ಕಾವೇರಿ ತಂತ್ರಾಂಶ ಪರಿಷ್ಕರಿಸಲು ಹೈಕೋರ್ಟ್ ನಿರ್ದೇಶನ: ಕೋರ್ಟ್ ತೀರ್ಪು, ಡಿಕ್ರಿಗಳ ಬಗ್ಗೆ ನೋಂದಣಿ ಗೊಂದಲ ನಿವಾರಣೆ?
ಕಾವೇರಿ ತಂತ್ರಾಂಶ ಪರಿಷ್ಕರಿಸಲು ಹೈಕೋರ್ಟ್ ನಿರ್ದೇಶನ: ಕೋರ್ಟ್ ತೀರ್ಪು, ಡಿಕ್ರಿಗಳ ಬಗ್ಗೆ ನೋಂದಣಿ ಗೊಂದಲ ನಿವಾರಣೆ?
ಸದ್ಯ ಚಾಲ್ತಿಯಲ್ಲಿರುವ 'ಕಾವೇರಿ 2.0' ತಂತ್ರಾಂಶ ಕಾನೂನು ನಿರ್ವಾತವನ್ನು ಸೃಷ್ಟಿಸುತ್ತಿದೆ. ಹಾಗಾಗಿ, ಅದರಲ್ಲಿ 'ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ' ಎಂಬ ಹೊಸ ಕಾರ್ಯ ನಿರ್ವಹಣಾ ಶೀರ್ಷಿಕೆ ಸೇರ್ಪಡೆ ಮಾಡಿ ಪರಿಷ್ಕರಣೆ ಮಾಡುವಂತೆ ಹೈಕೋರ್ಟ್, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಕಂದಾಯ ಇಲಾಖೆಗೆ ನಿರ್ದೇಶನ ನೀಡಿದೆ.
ಅಲ್ಲದೆ, ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್‌ಜಿ). ಸಹಯೋಗದೊಂದಿಗೆ ಈ ಕಾರ್ಯ ಮಾಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಮೂಲ ಮೊಕದ್ದಮೆಯಲ್ಲಿ ಅಂಗೀಕರಿಸಿದ ರಾಜಿ ಅಂತಿಮ ತೀರ್ಪಿನ ನಿಯಮಗಳ ಪ್ರಕಾರ ತಮ್ಮ ಹೆಸರಿಗೆ ಖಾತಾ ವರ್ಗಾವಣೆ ಮಾಡುವಂತೆ ಕೋರಿ ಬಂಟ್ವಾಳ ತಾಲೂಕಿನ ಗಿಲ್ಬರ್ಟ್ ವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ, ಈ ನಿರ್ದೇಶನ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ಕೋರ್ಟ್, "ಸದ್ಯ ಕಾವೇರಿ 2.0 ತಂತ್ರಾಂಶ ಮಾರಾಟ, ಗಿಫ್ಟ್ ಡೀಡ್, ಅಡಮಾನ, ಪಿತ್ರಾರ್ಜಿತ ಆಸ್ತಿ ಕುರಿತ ವಹಿವಾಟುಗಳನ್ನು ಆಧರಿಸಿದೆ. ಅದರಲ್ಲಿ ಆಸ್ತಿ ' ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ. ಜತೆಗೆ, ಇದು ನಾಗರಿಕರು ನ್ಯಾಯಾಲಯಗಳು ನಿರ್ಣಾಯಕವಾಗಿ ನಿರ್ಧರಿಸಿದ ವಿಷಯಗಳಿಗೆ ಹಲವು ಅನುಮೋದನೆ, ಪರಿಶೀಲನೆ ಮತ್ತು ಪ್ರಮಾಣೀಕರಣಗಳನ್ನು ಪಡೆಯಬೇಕೆಂದು ಸೂಚಿಸುತ್ತದೆ. ಹಾಗಾಗಿ, ತಂತ್ರಾಂಶ, ಸ್ವಲ್ಪ ಗೊಂದಲ ಉಂಟು ಮಾಡುತ್ತಿರುವುದರಿಂದ ಅದರ ಪರಿಷ್ಕರಣೆ ಅತ್ಯಗತ್ಯವಾಗಿದೆ,'' ಎಂದು ಹೇಳಿದೆ.
ಅಲ್ಲದೆ, "ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 128ರ ಉದ್ದೇಶ ನಿರಶನಗೊಳಿಸುತ್ತದೆ. ಇದು ,ಉಭಯ ಪಕ್ಷಗಾರರು ಕ್ರಿಯೆ ಅಥವಾ ಕಾನೂನಿನ ಕಾರ್ಯಾಚರಣೆಗಳ ಮೂಲಕ ಎಲ್ಲಾ ಹಕ್ಕುಗಳ ಸ್ವಾಧೀನಗಳನ್ನು ಕಂದಾಯ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಅನುಗುಣವಾಗಿ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಗತ್ಯವಿರುವ ಸೆಕ್ಷನ್ 135 ಸಹ ಉಲ್ಲಂಘಿಸುತ್ತದೆ,'' ಎಂದು ನ್ಯಾಯಾಲಯ ಹೇಳಿದೆ.
"ನ್ಯಾಯಾಂಗ ತೀರ್ಪು ಮತ್ತು ಆಡಳಿತಾತ್ಮಕ ಜಾರಿಗೊಳಿಸುವಿಕೆಯ ನಡುವಿನ ಸಮನ್ವಯ ಪುನರ್ ಸ್ಥಾಪಿಸಲು ಮತ್ತು ಸಿವಿಲ್ ಕೋರ್ಟ್ ತೀರ್ಪುಗಳು ರಾಜ್ಯದ ಆದಾಯ ಮೂಲಸೌಕರ್ಯದಲ್ಲಿ ಡಿಜಿಟಲ್ ಸ್ವಯಂಚಾಲಿತವಾಗಿ ಮನ್ನಣೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ದೇಶನ ನೀಡಲಾಗುತ್ತದೆ,'' ಎಂದು ನ್ಯಾಯಾಲಯ ಹೇಳಿದೆ.