾಣ ಪತ್ರ ನೀಡುವಾಗ ಕಾನೂನಿನ ಬಗ್ಗೆ ಉದ್ದೇಶಪೂರ್ವಕ ಲೋಪ ತೋರಿದ್ದ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯ ಅಧ್ಯಕ್ಷರು ಸೇರಿ ಎಲ್ಲ ಸದಸ್ಯರಿಗೆ 2 ಲಕ್ಷ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕರ್ನಾಟಕ ಸರ್ಕಾರದ ಹೆಚ್ಚುವರಿ ಸರ್ಕಾರಿ ಅಭಿಯೋಜಕಿಯಾಗಿ ನೇಮಕಗೊಂಡಿದ್ದ ಮಹಿಳೆಯೊಬ್ಬರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಾಗ ಡಿಸಿ ನೇತೃತ್ವದ ಪರಿಶೀಲನಾ ಸಮಿತಿ ಕಾನೂನು ಬಗ್ಗೆ ಉದ್ದೇಶಪೂರ್ವಕವಾಗಿ ಉದಾಸೀನತೆ ತೋರಿತ್ತು. ಈ ಲೋಪದ ಅಜ್ಞಾನದಿಂದ ಮಾಡಿದ್ದರೂ ಇಂತಹ ಕರ್ತವ್ಯ ಲೋಪಕ್ಕೆ ನ್ಯಾಯಾಲಯಗಳು ಆಶ್ರಯ ನೀಡಲಾಗದು ಎಂದು ನ್ಯಾಯಪೀಠ ಖಡಕ್ ಆಗಿ ನುಡಿಯಿತು.
ಅಲ್ಲದೆ, ದಂಡದ ಮೊತ್ತವಾದ 2 ಲಕ್ಷ ರೂ.ಗಳನ್ನು ತಮ್ಮದೇ ಜೇಬಿನಿಂದ ಒಂದು ತಿಂಗಳಲ್ಲಿ ಪಾವತಿಸುವಂತೆ ಆದೇಶ ನೀಡಿತು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಯಾವಾಗಲೂ ತಂದೆಯ ಆದಾಯವನ್ನು ಆಧರಿಸುತ್ತದೆಯೇ ವಿನಃ ಪತಿಯ ಆದಾಯವನ್ನಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಸರ್ಕಾರಿ ಅಭಿಯೋಜಕಿಯಾಗಿ ಆಯ್ಕೆಯಾಗಿರುವ ಅರ್ಜಿದಾರೆ ಬಿ.ಎನ್. ಮುತ್ತುಲಕ್ಷ್ಮಿ ಅವರು ವೇತನ ಮತ್ತು ಹಣಕಾಸಿನ ಸೌಲಭ್ಯಗಳನ್ನು ಹೊರತುಪಡಿಸಿ ಎಲ್ಲ ಸೌಲಭ್ಯಗಳಿಗೂ ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಉದ್ದೇಶಪೂರ್ವಕವಾಗಿ ಕಾನೂನನ್ನು ಉಪೇಕ್ಷಿಸಿದ್ದಾರೆ. ಇದರಿಂದ ಅರ್ಜಿದಾರರಾದ ಮುತ್ತುಲಕ್ಷ್ಮಿ ಅವರು ಅನಗತ್ಯವಾಗಿ ನ್ಯಾಯಾಲಯದ ಕದ ತಟ್ಟುವಂತಾಗಿದೆ. ಇದರಿಂದ ಅವರಿಗೆ 12 ತಿಂಗಳು ಉದ್ಯೋಗ ನಷ್ಟವಾಗಿದೆ ಎಂದು ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿತು.
ಈ ನೋವಿಗೆ ಜಿಲ್ಲಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಮಿತಿಯ ಸದಸ್ಯರು ನೇರವಾಗಿ ಹೊಣೆಯಾಗಿದ್ದಾರೆ. ಈ ನಷ್ಟವನ್ನು ಅವರು ತುಂಬಿಕೊಡಬೇಕಿದೆ. ದುಬಾರಿ ದಂಡ ವಿಧಿಸುವುದು ಅರ್ಜಿದಾರರಿಗೆ ನಷ್ಟ ತುಂಬಿಕೊಡುವುದಕ್ಕೆ ಮಾತ್ರವಲ್ಲ, ಸರ್ಕಾರಿ ಕೆಲಸದಲ್ಲಿ ಇರುವವರಿಗೆ ನಿರ್ಲಕ್ಷ್ಯದಿಂದ ಉಂಟು ಮಾಡುವ ಕರ್ತವ್ಯಲೋಪಕ್ಕೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಆಶ್ರಯ ಒದಗಿಸುವುದಿಲ್ಲ ಎಂಬುದನ್ನು ಎಚ್ಚರಿಸುವುದಕ್ಕಾಗಿ ಎಂದು ನ್ಯಾಯಮೂರ್ತಿಗಳು ಖಡಕ್ ಆಗಿ ಆದೇಶ ಹೊರಡಿಸಿದರು.
