
ಜಡ್ಜ್ ವಿರುದ್ಧ ಆರೋಪ ಸಾಬೀತು: ಹಿರಿಯ ಸಿವಿಲ್ ನ್ಯಾಯಾಧೀಶರ ಕಡ್ಡಾಯ ನಿವೃತ್ತಿ: ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಜಡ್ಜ್ ವಿರುದ್ಧ ಆರೋಪ ಸಾಬೀತು: ಹಿರಿಯ ಸಿವಿಲ್ ನ್ಯಾಯಾಧೀಶರ ಕಡ್ಡಾಯ ನಿವೃತ್ತಿ: ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ವಿಧಿಸಲಾದ ಕಡ್ಡಾಯ ನಿವೃತ್ತಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ತನಿಖಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡ ಕಾರ್ಯ ವಿಧಾನದಲ್ಲಿ ಯಾವುದೇ ನ್ಯೂನತೆ ಇಲ್ಲ ಎಂದು ಹೇಳಿ ಕೆ.ಎಂ. ಗಂಗಾಧರ್, ಹಿರಿಯ ಸಿವಿಲ್ ನ್ಯಾಯಾಧೀಶರು ಸಲ್ಲಿಸಿದ ರಿಟ್ ಮೇಲ್ ಮನವಿಯನ್ನು ವಜಾಗೊಳಿಸಿತು.
ಕೆ.ಎಂ. ಗಂಗಾಧರ್ ಅವರು ಫೆಬ್ರವರಿ 1995ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ (ಜೂನಿಯರ್ ವಿಭಾಗ) ನ್ಯಾಯಾಂಗ ಸೇವೆಗೆ ಸೇರಿದರು. 2005 ರಲ್ಲಿ ಅವರಿಗೆ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಹುದ್ದೆಗೆ ಬಡ್ತಿ ನೀಡಲಾಯಿತು. ಅವರು ಬೆಂಗಳೂರು ನಗರದ 13ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಡಾ. ಬಿ. ಇಂದುಮತಿ ಅವರು ಅನಸೂಯ ಎಂಬವರ ವಿರುದ್ಧ ಸಲ್ಲಿಸಿದ ದೂರಿನಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ನ್ಯಾಯಾಧೀಶರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದರು. ಅನಸೂಯ ಅವರು ನ್ಯಾಯಾಧೀಶರ ಸಹೋದರಿ ಎಂದು ಹೇಳಲಾಗಿದೆ.
ಅನುಸೂಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ದಿನಾಂಕ 27.4 2011ರಂದು ಗಂಗಾಧರ್ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಹೊರಡಿಸಲಾಯಿತು. ಮತ್ತು ರಿಜಿಸ್ಟ್ರಾರ್ (ವಿಜಿಲೆನ್ಸ್) ಅವರನ್ನು ವಿಚಾರಣಾ ಪ್ರಾಧಿಕಾರವಾಗಿ ನೇಮಿಸಲಾಯಿತು.
ವಿಚಾರಣಾಧಿಕಾರಿಯವರು ದೂರುದಾರರು, ಸಂಬಂಧಪಟ್ಟ ಪೊಲೀಸ್ ಇನ್ಸ್ಪೆಕ್ಟರ್, ಎಚ್.ಟಿ. ಜಯರಾಮಯ್ಯ ಮತ್ತು ಆಪಾದಿತ ನ್ಯಾಯಾಧೀಶರ ವಿಚಾರಣೆ ನಡೆಸಿದರು. ನ್ಯಾಯಾಧೀಶರು ಪೊಲೀಸ್ ಇನ್ಸ್ಪೆಕ್ಟರ್ ಗೆ ಬೆದರಿಕೆ ಹಾಕಿದ್ದಾರೆ ಎಂದು ವಿಚಾರಣೆಯಲ್ಲಿ ಕಂಡುಬಂದಿದೆ ಮತ್ತು ನ್ಯಾಯಾಧೀಶರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂಬ ವರದಿ ಸಲ್ಲಿಸಿದರು.
ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ನಿಯಮ 8(vi) ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ ಗಂಗಾಧರ್ ಅವರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆಯನ್ನು ವಿಧಿಸಲಾಯಿತು.
