-->
ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಗೆ ಪೊಲೀಸರದ್ದೇ ಸಾಥ್: ಒಂದೇ ದಿನ 11 ಪೊಲೀಸರ ಅಮಾನತು

ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಗೆ ಪೊಲೀಸರದ್ದೇ ಸಾಥ್: ಒಂದೇ ದಿನ 11 ಪೊಲೀಸರ ಅಮಾನತು

ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಗೆ ಪೊಲೀಸರದ್ದೇ ಸಾಥ್: ಒಂದೇ ದಿನ 11 ಪೊಲೀಸರ ಅಮಾನತು





ರಾಜ್ಯವನ್ನೇ ಬೆಚ್ಚಿ ಬೀಳಿಸುವ ಪ್ರಕರಣವೊಂದರಲ್ಲಿ ಪೊಲೀಸರೇ ಡ್ರಗ್ಸ್‌ ದಂಧೆಗೆ ಬೆಂಬಲವಾಗಿ ನಿಂತು ದಂಧೆಯ ಜೊತೆಗೆ ಶಾಮೀಲಾಗಿರುವುದು ಬಯಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆರೋಪ ಹೊತ್ತ 11 ಪೊಲೀಸರನ್ನು ಅಮಾನತು ಮಾಡಿದೆ.


ಈ ಅಮಾನತು ಶಿಕ್ಷೆಗೊಳಗಾದ ಪೊಲೀಸರಲ್ಲಿ ಚಾಮರಾಜಪೇಟೆ ಮತ್ತು ಜೆ.ಜೆ. ನಗರ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳೂ ಸೇರಿದ್ದಾರೆ. ಅಮಾನತು ಆದ ಆರೋಪಿಗಳು ಪೊಲೀಸ್ ಸಿಬ್ಬಂದಿಯಾಗಿದ್ದುಕೊಂಡು ಡ್ರಗ್ಸ್‌ ಪೆಡ್ಲರ್‌ಗಳಿಂದ ಲಂಚ ಪಡೆದು ಅಕ್ರಮ ದಂಧೆಗೆ ಸಹಕರಿಸುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಡ್ರಗ್ಸ್ ಮಾರಾಟ ದಂಧೆಗೆ ಕೈ ಜೋಡಿಸಿದ್ದ ಜಗಜೀವನ್‌ರಾಂ ನಗರ ಹಾಗೂ ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟ‌ರ್ ಸೇರಿ 11 ಮಂದಿ ಪೊಲೀಸರನ್ನು ನಗರ ಪೊಲೀಸ್ ಆಯುಕ್ತರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.


ಪೊಲೀಸ್ ಇಲಾಖೆಯೇ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕವಾಗಿ ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿರುವುದು ಇದೇ ಮೊದಲ ಸಲವಾಗಿದೆ.


ಬೆಂಗಳೂರು ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ಮಂಜಣ್ಣ, ಮುಖ್ಯ ಪೇದೆ ರಮೇಶ್, ಶಿವರಾಜ್, ಕಾನ್ಸ್ ಟೆಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕ‌ರ್ ಬೆಳಗಲಿ, ಆನಂದ್‌, ಜೆ.ಜೆ. ನಗರ ಠಾಣೆಯ ಎಎಸ್‌ಐ ಕುಮಾರ್, ಹೆಡ್ ಕಾನ್ಸ್‌ಟೆಬಲ್‌ಗಳಾದ ಆನಂದ್‌, ಬಸವನಗೌಡ, ಮಹೇಶ್ ಅಮಾನತುಗೊಂಡವರು.


ಇನ್ಸ್‌ಪೆಕ್ಟರ್ ಮಂಜಣ್ಣ ಸೇರಿದಂತೆ ಅಮಾನತುಗೊಂಡ 11 ಮಂದಿ ಪೊಲೀಸರು ಕುಖ್ಯಾತ ಡ್ರಗ್‌ ಪೆಡ್ಲ‌ರ್ ಸಲ್ಮಾನ್‌ನ ಸಿಂಡಿಕೇಟ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಪೆಡ್ಲರ್‌ಗಳಿಂದ ಪ್ರತಿ ತಿಂಗಳು ಎಂಜಲು ಹಣವಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದರು.


