
Suit against Trust | ಟ್ರಸ್ಟ್ ವಿರುದ್ಧ ದಾವೆ: ಯಾವ ಕ್ರಮ ಅನುಸರಿಸಬೇಕು?- ಇಲ್ಲಿದೆ ಸಮಗ್ರ ಮಾಹಿತಿ
ಟ್ರಸ್ಟ್ ವಿರುದ್ಧ ದಾವೆ: ಯಾವ ಕ್ರಮ ಅನುಸರಿಸಬೇಕು?- ಇಲ್ಲಿದೆ ಸಮಗ್ರ ಮಾಹಿತಿ
ಸಾರ್ವಜನಿಕ ಟ್ರಸ್ಟ್ ಗೆ ಸಂಬಂಧಪಟ್ಟಂತೆ ದಾವೆ ಹೂಡುವಾಗ ಅನುಸರಿಸಬೇಕಾದ ಕಾರ್ಯವಿಧಾನಗಳು
1908 ರ ಸಿವಿಲ್ ಪ್ರೊಸೀಜರ್ ಕೋಡ್ (CPC)ನ ಸೆಕ್ಷನ್ 92 ಸಾರ್ವಜನಿಕ ದತ್ತಿ (Public Trust) ಅಥವಾ ಧಾರ್ಮಿಕ ಟ್ರಸ್ಟ್‌ಗಳೊಂದಿಗೆ ವ್ಯವಹರಿಸುತ್ತದೆ ಮತ್ತು ಟ್ರಸ್ಟ್ ನಿಯಮಗಳ ಉಲ್ಲಂಘನೆ, ಟ್ರಸ್ಟ್ ನ ಆಡಳಿತ ಅಥವಾ ಟ್ರಸ್ಟ್ ನಿರ್ವಹಣೆಗೆ ಸಂಬಂಧಿಸಿದ ನಿರ್ದೇಶನಗಳಿಗೆ ಸಂಬಂಧಿಸಿದಂತೆ ದಾವೆಗಳನ್ನು ಸಲ್ಲಿಸಲು ವಿಶೇಷ ಕಾರ್ಯವಿಧಾನವನ್ನು ಒದಗಿಸುತ್ತದೆ.
CPC ಯ ಸೆಕ್ಷನ್ 92 ರ ಅಡಿಯಲ್ಲಿ ದಾವೆ ಹೂಡಲು ಹಂತ-ಹಂತದ ಕಾರ್ಯವಿಧಾನ ಇಲ್ಲಿದೆ:
1. ದಾವೆಯ ಸ್ವರೂಪ
ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ರಚಿಸಲಾದ ಸಾರ್ವಜನಿಕ ಟ್ರಸ್ಟ್‌ನ ನಿಯಮಗಳ ಉಲ್ಲಂಘನೆ ಅಥವಾ ಅಂತಹ ಟ್ರಸ್ಟ್‌ನ ಆಡಳಿತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ನಿರ್ದೇಶನಗಳನ್ನು ಪಡೆಯುವ ವಿಷಯಗಳನ್ನು ವಾದಪತ್ರವು ಒಳಗೊಂಡಿರಬೇಕು.
ಅಂತಹ ದಾವೆಗಳನ್ನು ಸಾಮಾನ್ಯವಾಗಿ ಈ ಕೆಳಗಿನ ಪರಿಹಾರ ಕೋರಿ ಸಲ್ಲಿಸಲಾಗುತ್ತದೆ.
ಟ್ರಸ್ಟಿಗಳ ತೆಗೆದುಹಾಕುವಿಕೆ, ಹೊಸ ಟ್ರಸ್ಟಿಗಳ ನೇಮಕಾತಿ, ಟ್ರಸ್ಟ್‌ಗಾಗಿ ಯೋಜನೆಯ ಇತ್ಯರ್ಥ, ಸರಿಯಾದ ಆಡಳಿತಕ್ಕಾಗಿ ನಿರ್ದೇಶನಗಳು
2. ಯಾರು ದಾವೆ ಹೂಡಬಹುದು?