ನ್ಯಾಯದಾನವನ್ನು ವಿಳಂವಿಸುವುದೆಂದರೆ ಅದನ್ನು ನಿರಾಕರಿಸಿದಂತೆ ಎಂದು ಇಲ್ಲಿ ಹೇಳುವುದು ಅಗತ್ಯವಾಗಿದೆ ಎಂಬ ಮಾತನ್ನು ಒತ್ತಿ ಹೇಳಿದ ನ್ಯಾಯಪೀಠ, ಅರ್ಜಿದಾರರ ಜೊತೆಗೆ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡವರು ಸೇವೆ ಹಾಜರಾಗಿದ್ದಾರೆ. ಆದರೆ, ಇವರ ಕಥೆ ತ್ರಿಶಂಕು ಸ್ಥಿತಿಯಲ್ಲಿದೆ. ಅವರ ಶಾಸನಬದ್ಧ ಆಕಾಂಕ್ಷೆಯು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪಕ್ಕೆ ಸಿಲುಕಿ ನುಚ್ಚು ನೂರಾಗಿದೆ. ಹೀಗಾಗಿ, ಈ ಪ್ರಕರಣವನ್ನು ಹಾಗೆಯೇ ಹೋಗಲು ಅವಕಾಶ ನೀಡಲಾಗದು. ಕಾನೂನು ಸ್ಪಷ್ಟವಾಗಿದ್ದು, ಪೂರ್ವನಿದರ್ಶನ ಪಾಲಿಸಬೇಕಿದೆ. ಆದರೂ, ಅಧಿಕಾರಿಗಳು ವಿನಾಯಿತಿ ಪಡೆದು ವಿರುದ್ಧವಾಗಿ ನಡೆದುಕೊಂಡಿದ್ದು, ನ್ಯಾಯವಿರೋಧಿ ದಾಖಲೆ ಬರೆದ ಸಮಿತಿಯ ಸದಸ್ಯರು ತಮ್ಮ ಅವಿವೇಕಕ್ಕೆ ಹೊಣೆ ಹೊರಬೇಕಿದೆ ಎಂದು ಆದೇಶ ನೀಡಿದೆ.
ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ, ಗಾಢ ನಿದ್ರೆಯಲ್ಲಿ ಮುಳುಗಿದ್ದ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಂಧುತ್ವ ಸರ್ಟಿಫಿಕೇಟ್ ನೀಡಿದ್ದಾರೆ. ಆನಂತರ ಅರ್ಜಿದಾರರ ಕೈಗೆ ನೇಮಕಾತಿ ಆದೇಶ ದೊರೆತಿದೆ. ಈ ಎಲ್ಲದರ ಮಧ್ಯೆ, ಅಧಿಕಾರಿಗಳ ಉಪೇಕ್ಷೆಗೆ ತಕ್ಕಪಾಠ ಕಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ:
30-09-2019ರಂದು 181 ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಯನ್ನು ತುಂಬಲು ಅಭಿಯೋಜನ ಇಲಾಖೆ ಮತ್ತು ಅಧಿಸೂಚನೆ ಹೊರಿಡಿಸಿತ್ತು. ಈ ಪ್ರಕ್ರಿಯೆಯಲ್ಲಿ 17-01-2023ರಂದು ಮುತ್ತುಲಕ್ಷ್ಮಿ ಅವರು 3A ವಿಭಾಗದಡಿ ಹುದ್ದೆಗೆ ಆಯ್ಕೆಯಾಗಿದ್ದು, ಆನಂತರ 25-05-2023ರಂದು ಪರಿಶೀನೆಗಾಗಿ ಅವರು ಎಲ್ಲ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಕೆ ಮಾಡಿದ್ದರು.
ಇದೇ ದಾಖಲೆಗಳನ್ನು ತಾಲೂಕು ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಗೆ ನೀಡಿದ್ದರು. ಆದರೆ, ತಾಲೂಕು ಅಧಿಕಾರಿಯನ್ನು ಮುತ್ತುಲಕ್ಷ್ಮಿ ಅವರ ಮನೆಗೆ ಕಳುಹಿಸಿ, ಪರಿಶೀಲನಾ ವರದಿ ಪಡೆದಿದ್ದರು. ವರದಿಯಲ್ಲಿ ಮುತ್ತುಲಕ್ಷ್ಮಿ ಅವರ ಪತಿಯು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವುದರಿಂದ ಅವರ ಜಾತಿ ಮತ್ತು ಆದಾಯ ಪ್ರಮಾಣಪತ್ರವು ಪತ್ನಿಯ ಆದಾಯವನ್ನು ಆಧರಿಸಬೇಕು. ಹೀಗಾಗಿ ಸಿಂಧುತ್ವ ಸರ್ಟಿಫಿಕೇಟ್ ನೀಡಬಾರದು ಎಂದು ವರದಿ ನೀಡಿದ್ದರು.
ಪ್ರಕರಣ: ಮುತ್ತುಲಕ್ಷ್ಮಿ ಬಿ.ಎನ್. ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, WP 10897/2024 Dated 8-07-2025