ಜತೆಗೆ, ಪೆಡ್ಡರ್‌ಗಳು ನಡೆಸುವ ಮಾದಕ ಅಂಶವಿರುವ ಡ್ರಗ್ಸ್ ಮಾತ್ರೆಗಳ ಮಾರಾಟಕ್ಕೆ ರಕ್ಷಕರಾಗಿದ್ದರು. ಈ ಮೂಲಕ ಪಶ್ಚಿಮ ವಿಭಾಗದಲ್ಲಿ ಡ್ರಗ್ಸ್ ದಂಧೆ ನಿರಾತಂಕವಾಗಿ ನಡೆಯಲು ಬೆಂಗಾವಲಾಗಿ ನಿಂತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಲಕ್ಷಾಂತರ ರೂ. ಎಂಜಲು ಹಣ ಪಡೆದಿರುವ ಇನ್ಸ್‌ಪೆಕ್ಟರ್


ಮಾದಕ ದ್ರವ್ಯದ ಈ ಕರಾಳ ಲೋಕದ ದಂಧೆಕೋರ ಸಲ್ಮಾನ್‌ ಎಂಬಾತ ಸಿಂಡಿಕೇಟ್ ನಡೆಸುವ ಡ್ರಗ್ಸ್ ಮಾತ್ರೆ ಹಾಗೂ ಇತರೆ ಮಾದಕ ವಸ್ತುಗಳ ಮಾರಾಟ ದಂದೆಗೆ ಇದೇ ಆರೋಪಿ ಇನ್ಸ್ ಪೆಕ್ಟರ್ ಮಂಜಣ್ಣ ವೈಯಕ್ತಿಕವಾಗಿ ಸಹಕಾರ ನೀಡುತ್ತಿದ್ದ. ಈ ಸಹಕಾರಕ್ಕಾಗಿ ದಂಧೆಕೋರರಿಂದ ಲಕ್ಷಗಟ್ಟಲೆ ಹಣವನ್ನು ಪಡೆದಿದ್ದು, ಸಂಬಂಧಿಸಿದ ಡಿಜಿಟಲ್ ಪಾವತಿಯ ಬಲವಾದ ಸಾಕ್ಷ್ಯಾಧಾರಗಳು ದೊರೆತಿವೆ. ಅಲ್ಲದೇ ಮಂಜಣ್ಣ ಅವರಿಗೆ ಹಣ ನೀಡುತ್ತಿದ್ದ ವಿಷಯವನ್ನು ಆರೋಪಿಗಳು ಬಾಯ್ದಿಟ್ಟಿದ್ದಾರೆ.


ಮತ್ತೊಂದೆಡೆ ಚಾಮರಾಜಪೇಟೆ ಹಾಗೂ ಜೆ.ಜೆ.ನಗರ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧ ವಿಭಾಗದ ಕಾನ್ಸ್‌ಟೆಬಲ್‌ಗಳು ಕೂಡ ಸಲ್ಮಾನ್ ತಂಡಕ್ಕೆ ಆತ್ಮೀಯರಾಗಿದ್ದರು. ಪೆಡ್ಲರ್‌ಗಳಿಂದ ಪ್ರತಿ ತಿಂಗಳು 20 ರಿಂದ 50 ಸಾವಿರ ಹಾಗೂ ಒಂದು ಲಕ್ಷ ರೂ.ಗಳವರೆಗೆ ವಸೂಲಿ ಮಾಡುತ್ತಿದ್ದರು ಎಂಬ ವಿಚಾರ ಇಲಾಖೆಯ ಆಂತರಿಕ ತನಿಖೆಯಲ್ಲಿ ಗೊತ್ತಾಗಿದೆ.


ಖಾಕಿ ಕಳ್ಳಾಟ ಬಯಲಾದದ್ದು ಹೀಗೆ...


ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಎರಡು ಖಾಸಗಿ ಕಾಲೇಜುಗಳ ಬಳಿ ವಿದ್ಯಾರ್ಥಿಗಳು ನಶೆಯಲ್ಲಿರುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಕುರಿತಂತೆ ಪೊಲೀಸರಿಗೆ ದೂರು ಬಂದಿತ್ತು. ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕಿದ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ನೇತೃತ್ವದ ತಂಡವು ತನಿಖೆ ಚುರುಕುಗೊಳಿಸಿದಾಗ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾತ್ರೆಗಳನ್ನು ಸಲ್ಮಾನ್ ಹಾಗೂ ಸಹಚರರು ಮಾರಾಟ ಮಾಡುತ್ತಿದ್ದ ವಿಚಾರ ಗೊತ್ತಾಗಿತ್ತು.


ಈ ಸಂಬಂಧ ಆ‌ರ್.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಲ್ಮಾನ್ ಅಲಿಯಾಸ್ ಪಾಪ, ಈತನ ಪತ್ನಿ ರೇಷ್ಮಾ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ನಗದು ಹಾಗೂ 4 ಲಕ್ಷ ರೂ. ಮೌಲ್ಯದ ಒಂದು ಸಾವಿರ ಡ್ರಗ್ಸ್ ಮಾತ್ರೆಗಳನ್ನು ಜಪ್ತಿ ಮಾಡಿತ್ತು.


ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಚಾಮರಾಜಪೇಟೆ ಇನ್ಸ್‌ಪೆಕ್ಟ‌ರ್ ಮಂಜಣ್ಣ ಹಾಗೂ ಇತರ ಸಿಬ್ಬಂದಿ, ಜೆ.ಜೆ. ನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯ ನೆರವಿನಿಂದ ದಂಧೆ ನಡೆಸುತ್ತಿರುವ ಬಗ್ಗೆ ಬಾಯಿಟ್ಟಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸಿಪಿ, ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರಿಗೆ ವರದಿ ನೀಡಿದ್ದರು.


ಡ್ರಗ್ಸ್ ಮಾರಾಟದಲ್ಲಿ ಪೊಲೀಸರ ಸಹಕಾರ ಹಾಗೂ ಶಾಮೀಲಿನ ಬಗ್ಗೆ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರಿಗೆ * ಡಿಸಿಪಿ ಆದೇಶಿಸಿದ್ದರು.


ಎಸಿಪಿ ಚಂದನ್ ನಡೆಸಿದ ಆಂತರಿಕ ತನಿಖೆಯಲ್ಲಿ ಇನ್ಸ್‌ಪೆಕ್ಟರ್ ಮಂಜಣ್ಣ ಸೇರಿ 11 ಮಂದಿ ಪೊಲೀಸರು ಡ್ರಗ್ಸ್ ದಂಧೆಗೆ ಸಹಕಾರ ನೀಡಿ ಹಣ ಪಡೆಯುತ್ತಿದ್ದುದು ಸೇರಿದಂತೆ ಗಂಭೀರ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಡಿಸಿಪಿಗೆ ವರದಿ ನೀಡಿದ್ದರು. ಆ ವರದಿ ಅನ್ವಯ 10 ಮಂದಿ ಕಾನ್ಸ್‌ಟೆಬಲ್‌ಗಳನ್ನು ಅಮಾನತುಗೊಳಿಸಿ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದರು. ಇನ್ಸ್‌ಪೆಕ್ಟ‌ರ್ ಮಂಜಣ್ಣರನ್ನು ಸೇವೆಯಿಂದ ಅಮಾನತುಗೊಳಿಸಿ ಸೆ. 12ರಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.


ಇನ್ನೊಬ್ಬ ಇನ್ಸ್‌ಪೆಕ್ಟರ್ ವಿರುದ್ಧವೂ ಆರೋಪ


ಅಮೃತಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಂಬರೀಶ್ ವಿರುದ್ಧವೂ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ದಂಧೆಗೆ ಸಹಕಾರ ನೀಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಲಾಗಿದೆ. ಈ ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.


