ನಾಗರಿಕ ಹಕ್ಕುಗಳ ನಿರ್ದೇಶನಾಲಯಕ್ಕೆ ಸ್ವಯಂಪ್ರೇರಿತ ತನಿಖೆಯ ಅಧಿಕಾರವಿಲ್ಲ: ಜಾತಿ ಪ್ರಮಾಣಪತ್ರ ಸಿಂಧುತ್ವದ ಪರಿಶೀಲನೆ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು
ನಾಗರಿಕ ಹಕ್ಕುಗಳ ನಿರ್ದೇಶನಾಲಯಕ್ಕೆ ಸ್ವಯಂಪ್ರೇರಿತ ತನಿಖೆಯ ಅಧಿಕಾರವಿಲ್ಲ: ಜಾತಿ ಪ್ರಮಾಣಪತ್ರ ಸಿಂಧುತ್ವದ ಪರಿಶೀಲನೆ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು
ಜಾತಿ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಬಗ್ಗೆ ನಾಗರಿಕ ಹಕ್ಕುಗಳ ನಿರ್ದೇಶನಾಲಯಕ್ಕೆ ಸ್ವಯಂಪ್ರೇರಿತ ತನಿಖೆ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವತ್ತರಾಗಿರುವ ಹಾವೇರಿ ಮೂಲದ ಟಿ.ಎಚ್. ಹೊಸಮನಿ ಅವರು ನಾಗರಿಕ ಹಕ್ಕುಗಳ ನಿರ್ದೇಶನಾಲಯದ ಸ್ವಯಂಪ್ರೇರಿತ ತನಿಖೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅವರು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ನ್ಯಾಯಪೀಠ, ಹೊಸಮನಿ ಅವರ ಯಾವುದಾದರೂ ಸವಲತ್ತುಗಳನ್ನು ತಡೆಹಿಡಿದಿದ್ದರೆ, ಯಾವುದೇ ವಿಳಂಬ ಮಾಡದೆ ಕೂಡಲೇ ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿದೆ.
'ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಮಾಡಿದ ಶಿಫಾರಸಿನ ನಂತರ ಮಾತ್ರ ತನಿಖೆ ಕೈಗೊಳ್ಳುವ ಕುರಿತು ನಾಗರಿಕ ಹಕ್ಕುಗಳ ಜಾರಿ ಕೋಶದ ಅಧಿಕಾರದ ಬಗ್ಗೆ ಕಾನೂನಿನಲ್ಲಿ ಗೊಂದಲವಿದೆ. ಆದ್ದರಿಂದ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕೋಶದ ಕಾರ್ಯಗಳು ಮತ್ತು ಪ್ರಕ್ರಿಯೆಗಳು ಹಾಗೂ ಆ ನಂತರದ ಎಲ್ಲಾ ಕ್ರಮಗಳು ಕಾನೂನಿನಲ್ಲಿ ಅನೂರ್ಜಿತವಾಗುತ್ತವೆ,'' ಎಂದು ನ್ಯಾಯಪೀಠ ಹೇಳಿದೆ.