-->
ಅಧಿಸೂಚಿತ ಹುದ್ದೆಗಳಿಗಿಂತ ಹೆಚ್ಚುವರಿ ನೇಮಕ- ಡಿ ಗ್ರೂಪ್ ನೌಕರರ ವಜಾ ಆದೇಶ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅಧಿಸೂಚಿತ ಹುದ್ದೆಗಳಿಗಿಂತ ಹೆಚ್ಚುವರಿ ನೇಮಕ- ಡಿ ಗ್ರೂಪ್ ನೌಕರರ ವಜಾ ಆದೇಶ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಅಧಿಸೂಚಿತ ಹುದ್ದೆಗಳಿಗಿಂತ ಹೆಚ್ಚುವರಿ ನೇಮಕ- ಡಿ ಗ್ರೂಪ್ ನೌಕರರ ವಜಾ ಆದೇಶ ರದ್ದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ನೇಮಕಾತಿಗಳನ್ನು ಅಧಿಸೂಚಿತ ಖಾಲಿ ಹುದ್ದೆಗಳಿಗಿಂತ ಹೆಚ್ಚುವರಿಯಾಗಿ ಮಾಡಲಾಗಿದೆ ಎಂಬ ಕಾರಣ ನೀಡಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಿ ವರ್ಗದ (ಕ್ಲಾಸ್ IV) ನೌಕರರನ್ನು ವಜಾಗೊಳಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ


ಸುಪ್ರೀಂ ಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ವಿಭಾಗೀಯ ಪೀಠವು "ಸಂಜಯ್ ಕುಮಾರ್ ಮಿಶ್ರಾ ಮತ್ತಿತರರು ವಿರುದ್ಧ ಜಿಲ್ಲಾ ನ್ಯಾಯಾಧೀಶರು, ಅಂಬೇಡ್ಕರ್ ನಗರ (ಉತ್ತರ ಪ್ರದೇಶ)" ಪ್ರಕರಣದಲ್ಲಿ ದಿನಾಂಕ 17.10.2025ರಂದು ಈ ತೀರ್ಪು ನೀಡಿದೆ.


ಉತ್ತರ ಪ್ರದೇಶ ರಾಜ್ಯದ ಅಂಬೇಡ್ಕರ್ ನಗರ ಜಿಲ್ಲಾ ನ್ಯಾಯಾಂಗದಲ್ಲಿ ಗ್ರೂಪ್ ಡಿ ಹುದ್ದೆಯಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರನ್ನು ಅಧಿಸೂಚಿತ ಹುದ್ದೆಗಳಿಗಿಂತ ಹೆಚ್ಚುವರಿ ಯಾಗಿ ನೇಮಕಾತಿ ಮಾಡಲಾಗಿತ್ತು. ಈ ಕಾರಣ ನೀಡಿ ಜಿಲ್ಲಾ ನ್ಯಾಯಾಧೀಶರು, ಅಂಬೇಡ್ಕರ್ ನಗರ (ಉತ್ತರ ಪ್ರದೇಶ) ಡಿ ಗ್ರೂಪ್ ನೌಕರರನ್ನು ವಜಾಗೊಳಿಸಿ ಆದೇಶವನ್ನು ಹೊರಡಿಸಲಾಗಿತ್ತು. ಈ ಆದೇವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌, ಸೇವೆಯಿಂದ ವಜಾಗೊಂಡ ನಾಲ್ವರು ಗ್ರೂಪ್ ಡಿ (ಕ್ಲಾಸ್ IV) ನೌಕರರ ಉದ್ಯೋಗಗಳನ್ನು ಪುನಃಸ್ಥಾಪಿಸಿದೆ ಮತ್ತು ಕನಿಷ್ಠ ಪಿಂಚಣಿಗೆ ಆದೇಶಿಸಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.

ಉತ್ತರ ಪ್ರದೇಶ ರಾಜ್ಯದ ಅಂಬೇಡ್ಕರ್ ನಗರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 12 ಡಿ ಗ್ರೂಪ್ ನೌಕರರ ಹುದ್ದೆಗಳಿಗೆ ದಿನಾಂಕ 18.10.2000 ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಯಿತು.


ನೇಮಕಾತಿ ಪ್ರಾಧಿಕಾರವು ಅಧಿಸೂಚನೆಗಿಂತ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲು ಕಾಯುವ ಪಟ್ಟಿಯನ್ನು (Waiting List) ನಿರ್ವಹಿಸಬೇಕೆಂದು ಉದ್ದೇಶಿಸಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಈ ಕ್ರಮವನ್ನು ನಿಯಮಗಳ ಪ್ರಕಾರ ನೇಮಕಾತಿಗೆ ಅನುಮತಿಸಲಾಗಿತ್ತು.