ಟ್ರಸ್ಟ್‌ನಲ್ಲಿ ಆಸಕ್ತಿ ಹೊಂದಿರುವ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ದಾವೆಯನ್ನು ಹೂಡಬೇಕು. ಇದರರ್ಥ ಫಲಾನುಭವಿಗಳು ಅಥವಾ ಟ್ರಸ್ಟ್‌ನಲ್ಲಿ ನಿಜವಾದ ಮತ್ತು ಗಣನೀಯ ಆಸಕ್ತಿ ಹೊಂದಿರುವ ವ್ಯಕ್ತಿಗಳಾಗಿರಬೇಕು, ಅಪರಿಚಿತರಲ್ಲ. ದಾವೆ ಹೂಡುವ ಮೊದಲು ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ. ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಅವಶ್ಯಕತೆ ಮತ್ತು ನ್ಯಾಯಾಲಯದ ಅನುಮತಿಯು ಕ್ಷುಲ್ಲಕ ಅಥವಾ ಅನಗತ್ಯ ದಾವೆಯನ್ನು ತಡೆಗಟ್ಟುವ ಉದ್ದೇಶ ಹೊಂದಿದೆ.
3. ನ್ಯಾಯಾಲಯದ ಅನುಮತಿ ಪಡೆಯುವುದು ಅವಶ್ಯಕ
ಮೂಲ ನ್ಯಾಯವ್ಯಾಪ್ತಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ (ಸಾಮಾನ್ಯವಾಗಿ ಪ್ರಧಾನ ಜಿಲ್ಲಾ ನ್ಯಾಯಾಲಯ) ಅನುಮತಿ ಕೋರಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿಯನ್ನು ಸಂಕೀರ್ಣ ಪ್ರಕರಣ (ಮೀಸಲೇನಿಯಸ್ ಕೇಸ್) ಎಂದು ನೋಂದಾಯಿಸಲಾಗುವುದು. ಅರ್ಜಿಯು ಈ ಕೆಳಗಿನವುಗಳನ್ನು ನಿರ್ದಿಷ್ಟಪಡಿಸಬೇಕು: ಟ್ರಸ್ಟ್‌ನ ನಿಯಮ ಉಲ್ಲಂಘನೆ ಅಥವಾ ನ್ಯಾಯಾಲಯದ ನಿರ್ದೇಶನಗಳ ಅಗತ್ಯತೆ. ಟ್ರಸ್ಟ್‌ನಲ್ಲಿ ಅರ್ಜಿದಾರರ ಹಿತಾಸಕ್ತಿಯ ಪುರಾವೆಗಳು. ನ್ಯಾಯಾಲಯವು ಟ್ರಸ್ಟಿಗಳಿಗೆ ನೋಟಿಸ್ ನೀಡಬಹುದು ಮತ್ತು ಅನುಮತಿ ನೀಡುವ ಮೊದಲು ಅವರ ವಿಚಾರಣೆಯನ್ನು ನಡೆಸಬಹುದು. ಪ್ರತ್ಯರ್ಜಿದಾರರಿಗೂ ಅವಶ್ಯವಿದ್ದಲ್ಲಿ ನೋಟಿಸು ನೀಡಬಹುದು. ಟ್ರಸ್ಟ್‌ನ ಹಿತಾಸಕ್ತಿಯನ್ನು ಕಾಪಾಡಲು ದಾವೆಯನ್ನು ಹೂಡಲಾಗಿದೆ ಎಂದು ನ್ಯಾಯಾಲಯವು ತೃಪ್ತಿಪಟ್ಟರೆ, ದಾವೆಗೆ ಅನುಮತಿ ನೀಡಲಾಗುತ್ತದೆ.
4. ನ್ಯಾಯಾಲಯದ ವಿಚಾರಣೆಗಳು
ದಾವೆಯು ನಿಯಮಿತ ಸಿವಿಲ್ ದಾವೆಯಂತೆ ಮುಂದುವರಿಯುತ್ತದೆ. ಪ್ರತಿವಾದಿಗಳ ಲಿಖಿತ ಹೇಳಿಕೆ, ವಿವಾದಾಂಶಗಳ ರಚನೆ, ಸಾಕ್ಷಿ ವಿಚಾರಣೆ, ಪುರಾವೆಗಳು, ಉಭಯ ಪಕ್ಷಕಾರರ ವಾದಗಳನ್ನು ಆಲಿಸಿದ ಬಳಿಕ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿ ನ್ಯಾಯಾಲಯವು ತೀರ್ಪು ನೀಡುತ್ತದೆ.
ಟ್ರಸ್ಟ್ ಸಾರ್ವಜನಿಕ ಮತ್ತು ಧಾರ್ಮಿಕ ದತ್ತಿ ಆಗಿರಬೇಕು. ನ್ಯಾಯಾಂಗ ಹಸ್ತಕ್ಷೇಪದ ಅವಶ್ಯಕತೆಯಿರಬೇಕು. ನ್ಯಾಯಾಲಯವು ಒಂದು ಯೋಜನೆಯನ್ನು ರೂಪಿಸಬಹುದು, ನಿರ್ವಾಹಕರನ್ನು ನೇಮಿಸಬಹುದು. ಅಥವಾ ಸರಿಯಾದ ಟ್ರಸ್ಟ್ ನಿರ್ವಹಣೆಗೆ ಅಗತ್ಯವಾದ ಯಾವುದೇ ಆದೇಶವನ್ನು ನೀಡಬಹುದು.
