ಜಡ್ಜ್‌ಗಳ ಬಿಲ್‌ಗೆ ಆಕ್ಷೇಪ: ಸಬ್ ಟ್ರೆಷರಿ ಅಧಿಕಾರಿಗಳ ವಿರುದ್ಧದ 'ಸುಳ್ಳು ಪ್ರಕರಣ' ರದ್ದುಗೊಳಿಸಿದ ಹೈಕೋರ್ಟ್
ಜಡ್ಜ್‌ಗಳ ಬಿಲ್‌ಗೆ ಆಕ್ಷೇಪ: ಸಬ್ ಟ್ರೆಷರಿ ಅಧಿಕಾರಿಗಳ ವಿರುದ್ಧದ 'ಸುಳ್ಳು ಪ್ರಕರಣ' ರದ್ದುಗೊಳಿಸಿದ ಹೈಕೋರ್ಟ್
ತಮಿಳುನಾಡು ನ್ಯಾಯಾಂಗ ಅಧಿಕಾರಿಗಳ ಬಿಲ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಸಬ್-ಟ್ರೆಷರಿ ಅಧಿಕಾರಿಯ ವಿರುದ್ಧದ 'ಸುಳ್ಳು ಪ್ರಕರಣ'ವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ಉದಕಮಂಡಲದ (ಊಟಿ) ಉಪ ಖಜಾನಾಧಿಕಾರಿ (ಸಬ್-ಟ್ರೆಷರಿ ಆಫೀಸರ್) ಮತ್ತು ಕೆಲವು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ನಡುವಿನ ಹಿಂದಿನ ದ್ವೇಷದ ಕಾರಣ ಪ್ರಕರಣ ದಾಖಲಾಗಿರುವುದರಿಂದ ಅದು ರದ್ದುಗೊಳಿಸಲು ಯೋಗ್ಯವಾಗಿದೆ ಎಂದು ಮದ್ರಾಸ್ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಅವರಿದ್ದ ನ್ಯಾಯಪೀಠ ಹೇಳಿದೆ.
ಸಬ್-ಟ್ರೆಷರಿ ಅಧಿಕಾರಿಯ ವಿರುದ್ಧ ದಾಖಲಿಸಲಾದ ಪ್ರಕರಣ 'ಸುಳ್ಳು' ಎಂದು ಮನವರಿಕೆಯಾದ ನಂತರ, ಮದ್ರಾಸ್ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿದೆ.
ವೈದ್ಯಕೀಯ, ಇಂಧನ, ಶಿಕ್ಷಣ, ಕಾರು ನಿರ್ವಹಣೆ, ಮೊಬೈಲ್ ಫೋನ್ ರೀಚಾರ್ಜ್, ಸಂಪ್ಚುವರಿ (ಅತಿಥಿ ಭತ್ಯೆ) ಮತ್ತು ನಿಲುವಂಗಿ ಭತ್ಯೆಗಳಿಗಾಗಿ ನ್ಯಾಯಾಧೀಶರುಗಳು ಸಲ್ಲಿಸಿದ ಕ್ಲೇಮ್ ಗಳಿಗೆ ಉಪ ಖಜಾನಾಧಿಕಾರಿ ಅವರು ಎತ್ತಿದ ಆಕ್ಷೇಪಣೆಗಳಿಂದ ಅಸಮಾಧಾನಗೊಂಡ ಕೆಲವು ನ್ಯಾಯಾಂಗ ಅಧಿಕಾರಿಗಳ ನಿರ್ದೇಶನದ ಮೇರೆಗೆ ದಾಖಲಾಗಿರುವ "ಸುಳ್ಳು ಪ್ರಕರಣ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಭಾರತೀಯ ನ್ಯಾಯ ಸಂಹಿತ (ಬಿಎನ್ಎಸ್) ಸೆಕ್ಷನ್ 296 ಬಿ (ಅಶ್ಲೀಲ ಪದಗಳನ್ನು ಉಚ್ಚರಿಸುವುದು), 329 (3) (ಕ್ರಿಮಿನಲ್ ಅತಿಕ್ರಮಣ), ಮತ್ತು 126 (2) (ತಪ್ಪು ನಿರ್ಬಂಧ) ಅಡಿಯಲ್ಲಿ ನೀಲಗಿರಿ ಜಿಲ್ಲೆಯ ಊಟಿ ಟೌನ್ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಉಪಖಜಾನಾಧಿಕಾರಿ ಪಿ. ಸರವಣನ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ನ್ಯಾಯಮೂರ್ತಿ ಪಿ. ವೇಲ್ಮುರುಗನ್ ರದ್ದುಗೊಳಿಸಿದರು.
ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರ ಕಚೇರಿ ಸಹಾಯಕರು ನೀಡಿದ ದೂರಿನ ಆಧಾರದ ಮೇಲೆ, ನೀಲಗಿರಿ ಕಲೆಕ್ಟರೇಟ್ ಒಳಗೆ ಇರುವ ನ್ಯಾಯಾಲಯದ ಕಟ್ಟಡದ ಬಳಿ ಅಧಿಕಾರಿಯ ಕಾರನ್ನು ನಿಲ್ಲಿಸಲು ಆಕ್ಷೇಪಣೆ ಬಂದಾಗ ಉಪ ಖಜಾನೆ ಅಧಿಕಾರಿ ತನ್ನೊಂದಿಗೆ ಜಗಳವಾಡಿದ್ದಾರೆ ಎಂದು ಕಚೇರಿ ಸಹಾಯಕ ಆರೋಪಿಸಿದ್ದರು. ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರು ದೂರನ್ನು ಪೊಲೀಸರಿಗೆ ರವಾನಿಸಿದ್ದರು. ಇದು ಕಾನೂನಿನ ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಕಾರಣವಾಯಿತು ಎಂದು ಅರ್ಜಿದಾರರ ಪರ ವಕೀಲ ಆರ್. ಪ್ರಭಾಕರ್ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಕಾರು ಪಾರ್ಕಿಂಗ್ ವಿಷಯವು ತಮ್ಮ ಕಕ್ಷಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮಾಡಿದ ತಂತ್ರವಾಗಿದೆ. ಅವರು ಫೆಬ್ರವರಿ 2025 ರಲ್ಲಿ ಜಿಲ್ಲೆಯ ಕೆಲವು ನ್ಯಾಯಾಂಗ ಅಧಿಕಾರಿಗಳು ಕ್ಲೇಮ್ ಮಾಡಿದ ಹಲವಾರು ಭತ್ಯೆಗಳ ವಿರುದ್ಧ ಆಕ್ಷೇಪಣೆಗಳನ್ನು ಎತ್ತಿದ್ದರು. ಆದಾಗ್ಯೂ, ಮಾರ್ಚ್ 3, 2025 ರಂದು ಉಪ ಖಜಾನಾಧಿಕಾರಿ ರಜೆಯಲ್ಲಿದ್ದಾಗ ನ್ಯಾಯಾಂಗ ಅಧಿಕಾರಿಗಳು ಆ ಕ್ಲೇಮುಗಳನ್ನು ಪಡೆದುಕೊಂಡಿದ್ದರು.
ಕರ್ತವ್ಯಕ್ಕೆ ಮರಳಿದ ನಂತರ ಉಪಖಜಾನಾಧಿಕಾರಿ ಮಾರ್ಚ್ 10, 2025 ರಂದು ಹೈಕೋರ್ಟ್‌ಗೆ ದೂರು ಕಳುಹಿಸಿದರು. ನಕಲಿ ಇಂಧನ ಬಿಲ್‌ಗಳನ್ನು ಸಲ್ಲಿಸುವ ಮೂಲಕ ಅಥವಾ ಮಕ್ಕಳ ಶಿಕ್ಷಣ ಭತ್ಯೆಯನ್ನು ಪಡೆಯಲು ಎಲ್ಲಾ ಸಂಬಂಧಿತ ಶೈಕ್ಷಣಿಕ ವರ್ಷಗಳಿಗೆ ವಿಶ್ವಾಸಾರ್ಹ ಪ್ರಮಾಣಪತ್ರಗಳನ್ನು ಒದಗಿಸದೆ, ಸಾರಿಗೆ ಭತ್ಯೆಯನ್ನು ಪಡೆಯಲು ಚಾಲಕನನ್ನು ನೇಮಿಸಿಕೊಂಡಿದ್ದಕ್ಕೆ ಪುರಾವೆಗಳ ಕೊರತೆ, ಮೂಲದಲ್ಲಿ ತೆರಿಗೆ ಕಡಿತಗೊಳಿಸದಿರುವುದು ಇತ್ಯಾದಿಗಳನ್ನು ದೂರಿನಲ್ಲಿ ತಿಳಿಸಿದ್ದರು.
ಈ ದೂರಿನ ಮೇರೆಗೆ ಹೈಕೋರ್ಟ್‌ನ ರಿಜಿಸ್ಟ್ರಾರ್ (ವಿಜಿಲೆನ್ಸ್) ಅವರಿಂದ ವಿಚಾರಣೆ ನಡೆಯಿತು. ದೂರಿನಲ್ಲಿ ಉಲ್ಲೇಖಿಸಲಾದ ನ್ಯಾಯಾಂಗ ಅಧಿಕಾರಿಗಳಲ್ಲಿ ಒಬ್ಬರು ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶರ ಪತ್ನಿಯಾಗಿರುವುದರಿಂದ, ಉಪ-ಖಜಾನೆ ಕಚೇರಿಯು ಕಾರ್ಯನಿರ್ವಹಿಸುವ ಕಲೆಕ್ಟರೇಟ್ ಆವರಣದಲ್ಲಿ ಕಾರು ಪಾರ್ಕಿಂಗ್‌ಗೆ ಸಂಬಂಧಿಸಿದ ಕ್ಷುಲ್ಲಕ ದೂರಿನ ಆಧಾರದ ಮೇಲೆ ಅರ್ಜಿದಾರರ ವಿರುದ್ಧ ಏಪ್ರಿಲ್ 2025 ರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ವಕೀಲರು ಹೇಳಿದರು.
ರಿಟ್ ಅರ್ಜಿದಾರರ ವಾದದಲ್ಲಿ ಸತ್ಯಾಂಶವನ್ನು ಕಂಡುಕೊಂಡ ನ್ಯಾಯಮೂರ್ತಿ ವೇಲ್ಮುರುಗನ್ ಹೀಗೆ ಬರೆದಿದ್ದಾರೆ:
"ಅರ್ಜಿದಾರರು ಮತ್ತು ಉದಕಮಂಡಲಂನ ಕಾರ್ಮಿಕ ನ್ಯಾಯಾಲಯದ ಪೀಠಾಸೀನಾಧಿಕಾರಿ ಮತ್ತು ಊಟಿಯ ಅಧೀನ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಅವರ ಸಂಗಾತಿಯ ನಡುವಿನ ಹಿಂದಿನ ದ್ವೇಷದ ಕಾರಣದಿಂದಾಗಿ, ಅವರ ಪ್ರಭಾವದಿಂದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ. ಆದ್ದರಿಂದ ಇದು ಎಫ್‌ಐಆರ್ ಅನ್ನು ರದ್ದುಗೊಳಿಸಲು ಸೂಕ್ತವಾದ ಪ್ರಕರಣ ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ"
ಪ್ರಕರಣ: ಪಿ ಸರವಣನ್ ವಿರುದ್ಧ ರಾಜ್ಯ ಮತ್ತೊಬ್ಬರು
ಮದ್ರಾಸ್ ಹೈಕೋರ್ಟ್, ಕ್ರಿಮಿನಲ್ ಒ.ಪಿ. 21695/2025, Dated 04-08-2025