2000 ರಲ್ಲಿ ಆರಂಭಿಕ ನೇಮಕಾತಿ ಪ್ರಕಟಣೆ ನಂತರ, ಖಾಲಿ ಹುದ್ದೆಗಳಿಗೆ ಮುಂದಿನ ಪ್ರಕಟಣೆಯನ್ನು 2008ರಲ್ಲಿ ಹೊರಡಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿಯಾಗಿ ನೇಮಕಾತಿ ಮಾಡಲಾಗಿದೆ ಎಂಬ ಕಾರಣ ನೀಡಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಜಯ್ ಕುಮಾರ್ ಮಿಶ್ರಾ ಮತ್ತಿತರ ನೌಕರರನ್ನು ಸೇವೆಯಿಂದ ವಜಾ ಗೊಳಿಸಲಾಯಿತು.


ಸೇವೆಯಿಂದ ವಜಾಗೊಳಿಸಿದ ಆದೇಶದಿಂದ ಬಾಧಿತರಾದ ಸಂಜಯ್ ಕುಮಾರ್ ಮಿಶ್ರಾ ಮತ್ತಿತರ ನೌಕರರು ಅಲಹಾಬಾದ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದರು. ಸದರಿ ರಿಟ್ ಅರ್ಜಿಯನ್ನು ಏಕ ಸದಸ್ಯ ನ್ಯಾಯ ಪೀಠವು ವಜಾಗೊಳಿಸಿತು. ಸದರಿ ಆದೇಶದ ವಿರುದ್ಧ ರಿಟ್ ಮೇಲ್ಮನವಿಯನ್ನು ಸಲ್ಲಿಸಲಾಯಿತು. ಅಲಹಾಬಾದ್ ಹೈಕೋರ್ಟ್ ನ ವಿಭಾಗೀಯ ಪೀಠವು ರಿಟ್ ಮೇಲ್ಮನವಿಯನ್ನು ವಜಾಗೊಳಿಸಿ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿಯಿತು.


ಅಲಹಾಬಾದ್ ಹೈಕೋರ್ಟಿನ ವಿಭಾಗೀಯ ಪೀಠ ಹೊರಡಿಸಿದ ಆದೇಶದಿಂದ ಭಾದಿತರಾದ ರಿಟ್ ಅರ್ಜಿದಾರರು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿಯನ್ನು ಸಲ್ಲಿಸಿದರು.


ರಿಟ್ ಅರ್ಜಿದಾರ/ಮೇಲ್ಮನವಿದಾರರ ಪರ ಈ ಕೆಳಗಿನ ವಾದ ಮಂಡಿಸಲಾಯಿತು. 2000 ನೇ ವರ್ಷದಲ್ಲಿ ಆರಂಭಿಕ ನೇಮಕಾತಿ ಪ್ರಕಟಣೆಯ ನಂತರ ಖಾಲಿ ಹುದ್ದೆಗಳಿಗೆ 2008ರಲ್ಲಿ ಮುಂದಿನ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಯಿತು ತದನಂತರ 2015ರಲ್ಲಿ ಮತ್ತೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಯಿತು. ಈ ಅವಧಿಯೊಳಗೆ ಖಂಡಿತವಾಗಿಯೂ ಖಾಲಿ ಹುದ್ದೆಗಳು ಉದ್ಭವಿಸಿವೆ. ಹಾಗಾಗಿ 12 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ ನಂತರ ವಿವಿಧ ದಿನಾಂಕಗಳಲ್ಲಿ ಮೇಲ್ಮನವಿ ಸಲ್ಲಿಸಿದವರನ್ನು ನೇಮಕ ಮಾಡಲಾಗಿದೆ.


ದಿನಾಂಕ 18.10.2000 ದಂದು ಕೇವಲ 12 ಹುದ್ದೆಗಳಿಗೆ ಪ್ರಕಟಣೆ ನೀಡಲಾಗಿದ್ದರೂ ನಂತರದ 10.6.2008 ಮತ್ತು 14.10.2015 ರಂದು ಅನುಕ್ರಮವಾಗಿ 29 ಮತ್ತು 2 ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾನ್ಯ ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದ್ದರಿಂದ ಸ್ಪಷ್ಟವಾಗುವುದೇನೆಂದರೆ 29 ಖಾಲಿ ಹುದ್ದೆಗಳು 2000 ಮತ್ತು 2008ರ ನಡುವೆ ಇದ್ದವು. ಆಗ ಮೇಲ್ಮನವಿದಾರರು ಗ್ರೂಪ್ ಡಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಅಂಶವನ್ನು ನ್ಯಾಯಪೀಠದ ಅವಗಾಹನೆಗೆ ತರಲಾಯಿತು.


