
ಅನುಕಂಪದ ಉದ್ಯೋಗ: ಸರ್ಕಾರಿ ಸೇವಕರ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಸ್ಪಷ್ಟ ಪ್ರಕ್ರಿಯೆ ನಡೆಸಿ- ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
ಅನುಕಂಪದ ಉದ್ಯೋಗ: ಸರ್ಕಾರಿ ಸೇವಕರ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಸ್ಪಷ್ಟ ಪ್ರಕ್ರಿಯೆ ನಡೆಸಿ- ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ
"ಅನುಕಂಪದ ಉದ್ಯೋಗ" ಕುರಿತು ನಡೆಯುವ ಪ್ರಕ್ರಿಯೆಯಲ್ಲಿ ಆಗುವ ವಿಳಂಬ ಮತ್ತು ಲೋಪ ತಪ್ಪಿಸಲು ಒಂದೇ ರೀತಿಯ ಏಕೀಕೃತ ಎಸ್‌ಒಪಿ ರೂಪಿಸಲು ರಾಜ್ಯ ಸರ್ಕಾರಕ್ಕೆ, ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದ್ದು, 'ಅನುಕಂಪದ ನೇಮಕಾತಿ' ನಡೆಸುವ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವಂತೆ ಸರ್ಕಾರಕ್ಕೆ ನೀರ್ದೇಶನ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಕಲಬುರ್ಗಿಯ ಜೇವರ್ಗಿ ತಾಲ್ಲೂಕಿನ ಕುಟುಂಬವೊಂದು 16.12.2014ರಂದು ಜೇವರ್ಗಿಯ ತಹಶೀಲ್ದಾರ್ ಕಚೇರಿಯಲ್ಲಿ ಗುಮಾಸ್ತರಾಗಿದ್ದ ತಂದೆ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಬಯಸಿ 16.12.2014ರಂದು ಅರ್ಜಿ ಸಲ್ಲಿಸಿತ್ತು. ಅಲ್ಲಿಂದ ಸರಿಸುಮಾರು ಒಂದು ದಶಕದ ಹೋರಾಟ ದ ಬಳಿಕ ಅಂತಿಮವಾಗಿ ಕರ್ನಾಟಕ ಹೈಕೋರ್ಟ್ ಆದೇಶದ ಅನುಕಂಪದ ಉದ್ಯೋಗ ಪಡೆಯುವಲ್ಲಿ ಸಂತ್ರಸ್ತ ಕುಟುಂಬ ಯಶಸ್ವಿಯಾಗಿದೆ.
ರಾಜಾ ಪಟೇಲ್ ಎಂಬವರು ಕಲಬುರ್ಗಿಯ ಜೇವರ್ಗಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಗುಮಾಸ್ತನಾಗಿದ್ದರು. ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಉದ್ಯೋಗವನ್ನು ನಾಲ್ವರು ಮಕ್ಕಳಲ್ಲಿ ಒಬ್ಬರಿಗೆ ನೀಡುವಂತೆ ಕೋರಿ ವಿಧವೆ ಪತ್ನಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನಿಗದಿತ ಅವಧಿಯಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಆದೇಶ ನೀಡಿದೆ.
'ಸರ್ಕಾರಿ ಸೇವಕ ನಿಧನರಾದ ಒಂದು ವರ್ಷದಲ್ಲಿ ಕಾನೂನಾತ್ಮಕ ವಾರಸುದಾರರು ವ್ಯವಸ್ಥಿತವಾಗಿ ಅರ್ಜಿ ಸಲ್ಲಿಸದಿದ್ದರೆ ಅನುಕಂಪದ ಉದ್ಯೋಗಕ್ಕೆ ಅರ್ಹರಾಗುವುದಿಲ್ಲ' ಎಂಬುದಾಗಿ ರಾಜ್ಯ ಸರ್ಕಾರ ವಾದ ಮಂಡಿಸಿತ್ತು. ಆದರೆ, ಈ ವಾದವನ್ನು ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠ ತಿರಸ್ಕರಿಸಿದೆ. ಇದೇ ವೇಳೆ, 'ಅನುಕಂಪದ ಆಧಾರಿತ ಉದ್ಯೋಗ'ಗಳ ವಿಚಾರದಲ್ಲಿ ಉಂಟಾಗುವ ಪ್ರಕ್ರಿಯೆ ಲೋಪ ತಡೆಯಲು ಏಕೀಕೃತ ಪ್ರಮಾಣಿತ ಕಾರ್ಯಾಚಾರಣೆ ವಿಧಾನ (SOP) ರೂಪಿಸುವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು.
