ಜಾಮೀನು ಅರ್ಜಿ ಇತ್ಯರ್ಥ ವಿಳಂಬ ನ್ಯಾಯ ನಿರಾಕರಣೆಗೆ ಸಮ: ಜಾಮೀನು ಅರ್ಜಿಗಳ ತ್ವರಿತ ಇತ್ಯರ್ಥಕ್ಕೆ ಸುಪ್ರೀಂ ನಿರ್ದೇಶನ
ಜಾಮೀನು ಅರ್ಜಿ ಇತ್ಯರ್ಥ ವಿಳಂಬ ನ್ಯಾಯ ನಿರಾಕರಣೆಗೆ ಸಮ: ಜಾಮೀನು ಅರ್ಜಿಗಳ ತ್ವರಿತ ಇತ್ಯರ್ಥಕ್ಕೆ ಸುಪ್ರೀಂ ನಿರ್ದೇಶನ
ನಿರೀಕ್ಷಣಾ ಜಾಮೀನು ಹಾಗೂ ಆರೋಪಿಯ ಬಿಡುಗಡೆ ಕೋರಿ ಜಾಮೀನು ಅರ್ಜಿ ಸಲ್ಲಿಸಿದ ಎರಡು ತಿಂಗಳೊಳಗೆ ಆ ಅರ್ಜಿಯನ್ನು ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ದೇಶದ ಎಲ್ಲ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಜೆ.ಬಿ. ಪರ್ದೀವಾಲಾ ಮತ್ತು ಶ್ರೀ ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠ, "ಅಣ್ಣಾ ವಾಮನ್ ಭಲೇರಾವ್ ವಿರುದ್ಧ ಮಹಾರಾಷ್ಟ್ರ ಸರ್ಕಾರ" ಪ್ರಕರಣದಲ್ಲಿ ಈ ತೀರ್ಪು ನೀಡಿದೆ.
ಆರೋಪಿ ಅನಿಶ್ಚಿತತೆಯಲ್ಲಿ ಸಿಲುಕಿರುವಾಗ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವರ್ಷಾನುಗಟ್ಟಲೆ ಬಾಕಿ ಇಡಲಾಗದು ಎಂದು ನ್ಯಾಯಪೀಠ ಹೇಳಿದೆ.
ಎಲ್ಲ ರೀತಿ ಜಾಮೀನು ಅರ್ಜಿಗಳನ್ನು ಅರ್ಹತೆಯ ಆಧಾರದ ಮೇಲೆ ತ್ವರಿತವಾಗಿ ನಿರ್ಧರಿಸಬೇಕು. ಕಕ್ಷಿದಾರರು ಸಲ್ಲಿಸಿದ ಅರ್ಜಿ ಅನಿರ್ದಿಷ್ಟಾವಧಿ ವರೆಗೆ ಬಾಕಿ ಉಳಿಯುವಂತೆ ಮಾಡಬಾರದು ಎಂಬುದು ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ತ್ವರಿತವಾಗಿ ಅರ್ಜಿಗಳನ್ನು ವಿಲೇ ಮಾಡದಿದ್ದರೆ ನ್ಯಾಯ ನಿರಾಕರಣೆಗೆ ಸಮನಾಗಿದೆ. ಇದು ಸಂವಿಧಾನದ 14 ಮತ್ತು 21ನೇ ವಿಧಿಯಲ್ಲಿ ಹೇಳಲಾದ ನೀತಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ಹೊರಡಿಸಿದ ಮಾರ್ಗಸೂಚಿ ಹೀಗಿದೆ;
ಅ) ಕಕ್ಷಿದಾರರೇ ವಿಳಂಬ ಮಾಡದೆ ಇದ್ದಾಗ, ಹೈಕೋರ್ಟ್ ಗಳು ಜಾಮೀನು ಮತ್ತು ಜಾಮೀನು ಅರ್ಜಿಗಳನ್ನು ಆದಷ್ಟೂ ಬೇಗನೆ, ಎರಡು ತಿಂಗಳೊಳಗೆ ನಿರ್ಧರಿಸಬೇಕು.
ಬಿ) ಅನಿರ್ದಿಷ್ಟ ಮುಂದೂಡಿಕೆಗಳನ್ನು ತಪ್ಪಿಸುವುದಕ್ಕಾಗಿ ಅವು ಅಧೀನ ನ್ಯಾಯಾಲಯಗಳಿಗೆ ವೈಯಕ್ತಿಕ ಸ್ಥಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮೊದಲ ಆದ್ಯತೆಯ ಪ್ರಕರಣಗಳಾಗಿ ಇತ್ಯರ್ಥಗೊಳಿಸುವಂತೆ ಆಡಳಿತಾತ್ಮಕ ನಿರ್ದೇಶನ ನೀಡಬೇಕು.
ಸಿ) ಅನಗತ್ಯ ವಿಳಂಬವಾಗುತ್ತಿದೆ ಎಂಬ ಭಾವನೆ ದೂರುದಾರರು ಅಥವಾ ಆರೋಪಿಗಳಲ್ಲಿ ಮೂಡದಂತೆ ತನಿಖಾ ಸಂಸ್ಥೆಗಳು ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ತನಿಖೆ ಮುಕ್ತಾಯಗೊಳಿಸಬೇಕು
ಡಿ ರಾಜ್ಯಗಳ ಅತ್ಯುನ್ನತ ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಹೈಕೋರ್ಟ್ ಗಳು, ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳು ದೀರ್ಘಕಾಲ ಬಾಕಿ ಉಳಿಯದಂತೆ ಸೂಕ್ತ ವ್ಯವಸ್ಥೆ ಮತ್ತು ಪ್ರಕ್ರಿಯೆ ರೂಪಿಸಬೇಕು. ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಬಹುಕಾಲ ಇರಿಸಿಕೊಳ್ಳದೆ ಕೂಡಲೇ ನಿರ್ಧರಿಸಬೇಕು, ಏಕೆಂದರೆ ಈ ವಿಳಂಬ ನಾಗರಿಕರ ಮೂಲಭೂತ ಹಕ್ಕು - ಸ್ವಾತಂತ್ರ್ಯಕ್ಕೆ ಹಾನಿ ಉಂಟುಮಾಡುತ್ತದೆ.
ತನ್ನ ನಿರ್ದೇಶನಗಳನ್ನು ಕೂಡಲೇ ಪಾಲಿಸಿ ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಕ್ಕಾಗಿ ಎಲ್ಲಾ ಹೈಕೋರ್ಟ್ ಗಳಿಗೆ ತೀರ್ಪಿನ ಪ್ರತಿ ಕಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್ ಅವರಿಗೆ ಪೀಠ ಆದೇಶಿಸಿತು.