ಮೇಲ್ಮನವಿದಾರರ ಪರ ವಕೀಲರು ನಸೀಮ್ ಅಹಮದ್ ಮತ್ತು ಇತರರು ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತು ಇತರರು (2011) ಈ ಪ್ರಕರಣದಲ್ಲಿ ನೀಡಿದ ತೀರ್ಪನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲಿ ನಿಯಮ 12 ನ್ನು ಪ್ರಕಟಣೆ ಮಾಡಿದ ಹುದ್ದೆಗಳಿಗಿಂತ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿಯನ್ನು ಅನುಮತಿಸುವುದಾಗಿ ವ್ಯಾಖ್ಯಾನಿಸಲಾಗಿದೆ.


ಇದನ್ನು ಸಮಂಜಸವಾದ ಅವಧಿಯಲ್ಲಿ ಮಾಡಿದ್ದರೆ ಗ್ರೂಪ್ ಡಿ ಹುದ್ದೆಗಳಿಗೆ ಸಿದ್ಧಪಡಿಸಿದ ಕಾಯುವ ಪಟ್ಟಿಯನ್ನು ಬಳಸಿಕೊಂಡು ಅದೇ ನೇಮಕಾತಿ ವರ್ಷದಲ್ಲಿ ಅಥವಾ ತಕ್ಷಣದ ನಂತರದ ವರ್ಷದಲ್ಲಿ ಅಂತಹ ಖಾಲಿ ಹುದ್ದೆಗಳು ಉದ್ಭವಿಸಿದರೆ ಪ್ರಕಟಣೆ ಮಾಡಲಾದ ಖಾಲಿ ಹುದ್ದೆಗಳಿಗಿಂತ ಹೆಚ್ಚಿನ ನೇಮಕಾತಿಗಳನ್ನು ಮಾಡಬಹುದು ಎಂದು ನ್ಯಾಯ ಪೀಠವು ಅಭಿಪ್ರಾಯಪಟ್ಟಿದೆ.


ಮೇಲ್ಮನವಿದಾರರ ಪರ ಮಂಡಿಸಲಾದ ಈ ವಾದವನ್ನು ಸಮ್ಮತಿಸಿದ ನ್ಯಾಯಪೀಠವು ನಸೀಮ್ ಅಹಮದ್ ಪ್ರಕರಣದ ಮತ್ತು ಈ ಪ್ರಕರಣದ ಸ್ಥಿತಿ ಬಹುತೇಕ ಒಂದೇ ಆಗಿದೆ ಎಂದು ಅಭಿಪ್ರಾಯ ಪಟ್ಟಿತು. ಆದ್ದರಿಂದ ನಿಯಮ 12 ಸಂಪೂರ್ಣವಾಗಿ ಅನ್ವಯಿಸುತ್ತದೆ. ಮೇಲ್ಮನವಿದಾರರನ್ನು 12.2.2001 ಮತ್ತು 3.7.2001 ರಂದು ನೇಮಕ ಮಾಡಲಾಯಿತು. ಅವರ ಪೈಕಿ ಇಬ್ಬರಿಗೆ ಲಿಪಿಕ ವೃಂದದ ಹುದ್ದೆಗಳಿಗೆ ತಾತ್ಕಾಲಿಕ ಭಡ್ತಿಗಳನ್ನು ನೀಡಲಾಯಿತು.


8 ವರ್ಷಗಳ ನಂತರ, ಖಾಲಿ ಹುದ್ದೆಗಳಿಗಿಂತ ಹೆಚ್ಚಿನ ನೇಮಕಾತಿಗಳನ್ನು ಮಾಡಲಾಗಿದೆ ಎಂಬ ಕಾರಣಕ್ಕಾಗಿ ಅವರನ್ನು ವಜಾಗೊಳಿಸಲಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು. ಹೀಗಾಗಿ, "ವಜಾಗೊಳಿಸುವಿಕೆಯನ್ನು ನ್ಯಾಯಸಮ್ಮತವಲ್ಲ ಎಂದು ನಾವು ಕಂಡುಕೊಳ್ಳಲು ಸಾಧ್ಯವಿಲ್ಲ" ಎಂಬ ಅಲಹಾಬಾದ್ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯ ಪೀಠದ ಆದೇಶವನ್ನು ಹಾಗೂ ಸದರಿ ಆದೇಶವನ್ನು ಅನುಸಮರ್ತಿಸಿದ ವಿಭಾಗೀಯ ಪೀಠದ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿತು.


