
ಕರ್ನಾಟಕ ಹೈಕೋರ್ಟ್‌ಗೆ ಮೂವರು ಹೊಸ ನ್ಯಾಯಮೂರ್ತಿಗಳ ನೇಮಕ
ಕರ್ನಾಟಕ ಹೈಕೋರ್ಟ್‌ಗೆ ಮೂವರು ಹೊಸ ನ್ಯಾಯಮೂರ್ತಿಗಳ ನೇಮಕ
ಕರ್ನಾಟಕ ಹೈಕೋರ್ಟ್‌ಗೆ ಮೂವರು ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಹಾಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಗೀತಾ ಕಡಬ ಭರತ್‌ರಾಜ್ ಶೆಟ್ಟಿ, ಬೊರಕಟ್ಟೆ ಮುರಳೀಧರ ಪೈ ಮತ್ತು ತ್ಯಾಗರಾಜ ನಾರಾಯಣ ಇನವಳ್ಳಿ ಅವರಿಗೆ ಪದೋನ್ನತಿ ನೀಡಲಾಗಿದೆ. ಈ ಮೂವರನ್ನು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್. ಗವಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ಮೂವರು ಹಿರಿಯ ನ್ಯಾಯಾಧೀಶರಿಗೆ ತಮ್ಮ ಸೇವಾ ಹಿರಿತನದ ಆಧಾರದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿತ್ತು.
ಈ ಶಿಫಾರಸ್ಸಿನ ಪ್ರಕಾರ ಈ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಮಧ್ಯೆ, ಈವರೆಗೆ ಹೆಚ್ಚುವರಿ ನ್ಯಾಯಮೂರ್ತಿ ಯಾಗಿ ಸೇವೆ ಸಲ್ಲಿಸುತ್ತಿದ್ದ ಕೆ. ವಿ. ಅರವಿಂದ್ ಅವರ ಸೇವೆಯನ್ನು ಖಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ.
ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಆ ಪೈಕಿ ಸದ್ಯ 46 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರವಷ್ಟೇ ನ್ಯಾಯಮೂರ್ತಿ ಜೆ. ಎಂ. ಖಾಜಿ ನಿವೃತ್ತಿ ಹೊಂದಿದರು. ಹಾಗಾಗಿ, ನ್ಯಾಯಮೂರ್ತಿಗಳ ಸಂಖ್ಯೆ 45ಕ್ಕೆ ಇಳಿದಿತ್ತು. ಇದೀಗ ಮೂವರು ಹೊಸ ನ್ಯಾಯಮೂರ್ತಿಗಳ ನೇಮಕದಿಂದ ಸಂಖ್ಯೆ 48ಕ್ಕೆ ಏರಿಕೆಯಾಗಲಿದೆ.