
ವಕೀಲರು ಬಾರ್ ಕೌನ್ಸಿಲ್‌ನ ಉದ್ಯೋಗಿಗಳಲ್ಲ, PoSH ಕಾಯ್ದೆ ಅನ್ವಯಿಸುವುದಿಲ್ಲ: ಬಾಂಬೆ ಹೈಕೋರ್ಟ್
ವಕೀಲರು ಬಾರ್ ಕೌನ್ಸಿಲ್‌ನ ಉದ್ಯೋಗಿಗಳಲ್ಲ, PoSH ಕಾಯ್ದೆ ಅನ್ವಯಿಸುವುದಿಲ್ಲ: ಬಾಂಬೆ ಹೈಕೋರ್ಟ್
ವಕೀಲರು ಬಾರ್ ಕೌನ್ಸಿಲ್‌ನ ಉದ್ಯೋಗಿಗಳಲ್ಲ. ಇಲ್ಲಿ ಉದ್ಯೋಗದಾತ-ಉದ್ಯೋಗಿ ಸಂಬಂಧ ಅನ್ವಯಿಸುವುದಿಲ್ಲ. ಹಾಗಾಗಿ, PoSH ಕಾಯ್ದೆ ಅನ್ವಯಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಭಾರತೀಯ ಬಾರ್ ಕೌನ್ಸಿಲ್ (BCI) ಮತ್ತು ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ (BCMG) ಒಳಗೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 (PoSH ಕಾಯ್ದೆ) ಅಡಿಯಲ್ಲಿ ಶಾಶ್ವತ ಆಂತರಿಕ ದೂರು ಸಮಿತಿಗಳನ್ನು (ICC) ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
PoSH ಕಾಯ್ದೆಯು ಉದ್ಯೋಗದಾತ-ಉದ್ಯೋಗಿ ಸಂಬಂಧವನ್ನು ಒಳಗೊಂಡ ಸಂದರ್ಭಗಳಲ್ಲಿ ಕಟ್ಟುನಿಟ್ಟಾಗಿ ಅನ್ವಯಿಸುತ್ತದೆ. ಆದರೆ, ಇದು ವಕೀಲರ ಪರಿಷತ್ತು ಮತ್ತು ವೃತ್ತಿನಿರತ ವಕೀಲರ ನಡುವಿನ ಸಂಬಂಧಕ್ಕೆ ಅನ್ವಯಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
"ಉದ್ಯೋಗದಾತ-ಉದ್ಯೋಗಿ ಸಂಬಂಧವಿದ್ದಾಗ ಕಾಯಿದೆಯ ನಿಬಂಧನೆಗಳು ಅನ್ವಯಿಸುತ್ತವೆ ಎಂಬುದು ಸ್ಪಷ್ಟವಾಗಿದೆ. ಭಾರತೀಯ ವಕೀಲರ ಮಂಡಳಿ ಅಥವಾ ಮಹಾರಾಷ್ಟ್ರ ಮತ್ತು ಗೋವಾದ ವಕೀಲರ ಪರಿಷತ್ತುಗಳನ್ನು ವಕೀಲರ ಉದ್ಯೋಗದಾತರು ಎಂದು ಹೇಳಲಾಗುವುದಿಲ್ಲ. ಹೀಗಾಗಿ, POSH ಕಾಯ್ದೆ, 2013 ರ ನಿಬಂಧನೆಗಳು ವಕೀಲರಿಗೆ ಅನ್ವಯಿಸುವುದಿಲ್ಲ" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ವಕೀಲರ ವಿರುದ್ಧದ ಲೈಂಗಿಕ ಕಿರುಕುಳ ದೂರುಗಳನ್ನು ಪರಿಹರಿಸಲು PoSH ಕಾಯ್ದೆಯಡಿಯಲ್ಲಿ ಶಾಶ್ವತ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಸ್ಥಾಪಿಸಬೇಕು ಎಂದು ಕೋರಿ UNS ಮಹಿಳಾ ಕಾನೂನು ಸಂಘ 2017ರಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು.
ಆದರೆ, ವಕೀಲರು ಬಾರ್ ಕೌನ್ಸಿಲ್‌ಗಳ ಉದ್ಯೋಗಿಗಳಲ್ಲದ ಕಾರಣ, ಶಾಶ್ವತ ಆಂತರಿಕ ದೂರುಗಳನ್ನು ರಚಿಸುವ ಶಾಸನಬದ್ಧ ಅವಶ್ಯಕತೆ ಇಲ್ಲಿ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.
ಇದೇ ವೇಳೆ, PoSH ಕಾಯ್ದೆ ವಕೀಲರಿಗೆ ಅನ್ವಯಿಸದಿದ್ದರೂ, ಬಾರ್ ಕೌನ್ಸಿಲ್‌ಗಳು ಅಥವಾ ಬಾರ್ ಅಸೋಸಿಯೇಷನ್‌ಗಳಲ್ಲಿ ಸಿಬ್ಬಂದಿ ಸಂಖ್ಯೆ 10ಕ್ಕಿಂತ ಹೆಚ್ಚಿದ್ದರೆ, ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹಾಗೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.