ವಿಭಾಗೀಯ ಮತ್ತು ಏಕ ನ್ಯಾಯಾಧೀಶ ಪೀಠವು ಮೇಲ್ಮನವಿದಾರರ ಮನವಿಯನ್ನು ಪರಿಗಣಿಸದೆ ತಪ್ಪು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ. ಮೇಲ್ಮನವಿ ಸಲ್ಲಿಸಿದವರು ಸುಮಾರು 17 ವರ್ಷಗಳಿಂದ ನಿರುದ್ಯೋಗಿಗಳಾಗಿದ್ದಾರೆ ಎಂದು ನ್ಯಾಯಾಲಯವು ಗಮನಿಸಿದೆ.


ಇದಲ್ಲದೆ, ಮೇಲ್ಮನವಿ ಸಲ್ಲಿಸಿದವರಲ್ಲಿ ಇಬ್ಬರು ಈಗಾಗಲೇ 60 ವರ್ಷ ದಾಟಿದ್ದಾರೆ, ಆದರೆ ಉಳಿದವರಿಗೆ ನಿವೃತ್ತಿ ಹೊಂದಲು ಸ್ವಲ್ಪ ಸಮಯ ಉಳಿದಿದೆ. ಎಲ್ಲಾ ಮೇಲ್ಮನವಿದಾರರು ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ, ಇನ್ನೂ ನಿವೃತ್ತಿ ವಯಸ್ಸನ್ನು ಪೂರ್ಣಗೊಳಿಸದ ಮೇಲ್ಮನವಿದಾರರನ್ನು ಅಂಬೇಡ್ಕರ್ ನಗರದ ಜಿಲ್ಲಾ ನ್ಯಾಯಾಧೀಶರ ಹುದ್ದೆಯಲ್ಲಿ ಅಸ್ತಿತ್ವದಲ್ಲಿರುವ IV ನೇ ದರ್ಜೆಯ ಖಾಲಿ ಹುದ್ದೆಗಳಲ್ಲಿ ನಿಯುಕ್ತಿಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತು.


ಅಸ್ತಿತ್ವದಲ್ಲಿರುವ ಯಾವುದೇ ಖಾಲಿ ಹುದ್ದೆಗಳಿಲ್ಲದಿದ್ದರೆ, ಅವರನ್ನು ಸೂಪರ್‌ನ್ಯೂಮರರಿ ಹುದ್ದೆಯಲ್ಲಿ ನೇಮಿಸಬೇಕು, ಇದನ್ನು ಭವಿಷ್ಯದ ಖಾಲಿ ಹುದ್ದೆಗಳಿಗೆ ಸರಿಹೊಂದಿಸಲಾಗುತ್ತದೆ ಅಥವಾ ಅವರ ನಿವೃತ್ತಿಯ ನಂತರ ನಿಲ್ಲಿಸಲಾಗುತ್ತದೆ, ಯಾವುದು ಮೊದಲು ಸಂಭವಿಸಿದರೂ ಅದನ್ನು ಪಾಲಿಸಲಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿತು. ನೇಮಕಗೊಂಡ ಮೇಲ್ಮನವಿದಾರರನ್ನು ಯಾವುದೇ ಸೇವಾ ಹಿರಿತನವಿಲ್ಲದೆ ಮುಂದುವರಿಸಲಾಗುತ್ತದೆ. ಆದರೆ ಪಿಂಚಣಿಗೆ ಅರ್ಹತಾ ಸೇವೆಯನ್ನು ನಿರ್ಧರಿಸಲು ಈಗಾಗಲೇ ಸೇವೆಯಲ್ಲಿ ಕಳೆದ ಅವಧಿಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಯಾವುದೇ ಸಂದರ್ಭದಲ್ಲಿ ಕನಿಷ್ಠ ಪಿಂಚಣಿ ನೀಡಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.


ಮೇಲ್ಮನವಿದಾರರು ಕೆಲಸ ಮಾಡದ 17 ವರ್ಷಗಳ ಮಧ್ಯಂತರ ಅವಧಿಯನ್ನು ಕಾಲ್ಪನಿಕ ಸೇವೆಯಾಗಿ ಅಥವಾ ಪಿಂಚಣಿಗೆ ಅರ್ಹತಾ ಸೇವೆಯನ್ನು ಲೆಕ್ಕಹಾಕಲು ಪರಿಗಣಿಸಲು ಅರ್ಹರಾಗಿರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಪ್ರಕರಣ: ಸಂಜಯ್ ಕುಮಾರ್ ಮಿಶ್ರಾ ಮತ್ತಿತರರು ವಿರುದ್ಧ ಜಿಲ್ಲಾ ನ್ಯಾಯಾಧೀಶರು, ಅಂಬೇಡ್ಕರ್ ನಗರ (ಉತ್ತರ ಪ್ರದೇಶ)

ಸುಪ್ರೀಂ ಕೋರ್ಟ್, ದಿನಾಂಕ 17.10.2025


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ದಕ್ಷಿಣ ಕನ್ನಡ


Ads on article

Advertise in articles 1

advertising articles 2

Advertise under the article