ಫೆಬ್ರವರಿ 2025 ರಲ್ಲಿ ಕರ್ನಾಟಕ ಹೈಕೋರ್ಟಿನ ಏಕ ಸದಸ್ಯ ನ್ಯಾಯಪೀಠವು ಅವರ ಅರ್ಜಿಯನ್ನು ವಜಾಗೊಳಿಸಿದ ನಂತರ ಗಂಗಾಧರ್ ಅವರು ವಿಭಾಗೀಯ ಪೀಠದ ಮೆಟ್ಟಲೇರಿದರು. ಅವರ ವಿವರಣೆಯನ್ನು ನ್ಯಾಯ ಪೀಠವು ಪರಿಶೀಲಿಸಿಲ್ಲ ಎಂದು ಅವರು ವಾದಿಸಿದರು. ಅವರ ಪ್ರಕಾರ ಅದನ್ನು ಸ್ವೀಕರಿಸಬೇಕಿತ್ತು.
ತನಿಖೆಗೆ ಸಂಬಂಧಿಸಿದಂತೆ ಗಂಗಾಧರ್ ಅವರು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ಸಾಕ್ಷಾಧಾರಗಳಿಂದ ದೃಢಪಟ್ಟಿರುವ ಅಂಶವನ್ನು ವಿಭಾಗೀಯ ಪೀಠವು ಗಮನಿಸಿತು. ಆಗಸ್ಟ್ 20 2007 ರಂದು ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳನ್ನು ನಿಂದಿಸಿ ಬೆದರಿಕೆ ಹಾಕುತ್ತಿರುವ ದೂರವಾಣಿ ಕರೆಯೂ ಸಹ ವಿಭಾಗೀಯ ಪೀಠದ ಗಮನ ಸೆಳೆದಿದೆ.
ಈ ವಾದವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಳವಡಿಸಿಕೊಂಡ ಕಾರ್ಯ ವಿಧಾನದಲ್ಲಿ ನಮಗೆ ಯಾವುದೇ ದೌರ್ಬಲ್ಯ ಕಂಡುಬಂದಿಲ್ಲ ಅಥವಾ ವಿಧಿಸಲಾದ ಶಿಕ್ಷೆ ಹೆಚ್ಚು ಅಸಮಾನವಾಗಿದೆ ಎಂದು ಕಂಡುಬಂದಿಲ್ಲ. ಆಂತರಿಕ ವಿಚಾರಣೆಯ ನಂತರ ವಿಧಿಸಲಾದ ಶಿಕ್ಷೆಯು
1) ಸೇವಾ ಕಾನೂನಿನಡಿ ನಿಯಮಾನುಸಾರ ನಡೆಸ ಬೇಕಾದ ವಿಚಾರಣೆಗೆ ವಿರುದ್ಧವಾಗಿವೆ.
2) ಅಳವಡಿಸಿಕೊಂಡ ಕಾರ್ಯ ವಿಧಾನ ನೈಸರ್ಗಿಕ ನ್ಯಾಯದ ತತ್ವಗಳು ಅಥವಾ ಯಾವುದೇ ಇತರ ಕಾನೂನಿಗೆ ಅನುಗುಣವಾಗಿಲ್ಲ.
3) ದಂಡಗಳು ಅಥವಾ ಶಿಸ್ತಿನ ಪ್ರಕ್ರಿಯೆಗಳು ದುರುದ್ದೇಶ ಪೂರಿತ ಅಥವಾ ಬಾಹ್ಯ ಪರಿಗಣನೆಗಳಿಂದ ದುರ್ಬಲ ಗೊಂಡಿವೆ.
4) ದುರ್ನಡತೆಯ ಕುರಿತಾದ ವಿಚಾರಣೆಯು ವಿಕೃತ ಮತ್ತು ಅಸಮಂಜಸವಾಗಿದೆ.
5) ವಿಧಿಸಲಾದ ಶಿಕ್ಷೆ ಅತಿಯಾಗಿದೆ ಮತ್ತು ಅಸಮಾನವಾಗಿದೆ
ಈ ಮೇಲಿನ ಅಂಶಗಳನ್ನು ಸಾಬೀತುಪಡಿಸದ ಹೊರತು ಶಿಸ್ತು ಪ್ರಾಧಿಕಾರವು ಹೊರಡಿಸಿದ ಆದೇಶದಲ್ಲಿ ಹಸ್ತಕ್ಷೇಪ ಮಾಡಲಾಗುವುದಿಲ್ಲ ಎಂದು ವಿಭಾಗಿಯ ಪೀಠವು ಹೇಳಿದೆ. ತತ್ಪರಿಣಾಮವಾಗಿ ಗಂಗಾಧರ್ ಅವರು ಸಲ್ಲಿಸಿದ ಮೇಲ್ಮನವಿಯನ್ನು ವಿಭಾಗೀಯ ಪೀಠವು ವಜಾಗೊಳಿಸಿತು.
ಪ್ರಕರಣ: ಕೆ.ಎಂ. ಗಂಗಾಧರ್ ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, ರಿಟ್ ಅರ್ಜಿ 600/2025 Dated 19-08-2025