'ಅನುಕಂಪದ ಉದ್ಯೋಗ ಕೋರುವ ಪ್ರತಿಯೊಂದು ಅರ್ಜಿಯು ನಿಗದಿತ ನಮೂನೆಯಲ್ಲಿರಲಿ' ಅಥವಾ ಇಲ್ಲದಿರಲಿ ಸಂಬಂಧಿತ ಪ್ರಾಧಿಕಾರವು ಒಂದು ತಿಂಗಳಲ್ಲಿ ಲಿಖಿತವಾಗಿ ಸ್ವೀಕೃತಿ ನೀಡಿ ಅರ್ಜಿಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ, ಅರ್ಜಿ ಪರಿಪೂರ್ಣವಾಗಿದ್ದರೂ ಅಥವಾ ಅಪೂರ್ಣವಾಗಿದ್ದರೂ. ಅಥವಾ ಅರ್ಜಿ ನಮೂನೆಯಲ್ಲಿ ಏನಾದರೂ ಸಮಸ್ಯೆ ಇದೆಯೇ, ಇತರೆ ಅವಲಂಬಿತರಿಗೆ ಅರ್ಜಿ ಸಲ್ಲಿಸುವ ಹಕ್ಕು ಇದೆಯೇ ಎಂಬುದನ್ನು ಸಂತ್ರಸ್ತ ಕುಟುಂಬಕ್ಕೆ ತಿಳಿಸಬೇಕು. ಅದೇ ರೀತಿ, ಅನುಕಂಪದ ಉದ್ಯೋಗಕ್ಕೆ ಅನ್ವಯಿಸುವ ಕಾಲಮಿತಿಯ ಮಾಹಿತಿಯನ್ನು ನೀಡಬೇಕು.
ಅರ್ಜಿದಾರೆಯು ವಿಧವೆಯಾಗಿದ್ದು, ಅನಕ್ಷರಸ್ಥೆ ಅಥವಾ ಏನೇ ಆಗಿದ್ದರೂ ಅನುಕಂಪದ ಉದ್ಯೋಗ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಂಬಂಧಿತ ಇಲಾಖೆಯು ಅವರಿಗೆ ಯಾವ ವಿಧಾನದಲ್ಲಿ ದಾಖಲೆ ಸಲ್ಲಿಸಬೇಕು ಮತ್ತು ಇತರೆ ಅವಲಂಬಿತರು ಅರ್ಜಿ ಸಲ್ಲಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಅವರಿಗೆ ನೆರವಾಗಬೇಕು" ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅಲ್ಲದೇ, ಅನುಕಂಪದ ಉದ್ಯೋಗ ಸಂಬಂಧಿತ ಅರ್ಜಿ ಸ್ವೀಕೃತಿಯಾದ ಗರಿಷ್ಠ ಮೂರು ತಿಂಗಳಲ್ಲಿ ಅರ್ಜಿಯನ್ನು ಇತ್ಯರ್ಥಪಡಿಸಬೇಕು. ಅರ್ಜಿಯು ತಿರಸ್ಕೃತಗೊಂಡರೆ, ಅದಕ್ಕೆ ಸೂಕ್ತ ಕಾರಣಗಳನ್ನು ನೀಡಿ ಅದನ್ನು ಅರ್ಜಿದಾರರಿಗೆ ತಕ್ಷಣ ತಿಳಿಸಬೇಕು. ಪ್ರಕ್ರಿಯೆಯಲ್ಲಾಗುವ ಲೋಪಗಳನ್ನು ತಪ್ಪಿಸಲು ರಾಜ್ಯ ಸರ್ಕಾರವು ಏಕೀಕೃತ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಲು ಮತ್ತು ಅನುಕಂಪದ ಉದ್ಯೋಗಕ್ಕೆ ನೇಮಕಾತಿ ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡಬೇಕು" ಎಂದು ನ್ಯಾಯಾಲಯ ನಿರ್ದೇಶಿಸಿದೆ..
"ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ನಮ್ಮ ಅನುಭವಿಸುವ ಕುಟುಂಬಗಳಿಗೆ ತಕ್ಷಣ ಆರ್ಥಿಕ ಪರಿಹಾರ ಕಲ್ಪಿಸುವ ಅನುಕಂಪ ನೇಮಕ ಪ್ರಕರಣಗಳು ಕಲ್ಯಾಣ ಕ್ರಮಗಳಾಗಿದ್ದು, ಕಾರ್ಯವಿಧಾನದಲ್ಲಿ ನ್ಯಾಯಸಮ್ಮತತೆ ಕಾಯ್ದುಕೊಳ್ಳುವ ಮಹತ್ವದ ಕರ್ತವ್ಯವನ್ನು ಸರ್ಕಾರ ನಿಭಾಯಿಸಬೇಕು. ಅನಕ್ಷರಸ್ಥರು ಅಥವಾ ವಿಧವೆಯು ಸೂಕ್ತ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ, ಪಾರದರ್ಶಕತೆಯಿಂದ ಸಹಕಾರಿಯಾಗಿ ನಡೆದುಕೊಳ್ಳಬೇಕು. ಇದನ್ನು ಮಾಡದಿದ್ದರೆ ನಿಧನರಾದ ಸರ್ಕಾರಿ ಅಧಿಕಾರಿಯನ್ನು ಅವಲಂಬಿಸಿರುವವರ ಹಕ್ಕುದಾರರ ಅವಕಾಶ ನಿರಾಕರಿಸಿದಂತಾಗಲಿದೆ' ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ:
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ರಾಜಾ ಪಟೇಲ್ ಬಂದಾ 2014ರ ಡಿಸೆಂಬರ್ 16ರಂದು ನಿಧನರಾಗಿದ್ದರು. 2015ರ ಜನವರಿ 2ರಂದು ಮೃತರ ಪತ್ನಿಯು ಪಿಂಚಣಿ, ನಿವೃತ್ತಿ ಸೌಲಭ್ಯಗಳು ಹಾಗೂ ನಾಲ್ವರು ಪುತ್ರರಲ್ಲಿ ಒಬ್ಬನಿಗೆ ಅನುಕಂಪದ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರವು ಸ್ಪಂದಿಸಲು ವಿಫಲವಾಗಿತ್ತು.
ಹೀಗಾಗಿ, ಪ್ರತಿವಾದಿಯ ಸಹೋದರ 2015ರ ಅಕ್ಟೋಬರ್ 5ರಂದು ಅನುಕಂಪದ ಉದ್ಯೋಗ ಕೋರಿದ್ದು, ವಯೋಮಿತಿ ಮೀರಿದ್ದರಿಂದ ಉದ್ಯೋಗ ನಿರಾಕರಿಸಲಾಗಿತ್ತು. ಆದ್ದರಿಂದ 23.02.2017ರಂದು ಪ್ರತಿವಾದಿ ಮಹಬೂಬ್ ಪಟೇಲ್ ತನ್ನ ತಾಯಿ 2015ರ ಜನವರಿಯಲ್ಲಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ, ಅನುಕಂಪದ ಉದ್ಯೋಗ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ತಹಶೀಲ್ದಾರ್ ಸ್ವೀಕೃತಿ ನೀಡಿದ್ದರು. ಆದರೆ, ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ನೆಲೆಯಲ್ಲಿ ನೇಮಕಾತಿ) ನಿಯಮಗಳು 1996ರ ನಿಯಮ 5ರ ಅಡಿ ಅವಕಾಶವಿಲ್ಲ ಎಂದು ಮಹಬೂಬ್ ಪಟೇಲ್ ಅರ್ಜಿ ವಜಾಗೊಳಿಸಲಾಗಿತ್ತು. ನಿಯಮ 5ರ ಪ್ರಕಾರ ಸರ್ಕಾರಿ ಸೇವಕ ನಿಧನರಾದ ಒಂದು ವರ್ಷದೊಳಗೆ ಅನುಕಂಪದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೇಳಲಾಗಿತ್ತು. ಈ ಸೀಕೃತಿಗೆ ಆಕ್ಷೇಪಿಸಿ ಮಹಬೂಬ್ ಪಟೇಲ್ ಅವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯ ಕಲಬುರ್ಗಿ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಡಳಿತಾತ್ಮಕ ನ್ಯಾಯ ಮಂಡಳಿ ಪುರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿದ್ದ ಸರ್ಕಾರದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಎರಡು ತಿಂಗಳಲ್ಲಿ ಮಹಬೂಬ್ ಪಟೇಲ್‌ಗೆ ಉದ್ಯೋಗ ನೀಡಲು ನಿರ್ದೇಶಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ದೂರಗಾಮಿ ಪರಿಣಾಮ ಉಂಟುಮಾಡಲಿದ್ದು, ಅನುಕಂಪದ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ಮೈಲುಗಲ್ಲಾಗಿದೆ.
ಪ್ರಕರಣ: ಕರ್ನಾಟಕ ಸರ್ಕಾರ ವಿರುದ್ಧ ಮೆಹಬೂಬ್ ಪಟೇಲ್
ಕರ್ನಾಟಕ ಹೈಕೋರ್ಟ್, ರಿಟ್ ಅರ್ಜಿ 202187/2023 Dated 25-07-2025