5. ತೀರ್ಪು ಮತ್ತು ಅಮಲ್ಜಾರಿ
ನ್ಯಾಯಾಲಯವು ಅಗತ್ಯ ನಿರ್ದೇಶನಗಳೊಂದಿಗೆ ತೀರ್ಪು ನೀಡುತ್ತದೆ. ತೀರ್ಪು ಉಭಯ ಪಕ್ಷಕಾರರಿಗೆ ಬದ್ಧ ಪಡಿಸತಕ್ಕದ್ದಾಗಿದೆ ಮತ್ತು ಜಾರಿಗೊಳಿಸಬಹುದಾಗಿದೆ. ಅನೇಕ ಸಂದರ್ಭಗಳಲ್ಲಿ, ನ್ಯಾಯಾಲಯ ಹೊರಡಿಸಿದ ನಿರ್ದೇಶನಗಳ ಜಾರಿಗಾಗಿ ಮೇಲ್ವಿಚಾರಣೆ ಮಾಡಲು ನ್ಯಾಯಾಲಯವು ನ್ಯಾಯವ್ಯಾಪ್ತಿಯನ್ನು ಉಳಿಸಿಕೊಳ್ಳಬಹುದು (ಉದಾ, ಯೋಜನೆಗಳ ಅನುಮೋದನೆ).
ಟ್ರಸ್ಟ್ ಸಂಬಂಧಿತ ಪ್ರಕರಣಗಳಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ನೀಡಿದ ಸಿದ್ಧ ನಿರ್ಣಯಗಳು.
1. ಆರ್‌ಎಂ ನಾರಾಯಣ ಚೆಟ್ಟಿಯಾರ್ ವಿ. ಎನ್. ಲಕ್ಷ್ಮಣನ್ ಚೆಟ್ಟಿಯಾರ್ (1991) - ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ ಎಂದು ಪುನರುಚ್ಚರಿಸಿದೆ.
2. ಚರಣ್ ಸಿಂಗ್ ವಿ.ದರ್ಶನ್ ಸಿಂಗ್ (1975) - ಸೆಕ್ಷನ್ 92 ರ ಅಡಿಯಲ್ಲಿ ಪರಿಹಾರಗಳ ಪ್ರಕಾರಗಳನ್ನು ಸ್ಪಷ್ಟಪಡಿಸಲಾಗಿದೆ.
6. ಸೆಕ್ಷನ್ 92 ರಡಿ ಒಳಪಡದ ದಾವೆಗಳು
ಖಾಸಗಿ ಟ್ರಸ್ಟ್‌ಗಳು ವೈಯಕ್ತಿಕ ಹಕ್ಕುಗಳಿಗಾಗಿ ಹೂಡಿದ ದಾವೆಗಳು, (ಆಸ್ತಿಯ ಮರುಸ್ಥಾಪನೆ), ಹಾನಿ ಅಥವಾ ಪರಿಹಾರಕ್ಕಾಗಿ ದಾವೆಗಳು, ಒಬ್ಬ ವ್ಯಕ್ತಿಯಿಂದ ಸಲ್ಲಿಸಲಾದ ದಾವೆಗಳು (ಅನುಮತಿ ಇಲ್ಲದೆ)
ಮೂಲ ನ್ಯಾಯವ್ಯಾಪ್ತಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಬೇಕು. ಸಾಮಾನ್ಯವಾಗಿ, ಇದರರ್ಥ ಟ್ರಸ್ಟ್ ಇರುವ ಅಥವಾ ಕಾರ್ಯನಿರ್ವಹಿಸುವ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ದಾವೆಯನ್ನು ಸಲ್ಲಿಸಬೇಕು.
ಟ್ರಸ್ಟ್ ಗೆ ಸಂಬಂಧಿತ ದಾವೆಗಳನ್ನು ಹೂಡುವ ಮೊದಲು ಅನುಸರಿಸಬೇಕಾದ ನಿಯಮಗಳನ್ನು ಕರ್ನಾಟಕ ಸಿವಿಲ್ ರೂಲ್ಸ್ ಆಫ್ ಪ್ರಾಕ್ಟೀಸ್ ನ ಅಧ್ಯಾಯ II (ಎ) ನಿಯಮ 16 (ಎ) ಯಲ್ಲಿ ವಿವರಿಸಲಾಗಿದೆ.