ಲಿಖಿತ ಹೇಳಿಕೆ ಸಲ್ಲಿಸದ ಮಾತ್ರಕ್ಕೆ ಪಾಟೀ ಸವಾಲಿನ ಹಕ್ಕು ನಿರಾಕರಿಸಲಾಗದು: ಸುಪ್ರೀಂ ಕೋರ್ಟ್
ಲಿಖಿತ ಹೇಳಿಕೆ ಸಲ್ಲಿಸದ ಮಾತ್ರಕ್ಕೆ ಪಾಟೀ ಸವಾಲಿನ ಹಕ್ಕು ನಿರಾಕರಿಸಲಾಗದು: ಸುಪ್ರೀಂ ಕೋರ್ಟ್
ವ್ಯಾಜ್ಯದಲ್ಲಿ ಎದುರುದಾರರು ಲಿಖಿತ ಹೇಳಿಕೆಯನ್ನು ಸಲ್ಲಿಸಿಲ್ಲ ಎಂದ ಮಾತ್ರಕ್ಕೆ ಅವರಿಗೆ ಪಾಟೀ ಸವಾಲಿನ ಹಕ್ಕನ್ನು ನಿರಾಕರಿಸಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಬಹುತೇಕ ಕರ್ಮರ್ಷಿಯಲ್ ವ್ಯಾಜ್ಯಗಳಲ್ಲಿ ಶಾಸನಬದ್ಧ ಕಾಲಮಿತಿಯೊಳಗೆ ಲಿಖಿತ ಹೇಳಿಕೆ ಸಲ್ಲಿಸದ ಕಾರಣಕ್ಕೆ ಪ್ರತಿವಾದವನ್ನು ಶೂನ್ಯ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಎದುರುದಾರರಿಗೆ ದಾವೆಯ ವಿರುದ್ಧ ಪ್ರತಿವಾದ ಇಲ್ಲ ಎಂದು ಪರಿಗಣಿಸಲಾಗುತ್ತದೆ.
ಪಾಟೀ ಸವಾಲಿನ ಮುಖ್ಯ ಉದ್ದೇಶ ಸತ್ಯವನ್ನು ಹೊರಗೆಡಹುವುದು ಮತ್ತು ಸಾಕ್ಷಿದಾರನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವುದು. ಪ್ರತಿವಾದವನ್ನು ಮಂಡಿಸಿಲ್ಲ ಎಂಬ ಕಾರಣಕ್ಕೆ ಸಾಕ್ಷಿದಾರರನ್ನು ಪಾಟೀ ಸವಾಲಿಗೆ ಒಳಪಡಿಸುವ ಎದುರುದಾರರ ಹಕ್ಕು ಮೊಟಕುಗೊಳ್ಳುವುದಿಲ್ಲ. ಇಂತಹ ಸಂದರ್ಭದಲ್ಲಿ ಪಾಟೀ ಸವಾಲು ಎದುರುದಾರರ ಕೊನೆಯ ಪ್ರತಿರಕ್ಷೆಯ ಹಕ್ಕಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರತಿವಾದವನ್ನು ಒಂದು ಲಕ್ಷ ರೂ. ದಂಡದೊಂದಿಗೆ ಸ್ವೀಕರಿಸಲು ನ್ಯಾಯಪೀಠ ಆದೇಶ ಹೊರಡಿಸಿತು. ಇದರ ಜೊತೆಗೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ (ಕಮರ್ಷಿಯಲ್ ಕೋರ್ಟ್) ನೀಡಿದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗಿರಿಸಿತು.
ಬಾಬಾಸಾಹೆಬ್ ರಾವ್ ಸಾಹೆಬ್ ಕೊಬರ್ನೆ (2022) ಮತ್ತು ಪ್ರಕಾಶ್ ಕಾರ್ಪೊರೇಟ್ಸ್ (2022) ಪ್ರಕರಣಗಳಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ನ್ಯಾಯಪೀಠ ವಾದಪತ್ರವನ್ನು ದಂಡದೊಂದಿಗೆ ಸ್ವೀಕರಿಸಲು ಆದೇಶ ನೀಡಿದೆ. ಹಾಗೆಯೇ, ಸೂಕ್ತ ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಲು ಆದೇಶಿಸಿದೆ.
ಪ್ರಕರಣ: ಅನ್ವಿತ ಆಟೋ ಟೆಕ್ ವರ್ಕ್ಸ್ ವಿರುದ್ಧ ಅರೋಶ್ ಮೋಟರ್ಸ್
ಸುಪ್ರೀಂ ಕೋರ್ಟ್, dated 08-10-2025