
ನ್ಯಾಯಾಂಗದ ವಿರುದ್ಧ ಟೀಕಾತ್ಮಕ ಹೇಳಿಕೆ: ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಹೈಕೋರ್ಟ್
ನ್ಯಾಯಾಂಗದ ವಿರುದ್ಧ ಟೀಕಾತ್ಮಕ ಹೇಳಿಕೆ: ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಹೈಕೋರ್ಟ್
ನ್ಯಾಯಾಂಗ ಭ್ರಷ್ಟವಾಗಿದೆ ಎಂದು ಆರೋಪಿಸಿದ ವಕೀಲರ ವಿರುದ್ಧ ದೆಹಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ವಕೀಲರು ಮಾಡಿದ ಆರೋಪ ಆಜಾಗರೂಕವಾಗಿದೆ. ಈ ಆರೋಪ ನ್ಯಾಯಾಂಗವನ್ನೇ ನಿಂದಿಸುವಂತಿದೆ. ಅಪಮಾನಕಾರಿ ಮತ್ತು ಅಪವಾದಪೂರಿತವಾಗಿದೆ ಎಂದು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಅಮಿತ್ ಶರ್ಮಾ ತಮ್ಮ ಆದೇಶದಲ್ಲಿ ದಾಖಲಿಸಿದ್ದಾರೆ.
ನ್ಯಾಯಾಂಗ ಪ್ರಕ್ರಿಯೆ ಮತ್ತು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಹ ಪ್ರಯತ್ನವನ್ನು ಈ ಆರೋಪ ಮಾಡಿದೆ. ಸದ್ರಿ ಪ್ರಕರಣದ ವಾಸ್ತವಾಂಶ ಮತ್ತು ಪರಿಸ್ಥಿತಿಯನ್ನು ಗಮನಿಸಿದರೆ ವಕೀಲರು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬುದು ಕಂಡುಬರುತ್ತಿದೆ ಎಂದು ನ್ಯಾಯಪೀಠ ಗಮನಿಸಿದೆ.
ವಕೀಲರು ತಮ್ಮ ಆರೋಪದ ಮೂಲಕ ನ್ಯಾಯಾಂಗ ಅಧಿಕಾರಿಗಳನ್ನು ಕೀಳಾಗಿ ಕಾಣುವುದು ಮತ್ತು ನ್ಯಾಯಾಲಯದ ಅಧಿಕಾರಕ್ಕೆ ಅಪಮಾನ ಮಾಡುವಂತಾಗಿದೆ. ನ್ಯಾಯಾಲಯ ನಿಂದನೆ ಕಾಯ್ದೆಯ ಸೆಕ್ಷನ್ 2(ಸಿ)ಯಲ್ಲಿ ವ್ಯಾಖ್ಯಾನಿಸಿದಂತೆ ಆರೋಪ ಹೊರಿಸಲಾಗಿದೆ ಎಂದು ನ್ಯಾಯಪೀಠ ವಿವರಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 19, 2025ರಂದು ನಡೆಸಲಿದೆ.
ಆರೋಪಿ ವಕೀಲರಾದ ವೇದಾಂತ್ ಅವರು 2024ರ ಜನವರಿಯಲ್ಲಿ ಇದೇ ರೀತಿಯ ಆರೋಪ ಮಾಡಿ ಬೇಷರತ್ ಕ್ಷಮೆ ಯಾಚಿಸಿದ್ದರು. ಆದರೆ, ಆ ಬಳಿಕ ತಮ್ಮ ಆರೋಪ ಮತ್ತು ಟೀಕಾತ್ಮಕ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದರು. ನ್ಯಾಯಾಂಗ ಭಯೋತ್ಪಾದನೆ, ನ್ಯಾಯಾಂಗ ತುರ್ತುಪರಿಸ್ಥಿತಿ ಮತ್ತು ನ್ಯಾಯಾಂಗ ಭ್ರಷ್ಟಾಚಾರ ಮತ್ತು ಸಾಮೂಹಿಕ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದರು. ಅಲ್ಲದೆ, ನ್ಯಾಯಾಂಗವು ಆಡುಗಳನ್ನು ಸಿಂಹಗಳಾಗಿ ಮತ್ತು ಸಿಂಹಗಳನ್ನು ಆಡುಗಳಾಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿದ್ದರು.
ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಶರ್ಮಾ, ವಕೀಲ ವೇದಾಂತ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿದರು.
ಪ್ರಕರಣ: ಗುಂಜನ್ ಕುಮಾರ್ ಮತ್ತಿತರರು ವಿರುದ್ಧ ವೇದಾಂತ್
ದೆಹಲಿ ಹೈಕೋರ್ಟ್