.jpg)
ಹೈಕೋರ್ಟ್ ಜಡ್ಜ್‌ಗಳ ಕಾರ್ಯಕ್ಷಮತೆಯ ಮೌಲ್ಯಮಾಪನ: ವಿಶಾಲ ಮಾರ್ಗಸೂಚಿಗೆ ಮುಂದಾದ ಸುಪ್ರೀಂ ಕೋರ್ಟ್
ಹೈಕೋರ್ಟ್ ಜಡ್ಜ್‌ಗಳ ಕಾರ್ಯಕ್ಷಮತೆಯ ಮೌಲ್ಯಮಾಪನ: ವಿಶಾಲ ಮಾರ್ಗಸೂಚಿಗೆ ಮುಂದಾದ ಸುಪ್ರೀಂ ಕೋರ್ಟ್
ದೇಶದ ಹೈಕೋರ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಸೂರ್ಯಕಾಂತ್ ಮತ್ತು ಶ್ರೀ ಎನ್. ಕೋಟೀಶ್ವರ ಸಿಂಗ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ವಿಶಾಲವಾದ ಮಾರ್ಗಸೂಚಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.
ತಮ್ಮ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿರುವ
ಕೆಲವು ಹೈಕೋರ್ಟ್ ನ್ಯಾಯಾಧೀಶರುಗಳನ್ನು ಟೀಕಿಸಿದ ನ್ಯಾಯಪೀಠ ಹೈಕೋರ್ಟ್ ನ್ಯಾಯಾಧೀಶರ ಕಾರ್ಯಕ್ಷಮತೆಯ
ಮೌಲ್ಯಮಾಪನಕ್ಕೆ ಕರೆ ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಜಾರ್ಖಂಡ್ ಹೈಕೋರ್ಟ್ ಕೆಲವು ಕ್ರಿಮಿನಲ್
ಮೇಲ್ಮನವಿಗಳಲ್ಲಿ ವರ್ಷಗಳ ಕಾಲ ತನ್ನ ತೀರ್ಪುಗಳನ್ನು ಕಾಯ್ದಿರಿಸಿದ್ದರೂ ಅವುಗಳನ್ನು ಪ್ರಕಟಿಸಿಲ್ಲ.
ನಂತರ ಹೈಕೋರ್ಟ್ ತನ್ನ ತೀರ್ಪುಗಳನ್ನು ಪ್ರಕಟಿಸಿದ್ದು, ಅನೇಕ ಅಪರಾಧಿಗಳು ಖುಲಾಸೆಗೊಂಡಿದ್ದಾರೆ ಎಂದು ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆಗೆ
ಗುರಿಯಾಗಿರುವ ಕೆಲವು ಅಪರಾದಿಗಳು ಈ ಅರ್ಜಿಗಳಲ್ಲಿ ಹೇಳಿಕೊಂಡಿದ್ದಾರೆ.
ತಾನು ಹೆಡ್ ಮಾಸ್ಟರ್ ನಂತೆ ದೇಶದ ಎಲ್ಲ ಹೈಕೋರ್ಟ್
ಗಳ ನ್ಯಾಯಾಧೀಶರುಗಳನ್ನು ನಿಯಂತ್ರಿಸಲು ಬಯಸುವುದಿಲ್ಲ. ಆದರೆ, ಅವರ ಮೇಜುಗಳ ಮೇಲೆ ಕಡತಗಳು ರಾಶಿಯಾಗದಂತೆ
ನೋಡಿಕೊಳ್ಳಲು ಸ್ವಯಂ ನಿರ್ವಹಣಾ ವ್ಯವಸ್ಥೆಯೊಂದು ಇರಬೇಕು. ನ್ಯಾಯಾಧೀಶರು ತಮ್ಮ ಮುಂದಿರುವ ಕೆಲಸಗಳೇನು
ಮತ್ತು ತಾವು ಎಷ್ಟು ಕೆಲಸವನ್ನು ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ವಿಶಾಲವಾದ ಮಾರ್ಗಸೂಚಿಗಳು
ಇರಬೇಕು ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಜನರು ನ್ಯಾಯಾಂಗದ ಮೇಲೆ ಅಪಾರ ವಿಶ್ವಾಸ ಮತ್ತು ಗೌರವವನ್ನು ಇಟ್ಟುಕೊಂಡಿದ್ದಾರೆ. ನ್ಯಾಯದಾನದ ಮೇಲೆ ವಿಶ್ವಾಸವನ್ನು ನಾವು ಪ್ರತಿಬಿಂಬಿಸಬೇಕಾಗಿದೆ ಹಾಗೆಯೇ, ಜನತೆ ನ್ಯಾಯಾಂಗದ ಮೇಲಿಟ್ಟಿರುವ ಗೌರವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪೀಠ ಹಿತವಚನ ನುಡಿಯಿತು.
ಯಾವುದೇ ನ್ಯಾಯಾಧೀಶರು ದಿನವೊಂದಕ್ಕೆ 50
ಕ್ರಿಮಿನಲ್ ಮೇಲ್ಮನವಿಗಳನ್ನು ಇತ್ಯರ್ಥಪಡಿಸಬೇಕು ಎಂದು ನಾವು ನಿರೀಕ್ಷಿಸುವುದಿಲ್ಲ. ದಿನಕ್ಕೆ ಒಂದು
ಮೇಲ್ಮನವಿಯನ್ನು ಇತ್ಯರ್ಥಪಡಿಸಿದರೂ ಸಾಕು. ಆದರೆ, ಜಾಮೀನು ವಿಷಯದಲ್ಲಿ ತಾನು ದಿನಕ್ಕೆ ಒಂದೇ ಅರ್ಜಿಯನ್ನು
ನಿರ್ಧರಿಸುತ್ತೇನೆ ಎಂದು ಹೇಳಿದರೆ, ಅದು ಆತ್ಮಾವಲೋಕನ ಅಗತ್ಯವಿರುವ ವಿಷಯವಾಗಿದೆ ಎಂದು ಮಾರ್ಮಿಕವಾಗಿ
ಹೇಳಿತು.
ಕೆಲವು ನ್ಯಾಯಾಧೀಶರು ಪ್ರಕರಣಗಳನ್ನು ಅನಗತ್ಯವಾಗಿ
ಮುಂದೂಡುವ ಚಾಳಿಯನ್ನು ಹೊಂದಿದ್ದಾರೆ. ಇದು ಅಪೇಕ್ಷಣೀಯವಲ್ಲ. ಅದು ನ್ಯಾಯಾಧೀಶರ ವರ್ಚಸ್ಸಿಗೆ ಹಾನಿ
ಉಂಟುಮಾಡಬಹುದು ಎಂದು ಪೀಠವು ನ್ಯಾಯಾಧೀಶರುಗಳ ನಡೆಯನ್ನು ಬೆಟ್ಟು ಮಾಡಿತು.
ಪ್ರಕರಣ: ಪಿಲಾ ಪಹಾನ್ ಆಲಿಯಾಸ್ ಪೀಲಾ ಪಹಾನ್ ಮತ್ತಿತರರು ವಿರುದ್ಧ ಜಾರ್ಖಂಡ್ ಸರ್ಕಾರ ಮತ್ತಿತರರು