'ಇನ್ಸ್‌ಪೆಕ್ಟರ್ ಅಂಬರೀಶ್‌ ಎಂಬಾತ ತಾನು ಸಚಿವರಾದ ಭೈರತಿ ಸುರೇಶ್ ಮತ್ತು ಕೃಷ್ಣ ಭೈರೇಗೌಡ ಅವರ ಪರಮಾಪ್ತ ಎಂದು ಹೇಳಿಕೊಂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಅಕ್ರಮ ಚಟುವಟಿಕೆಗಳಿಗೆ ಸಹಕಾರ, ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿದ್ದಾನೆ ಎನ್ನಲಾಗಿದೆ. ಅಲ್ಲದೆ, ಡ್ರಗ್ಸ್ ಪೆಡ್ಡರ್‌ಗಳಿಂದ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ಮಾರಾಟ ಮಾಡಿಸುತ್ತಾರೆ. ಇತ್ತೀಚೆಗೆ ಗಾಂಜಾ ಮಾರಾಟಗಾರರನ್ನು ಬೆದರಿಸಿ 25 ಲಕ್ಷ ರೂ. ವಸೂಲು ಮಾಡಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಲಾಗಿದೆ.



ಸಿವಿಲ್ ಕೇಸ್‌ನಲ್ಲಿ ಮೂಗುತೂರಿಸಿದ ಖಾಕಿ!

ಇನ್ನೊಂದು ಪ್ರಕರಣದಲ್ಲಿ, ಕೊಡಿಗೇಹಳ್ಳಿ ಪೊಲೀಸ್ ಠಾಣೆ ಅಧಿಕಾರಿ ಮುತ್ತುರಾಜ್ ಎಂಬಾತನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈತ ಸಿವಿಲ್ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತ ಸಂಜಯ್ ಎಂಬವರು ಈಶಾನ್ಯ ವಿಭಾಗದ ಡಿಸಿಪಿ ಹಾಗೂ ಲೋಕಾಯುಕ್ತಕ್ಕೆ ಪ್ರತ್ಯೇಕ ದೂರು ನೀಡಿದ್ದಾರೆ.


''ನಿವೇಶನವೊಂದರ ವಿಚಾರಕ್ಕೆ ಚೇತನ್ ಎಂಬುವವರ ಜತೆ ಶಾಮೀಲಾಗಿರುವ ಇನ್ಸ್‌ಪೆಕ್ಟ‌ರ್ ಮುತ್ತುರಾಜು, ಸುಳ್ಳು ದಾಖಲೆಗಳ ಅನ್ವಯ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಕೇಸ್‌ನ ಪ್ರತಿ ವಿಚಾರವನ್ನು ನನ್ನ ಎದುರಾಳಿ ಚೇತನ್ ಎಂಬುವವರಿಗೆ ಅಪ್‌ಡೇಟ್ ಮಾಡುತ್ತಿದ್ದರು. ನನ್ನ ಹಾಗೂ ಪತ್ನಿಯ ದೂರವಾಣಿ ಕರೆಗಳ ವಿವರಗಳನ್ನು ಚೇತನ್‌ಗೆ ನೀಡಿದ್ದರು" ಎಂದು ಆರೋಪಿಸಿದ್ದಾರೆ.


ಅಷ್ಟೇ ಅಲ್ಲದೆ, ಪ್ರಕರಣದಲ್ಲಿ ನೆರವಾಗುವುದಾಗಿ ಠಾಣಾ ಬರಹಗಾರ ನರಸಿಂಹಮೂರ್ತಿ ಅವರು ಇನ್ಸ್‌ಪೆಕ್ಟ‌ರ್ ಮುತ್ತುರಾಜ್ ಹೆಸರಿನಲ್ಲಿ ನನ್ನ ಸಹೋದರನಿಂದ ಎರಡು ಲಕ್ಷ ರೂ. ಹಣ ಪಡೆದಿದ್ದಾರೆ. ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ನನ್ನ ವಿರುದ್ಧ ಪೊಲೀಸರು ಹಗೆ ಸಾಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu