ಜಡ್ಜ್ ಆಗಲು ಮೂರು ವರ್ಷ ವಕೀಲಿಕೆಯ ಅನುಭವ: ತೀರ್ಪು ಸಡಿಲಿಸಲು ಸುಪ್ರೀಂ ಕೋರ್ಟ್ ನಕಾರ
ಜಡ್ಜ್ ಆಗಲು ಮೂರು ವರ್ಷ ವಕೀಲಿಕೆಯ ಅನುಭವ: ತೀರ್ಪು ಸಡಿಲಿಸಲು ಸುಪ್ರೀಂ ಕೋರ್ಟ್ ನಕಾರ
ಜಡ್ಜ್ ಆಗಲು ಕನಿಷ್ಟ ಮೂರು ವರ್ಷ ವಕೀಲಿಕೆಯ ಅನುಭವ ಇರಬೇಕು ಎಂಬ ತೀರ್ಪು ಸಡಿಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅಖಿಲ ಭಾರತ ನ್ಯಾಯಾಂಗ ಅಧಿಕಾರಿಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ, ಈ ತೀರ್ಪು ಪ್ರಕಟಿಸಿದೆ.
ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷಗಳ ವಕಾಲತ್ತು ಅನುಭವವನ್ನು ಹೊಂದಿರಬೇಕು ಎಂದು ಸೇವಾ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಮೇ 2025 ರಲ್ಲಿ ಎಲ್ಲಾ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಈ ಬಗ್ಗೆ ಅಖಿಲ ಭಾರತ ನ್ಯಾಯಾಧೀಶರ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸದ್ರಿ ಪ್ರಕರಣದಲ್ಲಿ ಸ್ಪಷ್ಟೀಕರಣ ಕೋರಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ತಮ್ಮ ಹಿಂದಿನ ತೀರ್ಪನ್ನು ಮಾರ್ಪಡಿಸಲು ನಿರಾಕರಿಸಿದ್ದು, ನ್ಯಾಯಾಂಗ ಅಧಿಕಾರಿಗಳ ಅನುಭವವನ್ನು ವಕೀಲರಾಗಿ ಕಾರ್ಯನಿರ್ವಹಿಸುವ ಅನುಭವಕ್ಕೆ ಸಮಾನವಾಗಿ ಪರಿಗಣಿಸುವ ಮನವಿಯನ್ನು ತಿರಸ್ಕರಿಸಿತು.
2019ರಲ್ಲಿ ಗ್ವಾಲಿಯರ್‌ನ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಂಡ ಅರ್ಜಿದಾರರು, ಕಾನೂನು ಗುಮಾಸ್ತರ ಕೆಲಸದ ಅನುಭವವನ್ನು ವಕೀಲಿಕೆಯ ಅನುಭವ ಎಂದು ಪರಿಗಣಿಸಬಹುದು ಎಂಬ ನ್ಯಾಯಾಲಯದ ಅವಲೋಕನವನ್ನು ಉಲ್ಲೇಖಿಸಿ, ತಮ್ಮ ನ್ಯಾಯಾಂಗ ಸೇವಾ ಅನುಭವವು ಅವಶ್ಯಕತೆಗೆ ತಕ್ಕಂತೆ ಪರಿಗಣಿಸಬೇಕು ಎಂದು ವಾದಿಸಿದರು.
ನ್ಯಾಯಾಂಗ ಕೆಲಸವು ವಕಾಲೀಕೆಗಿಂತಲೂ ಆಳವಾದ ಕಾನೂನು ಮಾನ್ಯತೆಯನ್ನು ಹೊಂದಿದೆ. "ಒಂದು ಬಾರಿ ಬರೆಯುವುದು ಹತ್ತು ಪಟ್ಟು ಓದುವುದಕ್ಕೆ ಸಮಾನವಾಗಿರುತ್ತದೆ - ನ್ಯಾಯಾಂಗ ಅನುಭವವು ಹೆಚ್ಚು ಶ್ರೀಮಂತವಾಗಿದೆ" ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ಸಿಜೆಐ ನೇತೃತ್ವದ ನ್ಯಾಯಪೀಠ, ಮೇ 2025ರ ತೀರ್ಪನ್ನು ಪುನರ್ಸ್ಥಾಪಿಸಿತು. ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸವನ್ನು ಹೊಂದಿರಬೇಕು ಎಂದು ಪುನರುಚ್ಚರಿಸಿತು.
ನವ ಕಾನೂನು ಪದವೀಧರರು ಯಾವುದೇ ವಕೀಲಿಕೆಯ ಅನುಭವ ಇಲ್ಲದೆ, ನೇರವಾಗಿ ಮುನ್ಸೀಫ್-ಮ್ಯಾಜಿಸ್ಟ್ರೇಟ್‌ಗಳಾಗಿ ನ್ಯಾಯಾಂಗ ಸೇವೆಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಅವಕಾಶವನ್ನು 2025ರ ಮೇ ತಿಂಗಳಿನಲ್ಲಿ ನೀಡಿದ್ದ ತೀರ್ಪು ಬದಿಗಿರಿಸಿತ್ತು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಜಡ್ಜ್‌ಗಳಿಗೆ ವಕೀಲಿಕೆಯ ಅನುಭವದ ಕೊರತೆಯು ಹಲವು ಸವಾಲುಗಳನ್ನು ಸೃಷ್ಟಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಕೋರ್ಟ್ ಕಲಾಪದ ಅನುಭವವು ನ್ಯಾಯಾಧೀಶರಿಗೆ ಬೇಕಾದ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಗಮನಿಸಿದ ನ್ಯಾಯಪೀಠ, ಸದ್ಯ ಚಾಲ್ತಿಯಲ್ಲಿ ಇರುವ ಜಡ್ಜ ನೇಮಕಾತಿ ಪ್ರಕ್ರಿಯೆಗಳಿಗೆ ವಿನಾಯಿತಿ ಸಿಗುತ್ತದೆ ಎಂದು ತೀರ್ಪು ಸ್ಪಷ್ಟಪಡಿಸಿತು.
ವೃತ್ತಿ ಅನುಭವದ ಪುರಾವೆಯನ್ನು ಪ್ರಧಾನ ನ್ಯಾಯಾಂಗ ಅಧಿಕಾರಿ ಅಥವಾ ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ಹಿರಿಯ ವಕೀಲರು ಪ್ರಮಾಣೀಕರಿಸಬೇಕು, ಇದನ್ನು ಸಮರ್ಥ ನ್ಯಾಯಾಂಗ ಪ್ರಾಧಿಕಾರವು ಅನುಮೋದಿಸಬೇಕು. ಹೈಕೋರ್ಟ್‌ಗಳು ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವವರಿಗೆ, ನ್ಯಾಯಾಲಯವು ಗೊತ್ತುಪಡಿಸಿದ ಅಧಿಕಾರಿಯೊಬ್ಬರು ಅನುಮೋದಿಸಿದ ಇದೇ ರೀತಿಯ ಸ್ಥಾನಮಾನ ಹೊಂದಿರುವ ಹಿರಿಯ ವಕೀಲರಿಂದ ಪ್ರಮಾಣೀಕರಣ ಮಾಡಿರಬೇಕು ಎಂದು ತೀರ್ಪು ಹೇಳಿದೆ.
ಪ್ರಕರಣ: ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಇತರರು ವಿರುದ್ಧ ಭಾರತ ಒಕ್ಕೂಟ ಮತ್ತು ಇತರರು